ಸಾಗರದ ಹುಳೇಗಲ್ ನ ಚೆನ್ನಕೇಶವ ಭಟ್ ಹಾಗೂ ಸರೋಜಿನಿ ದಂಪತಿಗಳ ಪುತ್ರಿಯಾದ ಇವರು ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಕೇಶವ ನಂದೋಡಿ ಅವರ ಪತ್ನಿ. ಬಂಟ್ವಾಳದ ಪಿಯು ಕಾಲೇಜ್‌ನಲ್ಲಿ ಉಪನ್ಯಾಸಕಿಯಾಗಿರುವ ಸುಮನಾ ಅವರಿಗೆ ಬಾಲ್ಯದಿಂದಲೇ ಗೋವುಗಳ ಒಡನಾಟವಿತ್ತು. ಅದೇ ಪ್ರೀತಿಯಿಂದ ಗೋಸೇವೆಯಲ್ಲಿ ಆಸಕ್ತಿ ಹೊಂದಿ ಮಾಸದ ಮಾತೆಯಾಗಿ ಗೋಮಾತೆಯ ಸೇವೆಯಲ್ಲಿ ಕೈ ಜೋಡಿಸಿದರು.
ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾದ ಮೇಲೆ ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತೆಯಾಗಿ ಭಾಗವಹಿಸಿದವರು. ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ವಿಶ್ವ ಮಂಗಲ ಗೋಯಾತ್ರೆ,ಅಭಯಾಕ್ಷರ ಅಭಿಯಾನಗಳಲ್ಲಿ ಮಾತ್ರವಲ್ಲದೆ ಹಲಸಿನ ಮೇಳವೇ ಮೊದಲಾದ ಗೋಶಾಲೆಗಳಿಗಾಗಿ ನಿಧಿಸಂಗ್ರಹದಂತಹ ಕಾರ್ಯಕ್ರಮಗಳಲ್ಲಿ ಸಹಾ ಸಕ್ರಿಯವಾಗಿ ಪಾಲ್ಗೊಂಡ ಅನುಭವ ಇವರಿಗಿದೆ.
ತಮ್ಮ ಇಬ್ಬರು ಮಕ್ಕಳನ್ನು ಎಳವೆಯಿಂದಲೇ ಶ್ರೀಮಠದ ಸಂಪರ್ಕದಲ್ಲೇ ಇರಿಸಿದ ನಂದೋಡಿ ದಂಪತಿಗಳ ಕಿರಿಯ ಪುತ್ರಿ ತನ್ವಿತಾ ಪ್ರಸ್ತುತ ಅಶೋಕೆಯ ವಿ ವಿ ವಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
” ಮಗಳು ಸ್ವಯಂ ಇಚ್ಛೆಯಿಂದ ವಿ ವಿ ವಿ ಯಲ್ಲಿ ವ್ಯಾಸಂಗ ಮಾಡಲು ತೆರಳಿದ್ದಾಳೆ. ಇದು ನಮಗೂ ತುಂಬಾ ಖುಷಿ ನೀಡಿದೆ. ಶ್ರೀಗುರುಗಳ ಆಶೀರ್ವಚನಗಳು ಮಕ್ಕಳ ಮೇಲೆ ಬಹಳಷ್ಟು ಪ್ರಭಾವ ಬೀರಿ ಅವರ ಬದುಕಿಗೆ ಉತ್ತಮ ಹಾದಿ ತೋರುವಲ್ಲಿ ಯಶಸ್ವಿಯಾಗಿದೆ. ಇದು ನಮ್ಮ ಅನುಭವ ” ಎನ್ನುವ ಸುಮನಾ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷದ ಗುರಿ ತಲುಪಿದ ಮಾಸದ ಮಾತೆ. ಇತ್ತೀಚೆಗೆ ಗೋಸ್ವರ್ಗದಲ್ಲಿ ನಡೆದ ಮಾತೃತ್ವಮ್ ಸಮಾವೇಶದಲ್ಲಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸುವ ಸೌಭಾಗ್ಯ ಇವರಿಗೆ ಒದಗಿ ಬಂದಿದೆ.
” ದೇಶೀ ಗೋವುಗಳ ಮಹತ್ವದ ಬಗ್ಗೆ ಜನರು ಅರಿತುಕೊಂಡಿದ್ದಾರೆ, ನಮ್ಮ ಗುರುಗಳ ಸಮಾಜಮುಖಿ ಕಾರ್ಯಗಳನ್ನು ಅನೇಕ ಜನರು ಮೆಚ್ಚಿದ್ದಾರೆ, ಅದೇ ರೀತಿಯಲ್ಲಿ ನಮ್ಮ ಮಗಳು ವಿವಿವಿ ಸೇರಿದ ಮೇಲೆ ಅಲ್ಲಿಯ ವಿದ್ಯಾಭ್ಯಾಸದ ರೀತಿಯನ್ನು ಕೇಳಿ ತಿಳಿದ ಅನೇಕ ಮಂದಿ ಮುಂದಿನ ವರ್ಷ ತಮ್ಮ ಮಕ್ಕಳನ್ನು ಅಶೋಕೆಯ ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದಲ್ಲಿ ವಿದ್ಯಾರ್ಜನೆಗೆ ಕಳುಹಿಸಲು ಮುಂದಾಗಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ ” ಎನ್ನುವ ಸುಮನಾ ಅವರಿಗೆ ಶ್ರೀಮಠದ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಮನೆಯವರ ಸಂಪೂರ್ಣ ಸಹಕಾರವಿದೆ. ಇನ್ನಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲವೂ ಇವರಿಗಿದೆ.