” ಗೋಸೇವೆಯಲ್ಲಿ ಭಾಗಿಯಾಗುವುದು ಬಾಳಿನ ಭಾಗ್ಯ ” : ಸುಜಲಾ ಭಟ್ ಬೆಂಗಳೂರು

ಮಾತೃತ್ವಮ್

 

” ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆ ನಮಗೆ ಪರಮಪೂಜ್ಯಳು. ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಗೋಮಾತೆಯನ್ನೂ ಮನೆಯೊಳಗೆ ಕರೆತಂದು ಪೂಜಿಸುವ ಸಂಸ್ಕೃತಿ ನಮ್ಮದು. ಇಂದು ಪೇಟೆ ಜೀವನದ ಧಾವಂತದ ನಡುವೆ ಮನೆಗಳಲ್ಲಿ ಗೋವನ್ನು ಸಾಕುವುದು ಕಷ್ಟಕರ. ಆದರೆ ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ಒದಗಿ ಬಂದಿರುವುದು ಬಾಳಿನ ಭಾಗ್ಯ ಎಂದು ಭಾವಿಸುತ್ತೇನೆ ” ಎಂದವರು ಮೂಲತಃ ಕಾಸರಗೋಡಿನ ದೊಡ್ಡಮಾಣಿಯವರಾದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಮಹಾಲಿಂಗ ಭಟ್ ಅವರ ಪತ್ನಿ ಸುಜಲಾ .

ಮುಳ್ಳೇರಿಯ ಮಂಡಲ ಕುಂಬಳೆ ಸಮೀಪದ ಹಿಳ್ಳೆಮನೆ ಮಹಾಲಿಂಗ ಭಟ್ , ಗಂಗಮ್ಮ ದಂಪತಿಗಳ ಪುತ್ರಿ ಸುಜಲಾ ಭಟ್ .

ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರು ಗಿರಿನಗರದಲ್ಲಿ ನಡೆಯುವ ಚಾತುರ್ಮಾಸ್ಯಗಳ ಸಂದರ್ಭದಲ್ಲಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸುಜಲಾ ಭಟ್ ಶ್ರೀಗುರುಗಳ ನಿರ್ದೇಶಾನುಸಾರವಾಗಿ ಪಠಿಸಲು ನೀಡಿರುವ ಸ್ತೋತ್ರಗಳ ಪಠಣದ ಜೊತೆಯಲ್ಲಿ ಕುಂಕುಮಾರ್ಚನೆ, ಶ್ರೀಗುರುಗಳ ಪ್ರವಚನಗಳ ಶ್ರವಣವನ್ನೂ ಮಾಡುತ್ತಾರೆ.

” ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾದೆ. ಗುರಿ ತಲುಪುವ ಬಹಳಷ್ಟು ಮೊತ್ತವನ್ನು ನಾವೇ ಭರಿಸಿದ್ದೇವೆ. ಗೋಮಾತೆಯ ಸೇವೆಯನ್ನು ಈಗಲೂ ಮುಂದುವರಿಸುತ್ತಿದ್ದೇನೆ , ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ನಮ್ಮಂತಹವರಿಗೆ ದೊರಕುವ ಸೌಭಾಗ್ಯ ” ಎನ್ನುವ ಇವರು ಪ್ರಸ್ತುತ ಅನ್ನಪೂರ್ಣೇಶ್ವರಿ ವಲಯದ ಮುಷ್ಟಿ ಭಿಕ್ಷಾ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸುಜಲಾ ಭಟ್ ಅವರ ಪುಟಾಣಿ ಮೊಮ್ಮಕ್ಕಳಿಗೂ ಶ್ರೀಮಠ, ಶ್ರೀಗುರುಗಳು, ಗೋಮಾತೆ ಎಂದರೆ ಶ್ರದ್ಧಾಭಕ್ತಿ ಇದೆ. ಇತ್ತೀಚೆಗೆ ಗೋಸ್ವರ್ಗದಲ್ಲಿ ಶ್ರೀಗುರುಗಳಿಂದ ಬಾಗಿನ ಸ್ವೀಕಾರ ಮಾಡಿರುವ ಸುಜಲಾ ಭಟ್ ಅವರ ಎಲ್ಲಾ ಕಾರ್ಯಗಳಿಗೂ ಮನೆಯವರ ಮತ್ತು ಮಕ್ಕಳ ಸಂಪೂರ್ಣ ಸಹಕಾರವಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *