ಸುರಭಿ ಸೇವೆಯ ಸಾರ್ಥಕ ಕ್ಷಣಗಳು : ಹೇಮಾವತಿ ಹೆಗಡೆ

ಮಾತೃತ್ವಮ್

 

” ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು. ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿಯಿದೆ. ಇತ್ತೀಚೆಗಂತೂ ಶ್ರೀಗುರುಗಳ ಪ್ರೇರಣೆಯಿಂದ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಮತ್ತೆ ಒದಗಿ ಬಂತು. ಗೋಮಾತೆಯ ಸೇವೆ ಬದುಕಿನ ಸಾರ್ಥಕ ಕ್ಷಣಗಳು ಎಂದೇ ನನ್ನ ಅನಿಸಿಕೆ ” ಎನ್ನುತ್ತಾ ತಮ್ಮ ಗೋಪ್ರೇಮ ಮೆರೆದವರು ಮೂಲತಃ ಸಿದ್ಧಾಪುರ ತಾಲೂಕು ಅಲವಳ್ಳಿಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ರಾಜಮಲ್ಲೇಶ್ವರ ವಲಯ ನಿವಾಸಿಗಳಾಗಿರುವ ಬಿ.ಎಸ್. ಹೆಗಡೆಯವರ ಪತ್ನಿ ಹೇಮಾವತಿ ಹೆಗಡೆ.

ಯಲ್ಲಾಪುರ ತಾಲೂಕು ಮಂಚಿಕೇರಿಯ ವೆಂಕಟ್ರಮಣ ಭಟ್, ಅನಸೂಯಾ ದಂಪತಿಗಳ ಪುತ್ರಿಯಾದ ಇವರು ರಾಜ ಮಲ್ಲೇಶ್ವರ ವಲಯದ ಮುಷ್ಠಿ ಭಿಕ್ಷಾ ಸಂಚಾಲಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಗುರುಪೀಠದ ಮೇಲೆ ಅಪಾರ ನಂಬಿಕೆ ಶ್ರದ್ಧೆಗಳಿರುವ ಹೇಮಾವತಿ ಹೆಗಡೆಯವರು ಯಾವುದೇ ಕಾರ್ಯವನ್ನು ಆರಂಭಿಸುವಾಗಲೂ ಶ್ರೀಗುರುಚರಣಗಳನ್ನು ಸ್ಮರಿಸಿಯೇ ಆರಂಭಿಸುವವರು. ಶ್ರೀಗುರುಗಳ ಕೃಪೆಯಿಂದ ತಮ್ಮ ಜೀವನದಲ್ಲಿ ನಡೆದ ಪವಾಡ ಸದೃಶ ಘಟನೆಯೊಂದನ್ನು ಈ ರೀತಿಯಾಗಿ ವಿವರಿಸಿದ್ದಾರೆ.

