ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೬

ಅರಿವು-ಹರಿವು
ಅವಿಚ್ಛಿನ್ನ ಗುರುಪರಂಪರೆಯು ತನ್ನ  ಮುಂದುವರಿಕೆಯ ಸ್ಥಾಪನೆ ಎಂಬ ಹೆಗ್ಗಳಿಕೆಗಾಗಿ ಮುಂದುವರೆಯುತ್ತಾ ಬರುತ್ತಿರುವುದಲ್ಲ. ಕೇವಲ ಜ್ಞಾನಾನಂದಮಯನಾದ ಪರಮಾತ್ಮ ಶ್ರೀಮನ್ನಾರಾಯಣನ ಸಿಹಿಯ ಸವಿಯ ಹಂಚುವ ಸತ್ಸಂಕಲ್ಪವಷ್ಟೇ. ಈ ಹಿಂದಿನ ಲೇಖನಗಳೆಲ್ಲದರಲ್ಲಿಯೂ ಯೋಗ್ಯ ಶಿಷ್ಯ ವಟುವೋರ್ವನಿಗೆ ಹಿಂದು ಹಿಂದಿನ ಗುರುಗಳು ಯೋಗಪಟ್ಟವನಿತ್ತರು ಎಂಬುದನ್ನು ಒಂದೇ ವಾಕ್ಯದಲ್ಲಿ ಸರಾಗವಾಗಿ ನೋಡುತ್ತಾ ಬಂದೆವು. ಆದರೆ ಮಹಾಚೇತನವನ್ನು ಹೊತ್ತ ಆ ಪರಮಪ್ರಕೃತಿ ದೇಹಪಾತ್ರದ ಲಕ್ಷಣಗಳನ್ನರಸಿ ಇದೇ ಎಂದು ಆಯ್ದುಕೊಳ್ಳುವುದು ನಮ್ಮಂತಹ ಪಾಮರರಿಗೆ ಅಸಾಧ್ಯವಾದ ವಿಷಯವಾದರೂ, ಶ್ರೀಮನ್ನಾರಾಯಣನ ಪ್ರತಿರೂಪವೇ ಆದ ಪ್ರಸ್ತುತದ ಪೀಠಾಧಿಪತಿಗಳಿಗೆ ಕರ್ತವ್ಯವೂ ಮತ್ತು ಸಹಜಸುಲಭವೂ ಆದ್ದರಿಂದ ಮಠವೆಂಬ ವ್ಯವಸ್ಥೆಯ ಆರಂಭದಿಂದಲೂ ನಡೆದು ಬಂದಿರುವಂತೆಯೇ ಇಪ್ಪತ್ತೇಳನೆಯ ಧರ್ಮಾಚಾರ್ಯರು ಇಪ್ಪತ್ತೆಂಟನೆಯವರಾಗಿ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ  ಮಹಾಸ್ವಾಮಿಗಳು(೬) ಎಂಬ ಲೋಕಮಂಗಳನಾಮದಿಂದ ಸಿಂಹಾಸನಾರೂಢರನ್ನಾಗಿಸಿದರು. ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು(೬) ದಕ್ಷಿಣ ಕನ್ನಡ, ಕೇರಳ ಮಾತ್ರವಲ್ಲದೇ ಕೊಡಗು, ಅನಂತಶಯನ ಮೊದಲಾದ ಸ್ಥಳಗಳಿಗೂ ಭೇಟಿಯನ್ನಿತ್ತರು.  ಅಪ್ರತಿಮ ವಿದ್ವಾಂಸರೂ ಆಗಿದ್ದ ಪೂಜ್ಯ ಶ್ರೀಗಳ ಕಾಲದಲ್ಲಿ ಶ್ರೀಮಠವು ಮಠಶ್ಛಾತ್ರಾದಿನಿಲಯಃ ಎಂಬ ಮಾತಿಗೆ ಅತ್ಯುತ್ತಮ ದೃಷ್ಟಾಂತವಾಗಿತ್ತು. ಪರಮಪೂಜ್ಯ ಶ್ರೀಗಳವರ ಕಾಲದಲ್ಲಿ ಶೃಂಗೇರಿಯ ಶ್ರೀ ಶಾರದಾ ಪೀಠದ ಅಧಿಪತಿಗಳಾದ ಶ್ರೀ ಶ್ರೀ ಅಭಿನವ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಈಶ್ವರ ಸಂವತ್ಸರದ ಪುಷ್ಯ ಶುದ್ಧ ಪ್ರತಿಪತ್ ಮಂಗಳವಾರದ ದಿನದಂದು ಸಂಕ್ರಾಂತಿ ಸ್ನಾನಕ್ಕೆಂದು ಶರಾವತಿ ತೀರಕ್ಕೆ ಬಂದಾಗ ಈರ್ವರು ಮಠಾಧಿಪತಿಗಳ ಸಮಾಗಮವಾಗಿದ್ದನ್ನು ಇತಿಹಾಸವು ಉಲ್ಲೇಖಿಸಿದೆ. ಬಹು ಅಪರೂಪವಾದ ಸಂತ ಸಮಾಗಮವನ್ನು ಇಲ್ಲಿ ಕಾಣಬಹುದಾಗಿದೆ.
