ನೊಂದ ಬದುಕಿಗೆ ಭರವಸೆಯ ಚೇತನ ದೊರಕಿದ್ದು ಶ್ರೀ ಗುರು ಸೇವೆಯಿಂದ : ಭಾರತೀ ಕೋಟೆ

ಮಾತೃತ್ವಮ್

” ಬದುಕಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಿ, ನೊಂದ ಬದುಕಿಗೆ ಭರವಸೆಯ ಸಾಂತ್ವನ ನೀಡಿದವರು ಶ್ರಿಗುರುಗಳು.ಜೀವನದ ಕಷ್ಟ ಪರಂಪರೆಯ ಅಂಧಕಾರ ತೊಲಗಿ ಗುರುಕೃಪೆಯೆಂಬ ಜ್ಞಾನ ದೀವಿಗೆಯ ಬೆಳಕಿನಿಂದ ನಮ್ಮ ಬದುಕು ಹಸನಾಗಿದೆ. ಬದುಕು ಸದಾ ಶ್ರೀಗುರು ಸೇವೆ ಹಾಗೂ ಗೋಮಾತೆಯ ಸೇವೆಗಾಗಿ ಮುಡಿಪಾಗಿರಲಿ ಎಂಬುದೇ ನಮ್ಮ ನಿತ್ಯ ಪ್ರಾರ್ಥನೆ ” ಎಂದು ಶ್ರೀಗುರು ಕೃಪಾ ಕಟಾಕ್ಷದ ಬಗ್ಗೆ ಹೃದಯ ತುಂಬಿ ನುಡಿಯುವವರು ಉಪ್ಪಿನಂಗಡಿ ಮಂಡಲದ, ಪಂಜ ವಲಯದ ಚರಣ ಸನ್ನಿಧಿ ಮನೆಯ ಭಾರತೀ ಕೋಟೆ ಅವರು.

ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಾರತೀ ಕೋಟೆ ಶ್ರೀ ರಾಮಾಯಣ ಮಹಾಸತ್ರ ,ವಿಶ್ವ ಗೋಸಮ್ಮೇಳನಗಳಲ್ಲಿ ತಮ್ಮ ಪತಿಯೊಡನೆ ಭಾಗವಹಿಸಿ ಸೇವೆ ಮಾಡಿದವರು. ಮೂರು ಬಾರಿ ಇವರ ಚರಣ ಸನ್ನಿಧಿ ನಿವಾಸದಲ್ಲಿ ಶ್ರೀ ಗುರು ಭಿಕ್ಷಾ ಸೇವೆ ನಡೆಸುವ ಸೌಭಾಗ್ಯ ಪಡೆದವರು.

ಉಬರಡ್ಕ ಮಿತ್ತೂರು ಶಿವಕೃಪಾ ನಿವಾಸದ ಈಶ್ವರ ಭಟ್ ಹಾಗೂ ಲಲಿತಾ ದಂಪತಿಗಳ ಪುತ್ರಿಯಾದ ಭಾರತಿ, ಸಾಯಿಕಿರಣ್ ಕೋಟೆ ಇವರ ಪತ್ನಿಯಾಗಿದ್ದಾರೆ.

” ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದ್ದೇನೆ. ಈಗ ಮಾತೃತ್ವಮ್ ಯೋಜನೆಯ ಮ‌ೂಲಕ ಒಂದು ವರ್ಷದ ಗುರಿ ತಲುಪಿರುವೆ. ಇನ್ನು ಮುಂದೆಯೂ ಈ ಸೇವೆಯನ್ನು ಮುಂದುವರಿಸಬೇಕೆಂದಿದೆ ” ಎನ್ನುವ ಇವರ ಮನೆಯಲ್ಲಿಯೂ ದೇಶೀ ಹಸುಗಳನ್ನು ಸಾಕುತ್ತಿದ್ದಾರೆ.

