ಗೋಸೇವೆ ಮತ್ತು ಶ್ರೀ ಮಠದ ಸೇವೆಯಿಂದ ದೊರಕುವ ಆತ್ಮತೃಪ್ತಿ ಇನ್ನೆಲ್ಲೂ ಸಿಗದು: ಡಾ. ಶಾರದಾ ಜಯಗೋವಿಂದ

ಮಾತೃತ್ವಮ್

ಮೂಲತಃ ಮುಂಗ್ಲಿಮನೆ ಫ್ರೊ. ಮರಿಯಪ್ಪ ಭಟ್ ಮತ್ತು ಸತ್ಯಭಾಮಾ ದಂಪತಿಗಳ ಪುತ್ರಿಯಾದ ಡಾ. ಶಾರದಾ ಜಯಗೋವಿಂದ ಅವರು ಎಂ.ಎ.ಪಿಎಚ್.ಡಿ ಪದವಿ ಗಳಿಸಿದವರು. ಚೆನ್ನೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ (Rank)ದೊಂದಿಗೆ ಇಂಗ್ಲೀಷ್ ಎಂ. ಎ.ಪದವಿ ಗಳಿಸಿದ ಅವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ದೆಹಲಿ,ನೈಜೀರಿಯಾಗಳಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು.

ಆಲಂಗಾರು ಮನೆತನದ ಜಯಗೋವಿಂದ ಅವರ ಪತ್ನಿಯಾದ ಶಾರದಾ ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ನಿವಾಸಿಗಳಾಗಿ ಶ್ರೀಮಠದ ಸೇವೆಗೆ ಸದಾ ಮುಂಚೂಣಿಯಲ್ಲಿದ್ದಾರೆ.

೧೯೯೧ ರ ನಂತರ ಶ್ರೀಮಠದ ನಿರಂತರ ಸಂಪರ್ಕದಲ್ಲಿರುವ ಡಾ.ಶಾರದಾ ಜಯಗೋವಿಂದ ಅವರು ಜವಾಬ್ದಾರಿ ವಹಿಸಿ ನಿರ್ವಹಿಸಿದ ಕಾರ್ಯಗಳು ಹಲವಾರು. ಕೋಟಿ ನೀರಾಜನ ಕಾರ್ಯಕ್ರಮ ಸಮಿತಿಯ ಕಾರ್ಯದರ್ಶಿಯಾಗಿ ಸೇವೆಗೈದ ಇವರು ಶ್ರೀಭಾರತೀ ಪ್ರಕಾಶನದ ಕಾರ್ಯದರ್ಶಿಯಾಗಿಯೂ, ಶ್ರೀಮಠದ ಅಧೀನದಲ್ಲಿರುವ ಗೋಶಾಲಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

“ಶ್ರೀಮಠದ ಸೇವೆ, ಗೋಸೇವೆಗಳಿಂದ ದೊರಕುವ ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ” ಎನ್ನುವ ಇವರು ಹಲವಾರು ವರ್ಷಗಳಿಂದಲೂ ಗೋಸೇವೆ ಮಾಡುತ್ತಿದ್ದಾರೆ. ಗೋಶಾಲೆಗಳ ಅಭ್ಯುದಯಕ್ಕಾಗಿ ಬಹಳಷ್ಟು ಕೊಡುಗೆಗಳನ್ನು ನೀಡಿದ ಇವರು ತಮ್ಮ ಆತ್ಮೀಯರು ಕೂಡ ಗೋ ಸೇವೆಗೆ ಕೈ ಜೋಡಿಸುವಂತೆ ಮಾಡಿದ್ದಾರೆ.