 ಸಾಕಷ್ಟು ದೀರ್ಘಕಾಲ ತಪಃಸಾಮ್ರಾಜ್ಯ ಚಕ್ರವರ್ತಿಗಳಾಗಿ ವಿರಾಜಿಸಿದ ಪೂಜ್ಯರು ತಮ್ಮ ತಪೋವೃದ್ಧತೆಯೊಂದಿಗೆ ವ್ಯಾವಹಾರಿಕ ವಯೋವೃದ್ಧತೆಯೂ ಸೇರಿದಾಗ ತಮ್ಮ ಅಂತೇವಾಸಿಯಾಗಿದ್ದ ಯೋಗ್ಯವಟುವೋರ್ವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಿಶ್ಚಯಿಸಿದರು ಹಾಗೂ ಅವರಿಗೆ ತುರೀಯಾಶ್ರಮವನ್ನಿತ್ತು ಮಹಾವಾಕ್ಯೋಪದೇಶವನ್ನನುಗ್ರಹಿಸಿ ಶ್ರೀ ಶ್ರೀಮದ್ರಘೂತ್ತಮ ಭಾರತೀ(೪) ಎಂಬ ದಿವ್ಯನಾಮವನ್ನಿತ್ತು ಯೋಗಪಟ್ಟದಲ್ಲಿ ಅಭಿಷೇಚಿಸಿ ಅನತಿಕಾಲದಲ್ಲಿಯೇ ದೇಹತ್ಯಾಗವನ್ನು ಮಾಡಿದರು.
ಈ ಸಂದರ್ಭವನ್ನು ಗುರುಕೃಪಾತರಂಗಿಣೀಕಾರರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ;
” ಪೀಠೇಭಿಷಿಚ್ಯ ಯಮಿನಾಂ ಪತಿರಾತ್ತದೀಕ್ಷಂ
ವಿಷ್ಣೋಃ  ಪದಂ ಕಿಲ ಜಗಾಮ ಸ ರಾಘವೇಶಃ|
ಪಶ್ಚಾದ್ರಘೂತ್ತಮಯತಿಃ ಕಿಲ ರಾಮಚಂದ್ರ- ಪೀಠೇ
 ಚಿರಾಯ ಗುರುರಾಸ ಮಹಾನುಭಾವಃ||
ಪಾತ್ರಗಳು ಬೇರೆಬೇರೆಯಾಗಿ ಬಂದರೂ ಸೂತ್ರವು ಒಂದೇ ಆದ ಶ್ರೀಮನ್ನಾರಾಯಣ ಸ್ವರೂಪವು ‘ನ ಹಿ ಜ್ಞಾನೇನ ಸದೃಶಂ’ ಆದ್ದರಿಂದ  ಜ್ಞಾನಾನಂದವನ್ನು ಭುವಿಯ ಬದುಕಿಗರಿಗೆ ಉಣಬಡಿಸಲೋಸ್ಕರ ಗುರುಪರಂಪರೆಯಲ್ಲಿ ಅವಿಚ್ಛಿನ್ನತೆಯನ್ನು ಕಾಯ್ದು ಮುಂದುಮುಂದಿನ ಕಾಲಕ್ಕೂ ಅರಿವಿನ ಹರಿವಾಗಿ ಅವತರಿಸಿತು ಎಂಬಲ್ಲಿಗೆ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *