ಶ್ರೀಮಠದ ಸೇವೆಯಲ್ಲಿ ಬದುಕು ಪಾವನವಾಗುತ್ತಿದೆ : ಸುಲೋಚನ‌ ಗಿರಿನಗರ

ಮಾತೃತ್ವಮ್

 

” ಶ್ರೀಮಠದ, ಗೋಮಾತೆಯ, ಶ್ರೀಗುರುಗಳ ಸೇವೆ ಮಾಡಲು ನಮಗೆ ದೊರಕಿರುವ ಈ ಅವಕಾಶ ನಿಜಕ್ಕೂ ಪೂರ್ವ ಜನ್ಮದ ಸುಕೃತದಿಂದ ಲಭಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀಗುರುಗಳ ಆಶೀರ್ವಾದ ಪಡೆದು ಆರಂಭಿಸುವ ಯಾವುದೇ ಕಾರ್ಯವಾದರೂ ಅತಿ ಶೀಘ್ರದಲ್ಲಿ ಫಲ ದೊರಕುತ್ತದೆ ಎಂಬ ಅನುಭವ ನನ್ನದು ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಸುಲೋಚನ ಗಿರಿನಗರ.

ಸಿದ್ಧಾಪುರ ತಾಲೂಕಿನ ಇಟಗಿ ಹೊನ್ನೆಮಡಿಕೆಯ ಭಾಸ್ಕರ ಗಣೇಶ ಹೆಗಡೆ ಹಾಗೂ ಸರೋಜಾ ಭಾಸ್ಕರ ಹೆಗಡೆಯವರ ಪುತ್ರಿಯಾದ ಸುಲೋಚನ ಅವರು ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಶ್ರೀಧರ ಭಟ್ ನಡುಮನೆ ಇವರ ಪತ್ನಿ.

ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಗೋ ಸೇವೆಗೆ ಮನ ಮಾಡಿರುವ ಸುಲೋಚನ ಅವರು ಆರಂಭದಲ್ಲಿ ಶ್ರೀ ಸಂಸ್ಥಾನದವರ ಅನುಗ್ರಹ ಪಡೆದು ಮುಂದುವರಿದವರು. ಯುವ ಪೀಳಿಗೆಗೆ ದೇಶೀಯ ಹಸುಗಳ ಮಹತ್ವದ ಬಗ್ಗೆ ತಿಳಿಸಿ, ಅವರಲ್ಲಿ ಅರಿವು ಮೂಡಿಸಬೇಕೆಂಬ ಭಾವನೆಯಿಂದ ಉದ್ಯೋಗಸ್ಥರಾಗಿರುವ ಯುವಕರ ಬಳಿಗೆ ಹೋಗಿ ಶ್ರೀಮಠದ ಯೋಜನೆಯ ಬಗ್ಗೆ ತಿಳಿಸಿ ,ಅವರ ಮನವೊಲಿಸಿ ಗೋಸೇವೆಗೆ ಸಹಕಾರ ಪಡೆದ ಸಾಧನೆ ಸುಲೋಚನ ಅವರದ್ದು.

” ಗೋಸೇವೆಯ ಬಗ್ಗೆ ಒಬ್ಬರಲ್ಲಿ ಕೇಳಿದಾಗ ಅವರು ಈ ಕಾರ್ಯಕ್ಕೆ ಸಹಕರಿಸಿದರು, ಮಾತ್ರವಲ್ಲ ತಮ್ಮ ಪರಿಚಿತರಿಗೂ ಈ ವಿಚಾರ ತಿಳಿಸಿ ಅವರೂ ಪ್ರತೀ ತಿಂಗಳು ಒಂದು ನಿಶ್ಚಿತ ಮೊತ್ತವನ್ನು ನೀಡುವಂತೆ ಮಾಡಿದರು. ಹೀಗೆ ಹಲವರ ಸಹಕಾರ ದೊರಕಿದಾಗ ನನ್ನ ಗುರಿ ತಲುಪುವುದು ಹೂ ಎತ್ತಿದಷ್ಟು ಸರಳವಾಯ್ತು.ಗೋಸೇವೆಗೆ ಕೈ ಜೋಡಿಸುವವರಿಗಾಗಿ ವ್ಯಾಟ್ಸಪ್ ಗ್ರೂಪ್ ಒಂದನ್ನು ಮಾಡಿದ್ದೇನೆ. ಪ್ರತೀ ತಿಂಗಳ ಮೊದಲ ವಾರದಲ್ಲೇ ನೆನಪಿಸಿದ ತಕ್ಷಣ ಎಲ್ಲರೂ ಹಣ ನೀಡುತ್ತಿದ್ದಾರೆ ” ಎಂದು ತಾವು ಮಾಸದ ಮಾತೆಯಾಗಿ ಗುರಿಮುಟ್ಟಲು ಕೈಗೊಂಡ ಕಾರ್ಯವಿಧಾನದ ಬಗ್ಗೆ ತಿಳಿಸುತ್ತಾರೆ ಸುಲೋಚನ.

ಕಳೆದ ಐದು ವರ್ಷಗಳಿಂದ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಿತ್ಯವೂ ನಡೆಯುವ ರಾಮದೀಪ ಸೇವೆಯ ಜವಾಬ್ದಾರಿಯನ್ನು ಶ್ರೀ ಸಂಸ್ಥಾನದವರ ನಿರ್ದೇಶನದಂತೆ ವಹಿಸಿಕೊಂಡಿರುವ ಸುಲೋಚನ ಅವರು ಮೂರು ವರ್ಷಗಳ ಕಾಲ ಗಿರಿನಗರ ವಲಯದ ಸಂಸ್ಕಾರ ಪ್ರಧಾನೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

” ಅಭಯಾಕ್ಷರ ಅಭಿಯಾನದ ಮೂಲಕ ಸಾವಿರಾರು ಮಂದಿಯ ಸಹಿ ಸಂಗ್ರಹ ಮಾಡಿದ್ದೇನೆ, ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುವ ಹಂಬಲವಿದೆ. ರಾಮದೀಪ ಸೇವೆಯು ನನ್ನ ಬದುಕನ್ನು ಉದ್ಧರಿಸಿದೆ. ಇದೇ ಶ್ರದ್ದೆ ,ಭಕ್ತಿ ಸದಾ ಇರಲೆಂದು ಶ್ರೀ ಗುರು ಚರಣಗಳಲ್ಲಿ, ಶ್ರೀರಾಮ ದೇವರಲ್ಲಿ ಹಾಗೂ ಗೋಮಾತೆಯಲ್ಲಿ ನನ್ನ ಪ್ರಾರ್ಥನೆ ” ಎನ್ನುವ ಸುಲೋಚನ ಅವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು.

ತನ್ನ ಈ ಸೇವೆಗೆ ಮನೆಯವರ ಸಂಪೂರ್ಣ ಸಹಕಾರ ದೊರಕಿರುವುದು ಶ್ರೀರಾಮನ ಅನುಗ್ರಹ ಎಂದು ಭಾವಿಸುವ ಇವರು ತನ್ನ ಜೊತೆಗೆ ಎಲ್ಲಾ ಕಾರ್ಯಗಳಲ್ಲೂ ಕೈ ಜೋಡಿಸುವ ಹವ್ಯಕ ಸಮಾಜದ ಸೋದರಿಯರ ಸಹಕಾರವನ್ನೂ ಸ್ಮರಿಸಿಕೊಳ್ಳುತ್ತಾರೆ. ಶ್ರೀಮಠದ ಸೇವೆ ಬದುಕು ಪಾವನಗೊಳಿಸುತ್ತದೆ ಎಂಬ ದೃಢ ಸಂಕಲ್ಪದಿಂದ ಸೇವೆ ಮಾಡುವ ಸುಲೋಚನ ಅವರಿಗೆ ಸದಾ ಶ್ರೀಮಠದ ಸೇವೆಯಲ್ಲಿ ನಿರತವಾಗಿರ ಬೇಕೆಂಬ ಹಂಬಲ.

Author Details


Srimukha

Leave a Reply

Your email address will not be published. Required fields are marked *