” ದೇಶೀಯ ಹಸುಗಳ ಮಹತ್ವದ ಬಗ್ಗೆ ಜನರಿಗೆ ಮನವರಿಕೆಯಾಗುತ್ತಿದೆ. ಶ್ರೀ ರಾಮಚಂದ್ರಾಪುರ ಮಠದ ಗೋ ಸಂರಕ್ಷಣಾ ಕಾರ್ಯಕ್ಕೆ ಸಮಾಜದಿಂದ ಉತ್ತಮ ಸ್ಪಂದನೆ ದೊರಕಿದೆ. ಹಲವಾರು ಜನರು ತಾವಾಗಿಯೇ ಗೋಸೇವೆಗೆ ಮುಂದೆ ಬಂದಿದ್ದಾರೆ ” ಎನ್ನುವ ಶಾರದಾ ಜಯಗೋವಿಂದ ಅವರು ಸಹಾ ಗೋವುಗಳಿಗಾಗಿ ಬಹಳಷ್ಟು ಸೇವೆ ಮಾಡಿದವರು.

ಕಳೆದ ರಾಮಾಯಣ ಚಾತುರ್ಮಾಸ್ಯದ ಸಂದರ್ಭದಲ್ಲಿ ಧಾರಾ ರಾಮಾಯಣ ಕ್ರಿಯಾ ಸಮಿತಿಯ ಅಧ್ಯಕ್ಷೆಯಾಗಿ ಅನುಪಮ ಸೇವೆ ಸಲ್ಲಿಸಿದ ಇವರ ಸೇವಾ ಕಾರ್ಯ ನಿಜಕ್ಕೂ ಅದ್ಭುತ.

ಆಂಗ್ಲಭಾಷಾ ಪ್ರವೀಣೆಯಾಗಿರುವ ಡಾ. ಶಾರದಾ ಜಯಗೋವಿಂದ ಅವರು ಆಂಗ್ಲಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಸಹಾ ರಚಿಸಿದ್ದಾರೆ. ೨೦೧೮ರ ಚಾತುರ್ಮಾಸ್ಯ ಪ್ರಶಸ್ತಿಯು ಇವರ ಪಾಲಿಗೆ ದೊರಕಿದ್ದು ಇವರ ಅನನ್ಯ ಸೇವೆಯನ್ನು ಶ್ರೀಮಠ ಗುರುತಿಸಿರುವುದಕ್ಕೆ ಸಾಕ್ಷಿಯಾಗಿದೆ.

“ಸಮಾಜಕ್ಕೆ ಶ್ರೀ ಗುರುಮುಖೇನ ಸೇವೆ ಮಾಡುವ ಅವಕಾಶ ದೊರಕಿರುವುದು ಧನ್ಯತೆಯ ಭಾವ ಮೂಡಿಸಿದೆ. ಪತಿ ಹಾಗೂ ಇಬ್ಬರು ಮಕ್ಕಳ ಸಂಪೂರ್ಣ ಸಹಕಾರದಿಂದಲೇ ಈ ರೀತಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತಿದೆ. ಗೋಸೇವೆ, ಶ್ರೀಮಠದ ಸೇವೆ ನಿರಂತರವಾಗಿ ಮುಂದುವರಿಸುವ ಆಶಯ ನನ್ನದು” ಎನ್ನುವ ಡಾ.ಶಾರದಾ ಜಯಗೋವಿಂದ ಅವರು ಪ್ರಸ್ತುತ ವಿದ್ಯಾ ಸಮಿತಿಯ ಸದಸ್ಯರಾಗಿಯೂ,ಶ್ರೀ ಭಾರತೀ ವಿದ್ಯಾಲಯ ,ಬೆಂಗಳೂರು ಇದರ ಆಡಳಿತ ಸಮಿತಿಯ ಅಧ್ಯಕ್ಷರಾಗಿಯೂ,ಶ್ರೀಮಠದ ಹಲವಾರು ಟ್ರಸ್ಟ್ ಗಳಲ್ಲಿ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣೆಯ ಹೊಣೆಯನ್ನು ಹೊತ್ತು ಗುರಿ ತಲುಪಿದ್ದಾರೆ.

Author Details


Srimukha

Leave a Reply

Your email address will not be published. Required fields are marked *