ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ-೮

ಅರಿವು-ಹರಿವು
ವ್ಯಾಸಮಹರ್ಷಿಗಳ ರೂಪದ ಬೆಳಕು ಶುಕಮಹರ್ಷಿಗಳ ರೂಪದಿಂದ ಹೊರಹೊಮ್ಮಿ ಅವಿಚ್ಛಿನ್ನ ಗುರುಪರಂಪರೆಯನ್ನು ಮುಂದುವರೆಸಿತು. ಗುರುಪರಂಪರೆಗೆ ಮೆರಗು ನೀಡಿ ಲೋಕ ಬೆಳಗಿದ ಶುಕ ಮುನಿಯ ಪಾತ್ರ ಪರಿಚಯವನ್ನು ಮಾಡಿಕೊಳ್ಳೋಣ.
ಶುಕರು ಜನಿಸಿದ್ದು ಅರಣಿಯಲ್ಲಿ. (ಅರಣಿಯೆಂದರೆ ಯಜ್ಞಾಗ್ನಿಯನ್ನು ಸಿದ್ಧಪಡಿಸುವ ಸಾಧನ).
ವ್ಯಾಸರು ಅಗ್ನಿಯಂತಹ, ಭೂಮಿಯಂತಹ, ಜಲದಂತಹ, ವಾಯುವಿನಂತಹ, ಅಂತರಿಕ್ಷದಂತಹ ಧೈರ್ಯಹೊಂದಿರುವ ಪುತ್ರಾಪೇಕ್ಷೆಯ ಸುಸಂಕಲ್ಪವ  ಹೊತ್ತು ಮಹೇಶ್ವರನ ಕುರಿತು  ದಿವ್ಯಂಶತವರ್ಷಗಳ ದೀರ್ಘತಪಸ್ಸನ್ನಾಚರಿಸುತ್ತಾರೆ. ತತ್ಫಲವಾಗಿ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾಗಿ ಅಗ್ನಿಯಂತಹ, ವಾಯುವಿನಂತಹ, ಭೂಮಿಯಂತಹ, ಜಲದಂತಹ ಶುದ್ಧವಾದ ಮಹಾತ್ಮನಾದ ಸುತ ಜನಿಸುವನೆಂದು ವರ ದಯಪಾಲಿಸುತ್ತಾನೆ. ವರ ಪಡೆದು ಬಂದಾಕ್ಷಣವೇ ಅಲ್ಲಿ ಕೆಲ ನಿಮಿತ್ತಗಳು ಉಂಟಾದವು. ಘೃತಾಚೀ ಎಂಬ ಅಪ್ಸರಕನ್ಯೆಯು ಗಿಳಿ ರೂಪದಲ್ಲಿ ಅವರಿರುವಲ್ಲಿಗೆ ಬಂದಳು. ಆಗ ವ್ಯಾಸರಿಂದ ತೇಜಸ್ಸು ಹೊರಹೊಮ್ಮಿತು. ಅವರ ಆ ತೇಜಸ್ಸನ್ನು ಅರಣಿಯಲ್ಲಿಟ್ಟು ಕಡೆದರು ವ್ಯಾಸರು. ಅವರ ಮನೋಭಿಲಾಷೆಯಂತೆಯೇ ಬ್ರಹ್ಮರ್ಷಿ ಮಹಾಯೋಗಿಯ ಜನನವಾಯಿತು. ಶುಕರಿಗೆ ತಂದೆಯದೇ ವರ್ಚಸ್ಸು. ಆ ತಂದೆಯ ಗೌರವದ ಜೊತೆ ಸೇರಿದ್ದು ಇವರಿಗೆ ಅಗ್ನಿಸದೃಶವಾದ ತೇಜಸ್ಸು. ಆ ತೇಜಸ್ಸು ಎಷ್ಟಿತ್ತೆಂದರೆ ಅಗ್ನಿಗೆ ಸಮಿತ್ತುಗಳನ್ನು, ಹವಿಸ್ಸನ್ನು ಹದವಾಗಿ ಹಾಕಿದರೆ ಎಂತಹ ಪ್ರಾಜ್ವಲ್ಯವಿರಬಹುದೋ ಅಷ್ಟು. ಆದರೆ ಅಂತಹ ಬೆಳಕಿನೊಟ್ಟಿಗೆ ಲೋಕವ ತಣಿಸುವ ತಂಪು ಮಾತ್ರ ; ತಲ್ಲಣಿಸುವ ಬಿಸಿ ಅಲ್ಲ. ಇಂತಹ ಶುಕಮುನಿಯ ವ್ಯಕ್ತಿತ್ವ ನಿರ್ಧೂಮ ಪಾವಕದಂತೆ.
ಈ ಶುಕಶಿಶುವಿನ ಜನನವಾದ ಕೂಡಲೇ ಮೇರುಪರ್ವತದ ಪರಿಸರದಲ್ಲಿ ಅಸದೃಶ ಬದಲಾವಣೆಗಳಾದವು. ಗಂಗೆಯೇ ಹರಿದುಬಂದು ಶಿಶುವಿಗೆ ತನ್ನ ಹೃದಯದ್ರವದಿಂದ ತರ್ಪಿಸಿದಳು. ಅಂತರಿಕ್ಷವು ಪಲಾಶದಂಡ, ಕೃಷ್ಣಾಜಿನವನ್ನು ಧರೆಗೆ ಕಳುಹಿಸಿತು. ದೇವರಾಜ ಇಂದ್ರ ಪ್ರತ್ಯಕ್ಷನಾಗಿ ದೇವವಸ್ತ್ರ, ಕಮಂಡಲು ಪ್ರದಾನ ಮಾಡಿದ. ದೇವತೆಗಳ, ದೇವರ್ಷಿಗಳ ಆಗಮನವಾಯಿತು. ಗಂಧರ್ವರು ಅತಿಶಯ ಸಂತೋಷದಿಂದ ಹಾಡಿದರು. ಅಪ್ಸರೆಯರು ನರ್ತಿಸಿದರು. ದೇವದುಂದುಭಿಗಳು ಮೊಳಗಿದವು. ವಾಯುದೇವ ದಿವ್ಯಪುಷ್ಪಗಳ ಮಳೆಗೈದ. ಆನಂದಸಾಗರವನ್ನೇ ಹೊತ್ತುತಂದ ಶುಕಶಿಶುವಿನಿಂದ ಪ್ರಕೃತಿಯ ಜಂಗಮಾಜಂಗಮಗಳು ಅತಿಶಯ ಸಂತೋಷ ತಾಳಿದವು. ಈ ಆನಂದಕಂದನಿಗೆ ಜಾತಮಾತ್ರವೇ ಉಪನಯನವಾಯಿತು. ಇದು ಹೇಗೆ ನಡೆಯಿತು ಮುಂದೇನಾಯಿತೆಂದು ಮುಂದಿನ ಸಂಚಿಕೆಯಲ್ಲಿ ಅವಲೋಕಿಸುವ.

Leave a Reply

Your email address will not be published. Required fields are marked *