ಶ್ರೀಗುರುಗಳ ಆಶೀರ್ವಾದ ಪಡೆದೇ ಪ್ರತಿಯೊಂದು ಕಾರ್ಯವನ್ನು ಆರಂಭಿಸುವ ಭಾರತೀ ,ಸಾಯಿಕಿರಣ್ ದಂಪತಿಗಳ ಪುತ್ರಿ ಸಂಹಿತಾ ಕೋಟೆ ಅವರು ಸಹಾ ಎಳವೆಯಿಂದಲೇ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದ್ದು ತಮ್ಮ ವಿದ್ಯಾಭ್ಯಾಸದ ಪ್ರೊಜೆಕ್ಟ್ ವರ್ಕ್ ಗಾಗಿ ಗೋ ಉತ್ಪನ್ನಗಳ ಬಳಕೆಯ ವಿಷಯವನ್ನು ಆಯ್ಕೆ ಮಾಡಿ ಸಮಾಜದ ಅನೇಕ ಮಂದಿಗೆ ಗೋ ಉತ್ಪನ್ನಗಳ ಕುರಿತಾದ ಮಾಹಿತಿ ನೀಡಿ ಅದನ್ನು ಉಪಯೋಗಿಸುವಂತೆ ಮಾಡಿದ್ದಾರೆ.

” ಬದುಕಿನ ಕ್ಲಿಷ್ಟಕರ ಸನ್ನಿವೇಶದಲ್ಲಿ ಶ್ರೀಗುರು ಚರಣದ ಮೇಲಿರಿಸಿದ ಅಚಲ ನಂಬಿಕೆ ನಮ್ಮನ್ನು ಕಷ್ಟಗಳಿಂದ ಪಾರು ಮಾಡಿತು. ಶ್ರೀಗುರುಗಳ ಸಾಂತ್ವನದ ನುಡಿಗಳೇ ಬಾಳಿನ ನೋವಿಗೆ ಪರಮೌಷಧವಾಯಿತು. ಹಾಗಾಗಿ ನಮ್ಮ ಬದುಕು ಶ್ರೀಗುರುಸೇವೆಗೆ ಸದಾ ಮುಡಿಪು. ಯಾವ ಸೇವೆಯಾದರೂ ಶ್ರೀಗುರುಗಳ ಕಲ್ಪನೆಯ ಕಾರ್ಯವನ್ನು ಸಾಕಾರಗೊಳಿಸಲು ನಮ್ಮಿಂದ ಸಾಧ್ಯವಾದಷ್ಟು ರೀತಿಯಲ್ಲಿ , ಸಾಧ್ಯವಾದಷ್ಟು ಕಾಲ ನಿರಂತರವಾಗಿ ಸೇವೆ ಮಾಡಬೇಕೆಂಬುದೇ ನಮ್ಮ ಗುರಿ. ಇದಕ್ಕೆ ನಾವು ಬಯಸುವುದು ಕೇವಲ ಶ್ರೀಗುರು ಕೃಪೆಯನ್ನು ಮಾತ್ರ ” ಎನ್ನುವ ಭಾರತಿ ಅವರಿಗೆ ಧಾರ್ಮಿಕ ವಿಚಾರಗಳಲ್ಲಿ ತುಂಬಾ ಆಸಕ್ತಿಯಿದೆ.

ಶ್ರೀಗುರುಗಳ ನಿರ್ದೇಶಾನುಸಾರ ಪಠಿಸುವ ಸ್ತೋತ್ರಗಳ ಜೊತೆಗೆ ಇತ್ತೀಚೆಗೆ ಶ್ರೀರಾಮಾಯಣ ಪಾರಾಯಣವನ್ನು ಮಾಡುತ್ತಿರುವ ಭಾರತಿ ಕೃಷಿ ಕಾರ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿದವರು. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ದೇಶೀ ಹಸುಗಳನ್ನು ಮಾತ್ರ ಸಾಕುವ ಇವರು ಹಸುಗಳಿಗೆ ತಮ್ಮ ತೋಟದಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿದ್ದಾರೆ.

ಪತಿ ಸಾಯಿಕಿರಣ್, ಮಗಳು ಸಂಹಿತಾರ ಸಹಕಾರ , ಪ್ರೋತ್ಸಾಹ ಸದಾ ದೊರಕಿದೆ ಎಂದು ಹರ್ಷದಿಂದ ನುಡಿಯುವ ಇವರ ಅಂತರಂಗದ ಬಯಕೆ ಒಂದೇ ‘. ಸದಾ ಶ್ರೀಗುರು ಚರಣಕೆ ಶರಣಾಗಲಿ ಹರಣ ‘

Author Details


Srimukha

Leave a Reply

Your email address will not be published. Required fields are marked *