” ಹತ್ತು ವರ್ಷಗಳ ಹಿಂದೆ ನಡೆದ ಘಟನೆಯಿದು. ಮಗನ ಉಪನಯನವನ್ನು ಊರಿನಲ್ಲಿ ಮಾಡುವುದೆಂದು ತೀರ್ಮಾನಿಸಿದ್ದೆವು. ಅದಕ್ಕೂ ಮೊದಲು ಹೊಸನಗರದ ಶ್ರೀರಾಮಚಂದ್ರಾಪುರ ಮಠಕ್ಕೆ ತೆರಳಿ ಶ್ರೀಗುರುಗಳ ಆಶೀರ್ವಾದ ಪಡೆಯಲೆಂದು ಹೋಗಿದ್ದೆವು.‌ ಅಂದು ಶ್ರೀಗುರುಗಳು ಮಗಳ ತಲೆಗೆ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದ್ದರು.‌ ಮುಂದೆ ಎರಡೇ ದಿನದಲ್ಲಿ ಮನೆಯಲ್ಲಿ ಕಾರ್ಯಕ್ರಮ ನಡೆಯಿತು. ‌ಅದರ ಮರುದಿನ ನನ್ನ ಮಗಳು ಅಣ್ಣನ ಇಬ್ಬರು ಮಕ್ಕಳ ಜೊತೆ ಸಮೀಪದ ನದಿಗೆ ಕಾರು ತೊಳೆಯಲೆಂದು ಹೋಗಿ ಅವರ ಜೊತೆ ನೀರಿನ ಸುಳಿಯಲ್ಲಿ ಸಿಲುಕಿದಳು. ಶ್ರೀಗುರುಗಳ ಪವಾಡವೇನೋ ನಮ್ಮ ಮಗಳು ಪ್ರಾಣಾಪಾಯದಿಂದ ಪಾರಾದರೆ ಉಳಿದ ಇಬ್ಬರು ನೀರುಪಾಲಾಗಿದ್ದರು. ಇಂದಿಗೂ ಈ ಘಟನೆಯನ್ನು ನೆನಪಿಸುವಾಗ ಮೈ ಝುಮ್ ಎನ್ನುತ್ತದೆ. ಶ್ರೀಗುರುಗಳ ಕೃಪೆಯಿಂದಲೇ ನಮ್ಮ ಮಗಳು ಬದುಕುಳಿದಳು , ಗುರುಪೀಠದ ಶಕ್ತಿ ಇದು ” ಎಂದು ಭಾವುಕರಾಗಿ ನುಡಿಯುವ ಹೇಮಾವತಿ ಹೆಗಡೆಯವರ ಮಕ್ಕಳಿಬ್ಬರೂ ಶ್ರೀಮಠದ ಸೇವೆಯಲ್ಲಿ ತುಂಬಾ ಉತ್ಸಾಹದಿಂದ ತೊಡಗಿಸಿಕೊಳ್ಳುವವರು.

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಬಾಗಿನ ಸ್ವೀಕಾರ ಮಾಡುವ ಸೌಭಾಗ್ಯ ಇವರಿಗೆ ಒದಗಿ ಬಂದಿದೆ. ತಮ್ಮ ಬಿಡುವಿನ ವೇಳೆಗಳಲ್ಲಿ ಮಾಲೂರು ಗೋಶಾಲೆಗೆ ತೆರಳಿ ಅಲ್ಲಿರುವ ಗೋವುಗಳ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹೇಮಾವತಿ ಅವರಿಗೆ ಗೋಸೇವೆಯನ್ನು ನಿರಂತರವಾಗಿ ಮುಂದುವರಿಸುವ ಇಚ್ಛೆಯಿದೆ.

” ಶ್ರೀಗುರುಗಳ ಕೃಪೆಯಿಂದ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಮಗಳು ಕಾವ್ಯ ಗುರುಕೃಪೆಯಿಂದ ಬದುಕುಳಿದಳು. ಪ್ರಸ್ತುತ ಕೆನಡಾದಲ್ಲಿ ಉದ್ಯೋಗಿಯಾಗಿದ್ದಾಳೆ. ವಿ ವಿ ವಿ ಗೂ ಸಮರ್ಪಣೆ ಮಾಡಿದ್ದಾಳೆ. ಮಕ್ಕಳ ಸ್ನೇಹಿತರೂ ಮಾತೃತ್ವಮ್ ಯೋಜನೆಗೆ ಸಹಕಾರ ನೀಡಿದ್ದಾರೆ. ಮನೆಯವರು ವಲಯಾಧ್ಯಕ್ಷರು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವರ ಸಂಪೂರ್ಣ ಬೆಂಬಲವಿದೆ ” ಎನ್ನುವ ಹೇಮಾವತಿ ಹೆಗಡೆಯವರಿಗೆ ಸಮಾಜದ ಎಲ್ಲಾ ಬಾಂಧವರೂ ಗೋಮಾತೆಯ ಮಹತ್ವವನ್ನು ಅರಿತುಕೊಂಡು ಗೋಮಾತೆಯ ಸೇವೆಗೆ ಕೈ ಜೋಡಿಸುವಂತಾಗಲಿ ಎಂಬ ಸದಾಶಯವಿದೆ.

Leave a Reply

Your email address will not be published. Required fields are marked *