ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೨

ಅರಿವು-ಹರಿವು
ಶ್ರೀ ಶಂಕರ ಭಗವತ್ಪಾದರಿಂದ  ಧೀ ಪ್ರಚೋದನೆಗೊಂಡು ಮಂಡನಮಿಶ್ರರಿಂದ ಸುರೇಶ್ವರಾಚಾರ್ಯರ ಎತ್ತರಕ್ಕೇರಿದ ಸುರೇಶ್ವರಾಚಾರ್ಯರು  ಶಂಕರರ ಅನುಯಾಯಿಯಾಗಿ
ಅದ್ವೈತಮತದ ಪ್ರಸಾರಕರಾಗಿ ಗುರುಪರಂಪರೆಯ ಅವಿಚ್ಛಿನ್ನ ಹರಿವಿಗೆ ಅರಿವಿನ ಮೂರ್ತಿಯಾಗಿ  ಋಷ್ಯಶೃಂಗ ಪರ್ವತದ ಸನಿಹದ ತುಂಗಾ ತೀರದಲ್ಲಿ ಆಶ್ರಮವೊಂದನ್ನು ನಿರ್ಮಿಸಿ ನೆಲೆಗೊಂಡರು. ಶಂಕರಾಚಾರ್ಯರ ಆಣತಿಯ ಮೇರೆಗೆ ಒಬ್ಬ ಶಿಷ್ಯ ಶ್ರೇಷ್ಠನಿಗೆ ಸಂನ್ಯಾಸದೀಕ್ಷೆಯನ್ನು ನೀಡಿದರು. ಈ ಶಿಷ್ಯೋತ್ತಮರೇ ಮುಂದೆ ಶಂಕರಾಚಾರ್ಯರ ಆದೇಶದ ಮೇರೆಗೆ ದಕ್ಷಿಣದಲ್ಲಿ ನೆಲೆಗೊಂಡು  ಅವಿಚ್ಛಿನ್ನ ಅರಿವಿನ ಹರಿವಿಗೆ ಕೊಂಡಿಯಾಗಿ, ಗುರುಪರಂಪರೆಯ ಮುಂದುವರಿಕೆಯಾಗಿ ಕಂಗೊಳಿಸಿದರು. ಅವರೇ ಶ್ರೀ ವಿದ್ಯಾನಂದಾಚಾರ್ಯರು.
ದಕ್ಷಿಣ ದಿಗ್ವಿಜಯಕ್ಕೆ ಆಗಮಿಸಿದ ಶಂಕರರು ಅವೈದಿಕ ಮತಗಳನ್ನು ಖಂಡಿಸುತ್ತಾ, ಅದ್ವೈತವೇದಾಂತ ಡಿಂಡಿಮವನ್ನು ಸರ್ವತ್ರ ಪಸರಿಸುತ್ತ ಕುಮಾರ ಪರ್ವತಕ್ಕೆ ಬಂದು ಆದಿಶೇಷ ಸುಬ್ರಹ್ಮಣ್ಯನನ್ನು ಪೂಜಿಸಿದರು. ಅಲ್ಲಿಂದ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನನ್ನು ಆರಾಧಿಸಿದರು. ಇಲ್ಲಿಯೇ ಇರುವ ಕೋಟಿತೀರ್ಥದ ಸನಿಹದಲ್ಲೇ ನೆಲೆಸಿದ್ದ ಶ್ರೀ ವರದಮುನಿಗಳನ್ನು ಶಂಕರರು ಸಂದರ್ಶಿಸಿದರು. ಅಲ್ಲಿ ಅವರಿಗೆ ವರದಮುನಿಗಳು ಮಹರ್ಷಿ ಅಗಸ್ತ್ಯರಿಂದ ಸಂಪ್ರಾಪ್ತಿಯಾದ ತಪೋರಾಮಾದಿ ವಿಗ್ರಹಗಳನ್ನು ಶಂಕರರಿಗೆ ಇತ್ತರಲ್ಲದೇ, ಅವರ ಗುರುಗಳಾದ ಅಗಸ್ತ್ಯರ ಆಶಯವಾದ ಆ ವಿಗ್ರಹಗಳಿಗೆ ವಿಧಿವತ್ತಾಗಿ ಪೂಜಾವ್ಯವಸ್ಥೆಯಾಗಬೇಕೆಂಬುದನ್ನು ನಿವೇದಿಸಿದರು. ರಾಮಭದ್ರ ಸೀತಾಲಕ್ಷ್ಮಣಾದಿ ಲೋಕಮಂಗಳ ವಿಗ್ರಹಗಳನ್ನು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿದ ಪೂಜ್ಯ ಭಗವತ್ಪಾದರು ತಮ್ಮ ಶಿಷ್ಯ ಸಮೂಹದೊಂದಿಗೆ ಗೋಕರ್ಣದಿಂದ ಜಗನ್ನಾಥ ಕ್ಷೇತ್ರದತ್ತ ಮುಂದುವರೆದು ಹೋಗುವಾಗ ಗೋಕರ್ಣದ ಶತಶೃಂಗ ಪರ್ವತದ ತಪ್ಪಲು ಪ್ರದೇಶವಾದ ಅಶೋಕೆಯಲ್ಲಿ ಅಲೌಕಿಕವಾದ ಘಟನೆಯೊಂದನ್ನು  ಈಕ್ಷಿಸಿದರು. ಮಹಾದೇವನ ಆ ಸನ್ನಿಧಿಯಲ್ಲಿ ಸಹಜ ವೈರಿಗಳಾದ ಹುಲಿ-ಹುಲ್ಲೆಗಳು ಒಂದಾಗಿರುವುದನ್ನು ನೋಡಿದರು. ತಮ್ಮ ಜನ್ಮಜಾತವಾದ ವೈರವನ್ನು ಮರೆತು ಪ್ರೀತಿ ವಾತ್ಸಲ್ಯಗಳಿಂದ ಸಹಬಾಳ್ವೆ ನಡೆಸುವುದನ್ನು ಕಂಡು ವಿಸ್ಮಿತರಾದ ಶಂಕರರು, ಧರ್ಮಮಾರ್ಗದ ಅರಿವು ಪ್ರಸಾರವಾಗಬೇಕಿರುವುದು ಇಂತಹ ಭೂಮಿಯಿಂದಲೇ ಎಂದು ಮನಗಂಡು, ವರದಮುನಿಗಳಿಗೆ ಕೊಟ್ಟ ಮಾತನ್ನು ಸ್ಮರಿಸಿ ಆ ಪ್ರದೇಶದಲ್ಲಿಯೇ ಲೋಕದ ಎಲ್ಲ ಸನ್ಮಂಗಲಕ್ಕೆ ಕಾರಣವಾದ, ಅರಿಷಡ್ವರ್ಗವನ್ನು ಮೀರಿ ನಡೆಯಲು ಪ್ರೇರೇಪಿಸುವ ಪ್ರವೃತ್ತಿ ನಿವೃತ್ತಿಗಳನ್ನು ಬೋಧಿಸುತ್ತ, ಜನರಿಗೆ ಸನ್ಮಾರ್ಗವನ್ನು ತೋರಿಸುವ ಶಾಶ್ವತ ವ್ಯವಸ್ಥೆಯೊಂದನ್ನು ಸ್ಥಾಪಿಸಲು ನಿಶ್ಚಯಿಸಿ ಅಶೋಕೆಯಲ್ಲಿ ಮಠವೊಂದನ್ನು ಸ್ಥಾಪಿಸಿದರು ಹಾಗೂ ತಮ್ಮಲ್ಲಿದ್ದ ಅಗಸ್ತ್ಯ ಸಂಪೂಜಿತ ಶ್ರೀರಾಮಾದಿ ವಿಗ್ರಹಗಳನ್ನು ಅಲ್ಲಿಯೇ ನೆಲೆಗೊಳಿಸಿದರು. ಇಲ್ಲಿ ಶ್ರೀರಾಮನೇ ಆರಾಧ್ಯದೇವತೆಯಾದ್ದರಿಂದ ಈ ನೂತನ ಮಠಕ್ಕೆ ‘ರಘೂತ್ತಮ ಮಠ’ ಎಂಬ ಶುಭಾಭಿಧಾನವನ್ನು ಅನುಗ್ರಹಿಸಿದರು. ಸ್ಥಾಪಿತ ನೂತನ ಮಠಕ್ಕೆ ಸಂಯಮಶೀಲರಾಗಿದ್ದು, ಶಮದಮಾದಿ ಸಂಪತ್ತಿಯನ್ನು ಹೊಂದಿ ಸಮಾಜಕ್ಕೆ ಸನ್ಮಾರ್ಗ ತೋರುವ ಧರ್ಮಾಚಾರ್ಯ ಸ್ಥಾನಕ್ಕೆ ತಮ್ಮ ಶಿಷ್ಯರಲ್ಲಿ ಯಾರು ಯೋಗ್ಯರೆಂದು ಆಚಾರ್ಯರು ಚಿಂತಿಸುತ್ತಿರುವ ಸಮಯದಲ್ಲಿಯೇ ಶಂಕರಾಚಾರ್ಯರ ಅಂತೇವಾಸಿಯಾಗಿದ್ದು ವೇದಾಂತಾಧ್ಯಯನವನ್ನು ಮಾಡಿದ ಶ್ರೀ ಸುರೇಶ್ವರಾಚಾರ್ಯರಿಂದ ತಮ್ಮ ಆಣತಿಯ ಮೇರೆಗೆ ಸಂನ್ಯಾಸದೀಕ್ಷೆಯನ್ನು ಪಡೆದ ಮಹಾಮೇಧಾವಿಯೂ, ಅವರ ಪ್ರಿಯಶಿಷ್ಯರೂ ಆದ ವಿದ್ಯಾನಂದಾಚಾರ್ಯರು ಬಂದು ಶಂಕರರ ಪಾದಾರವಿಂದಗಳಿಗೆ ಅಭಿವಾದನ ಮಾಡಲು ಆಚಾರ್ಯ ಶಂಕರರು ಇವನೇ ಇಲ್ಲಿಯ ಪೀಠಾಧಿಪತಿಯಾಗಲು ಯೋಗ್ಯನೆಂದರಿತು ವಿದ್ಯಾನಂದಾಚಾರ್ಯರನ್ನು ಗೋಕರ್ಣಮಂಡಾಲಾಧೀಶರನ್ನಾಗಿ ನೇಮಿಸಿದರು. ಅಲ್ಲದೇ, ಇಲ್ಲಿಯ ಎಲ್ಲ ಶಿಷ್ಯರನ್ನು ಸನ್ಮಾರ್ಗಪ್ರವರ್ತಕರಾಗುವಂತೆ ಉದ್ದೀಪಿಸು ಮತ್ತು ಜ್ಯೋತಿರ್ಮಯವಾದ ಚಂದ್ರಮೌಳಿ ಲಿಂಗವನ್ನು ಅರ್ಚಿಸು, ಈ ಶ್ರೀಪಾದುಕೆಗಳನ್ನು ಆರಾಧಿಸಿ ಸೀತಾಲಕ್ಷ್ಮಣಯುಕ್ತನಾದ ಶ್ರೀ ರಾಮಭದ್ರನ ಮೂರ್ತಿಯನ್ನು “ಸೋsಹಂ” ಎಂಬ ಅದ್ವೈತಬುದ್ಧಿಯಿಂದ ಉಪಾಸಿಸು ಎಂದು ಆದೇಶಿಸಿ ಶ್ರೀ ಶ್ರೀ ವಿದ್ಯಾನಂದಾಚಾರ್ಯರನ್ನು ಗೋಕರ್ಣ ಮಠದ ಪ್ರಥಮ ಪೀಠಾಧಿಪತಿಯನ್ನಾಗಿ ಅಭಿಷೇಚಿಸಿದರು.

Author Details


Srimukha

Leave a Reply

Your email address will not be published. Required fields are marked *