” ದೊಡ್ಡ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವವರು ನಾವು, ಕೆಲವು ಕಾಲ ವಿದೇಶದಲ್ಲಿ ಇದ್ದು ಬಂದವರಾದರೂ ಮನಸ್ಸಿಗೆ ಆನಂದ ದೊರಕುವುದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗಲೇ. ಬೇರೆಲ್ಲೂ ಸಿಗದ ನೆಮ್ಮದಿ, ಶಾಂತಿ ಇಲ್ಲಿದೆ ” ಎನ್ನುವವರು ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ವಿಜಯನಗರ ವಲಯ ನಿವಾಸಿಗಳಾಗಿರುವ ವಾಸಂತಿ ಹೆಗಡೆ.
ಕುಮಟಾದ ಶಂಕರ ರಾಮ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ವಾಸಂತಿ ಹೆಗಡೆಯವರು ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವವುಳ್ಳವರು.
ಮಂಡಲಾಧ್ಯಕ್ಷರಾದ ಜಿ.ಎಸ್ ಹೆಗಡೆಯವರ ಪತ್ನಿಯಾದ ವಾಸಂತಿ ಹೆಗಡೆಯವರು ಈ ಹಿಂದೆ ಕೆಲವು ವರ್ಷಗಳ ಕಾಲ ವಲಯ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದವರು.
ಶ್ರೀ ಗುರುಗಳ ಆಶೀರ್ವಚನವೇ ಮಾಸದ ಮಾತೆಯಾಗಿ ಸೇವೆ ಮಾಡಲು ಇವರಿಗೆ ಪ್ರೇರಣೆ ನೀಡಿತು. ಅನೇಕ ಮಂದಿ ಗೋಪ್ರೇಮಿಗಳು ತುಂಬು ಹೃದಯದಿಂದ ಇವರ ಈ ಗೋಸೇವೆಗೆ ಸಹಕಾರ ನೀಡಿದ್ದಾರೆ. ಒಂದು ವರ್ಷದ ಗುರಿ ತಲುಪಿದ ವಾಸಂತಿ ಹೆಗಡೆಯವರ ಇಬ್ಬರು ಮಕ್ಕಳಿಗೂ ಗೋಸೇವೆಯಲ್ಲಿ ತುಂಬಾ ಆಸಕ್ತಿಯಿದೆ.
” ಗೋವುಗಳೆಂದರೆ ತುಂಬಾ ಪ್ರೀತಿಯಿದೆ. ನಗರ ನಿವಾಸಿಗಳಾಗಿರುವ ನಮಗೆ ಶ್ರೀಗುರುಗಳ ಮಾರ್ಗದರ್ಶನದಿಂದ ಮತ್ತೆ ಗೋಸೇವೆ ಮಾಡುವ ಅವಕಾಶ ದೊರಕಿತು. ಶ್ರೀಮಠದ ಸೇವೆಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ನಮಗೆ ಜೀವನದಲ್ಲಿ ಸಂಕೀರ್ಣ ಸಮಸ್ಯೆಗಳು ಬಂದಾಗ ಅವುಗಳೆಲ್ಲ ಬಗೆಹರಿದು ಸರಿಯಾದ ಹಾದಿ ತೋರುವಂತಾಗಿದ್ದು ಶ್ರೀಗುರುಗಳ ಅನುಗ್ರಹ. ಸ್ಮರಣೆ ಮಾತ್ರದಿಂದಲೇ ಅನೇಕ ಸಮಸ್ಯೆಗಳು ಪರಿಹಾರವಾಗಿವೆ ಎನ್ನುವ ಅವರು ಹೊಸನಗರದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಈ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾರೆ.
” ಶ್ರೀ ರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ನಾವಿಬ್ಬರೂ ಕಾರ್ಯಕರ್ತರಾಗಿ ಸೇವೆ ಮಾಡಲು ಹೋಗಿದ್ದೆವು. ಒಂದು ದಿನ ಪಾನಕ ನೀಡುವ ಸೇವೆಯಲ್ಲಿ ತೊಡಗಿದ್ದಾಗ ನನ್ನ ವಜ್ರದ ಮೂಗುತಿ ಬಿದ್ದು ಹೋಯಿತು. ಎಷ್ಟು ಹುಡುಕಿದರೂ ಸಿಗದಿದ್ದಾಗ ಕೊನೆಗೆ ಶ್ರೀರಾಮ ದೇವರಿಗೆ ಮನಸಾರೆ ಶರಣಾದೆ. ‘ ನಿನ್ನ ಸೇವೆಗೆಂದು ಬಂದವಳು ನಾನು, ಈ ಮೂಗುತಿ ಸಿಕ್ಕಿದರೆ ನಿನಗೇ ಅರ್ಪಿಸುವೆ ‘ ಎಂದೆ. ಅಚ್ಚರಿಯೆಂಬಂತೆ ಮೂಗುತಿಯ ಎರಡೂ ಭಾಗಗಳು ಸಿಕ್ಕಿದವು. ಅದನ್ನು ಅಲ್ಲಿಯೇ ಅರ್ಪಿಸಿದೆ. ಜೀವನದಲ್ಲಿ ಮರೆಲಾರದ ಘಟನೆ ಎಂದರೆ ಇದು. ಸಾವಿರಾರು ಜನರು ಸೇರಿದಲ್ಲಿ ಒಂದು ಪುಟ್ಟ ಮೂಗುತಿ ಕಾಣೆಯಾಗಿದ್ದು ಸಹಾ ಮರಳಿ ದೊರಕಿದ್ದು ಶ್ರೀರಾಮದೇವರ ಕೃಪೆಯಲ್ಲದೆ ಇನ್ನೇನು ? ಇಂತಹ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಅನುಭವಕ್ಕೆ ಬಂದಿವೆ ” ಎನ್ನುವ ವಾಸಂತಿ ಹೆಗಡೆಯವರು ಮಗಳ ವಿದ್ಯಾಭ್ಯಾಸ, ಮಗನ ಮದುವೆಯ ಸಂದರ್ಭಗಳಲ್ಲೂ ಶ್ರೀರಾಮ ದೇವರಿಗೆ ಶರಣಾದವರು.
” ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುವ ಹಂಬಲವಿದೆ, ಶ್ರೀರಾಮ ದೇವರ, ಶ್ರೀಗುರುಗಳ ಅನುಗ್ರಹವೇ ನಮ್ಮ ಬದುಕಿಗೆ ಶ್ರೀರಕ್ಷೆ ” ಎನ್ನುವ ಇವರಿಗೆ ಯುವ ಜನಾಂಗವು ಶ್ರೀಮಠದ ಸೇವೆಯಲ್ಲಿ ಖುಷಿಯಿಂದ ತೊಡಗಿಸಿಕೊಳ್ಳುವ ವಿಚಾರದಲ್ಲಿ ನೆಮ್ಮದಿಯಿದೆ.