ಶ್ರೀಮದಾಚಾರ್ಯ ಶಂಕರ ಭಗವತ್ಪಾದರಿಂದಲೇ ರಘೂತ್ತಮ ಮಠದ ಪ್ರಥಮ ಪೀಠಾಧಿಪತಿಯಾಗಿ ಆಯ್ಕೆಗೊಂಡ ಶ್ರೀಮದಾಚಾರ್ಯ ವಿದ್ಯಾನಂದರಿಂದ ಅರಿವಿನ ದೆಸೆಗಾಗಿ ಅನೇಕ ಲೋಕಕಲ್ಯಾಣ ಕಾರ್ಯಗಳು ಜರುಗಿದವಲ್ಲದೇ, ಅರಿವಿನ ಅವಿಚ್ಛಿನ್ನ ಹರಿವಿಗಾಗಿ ಚಿದ್ಬೋಧಭಾರತಿಗಳನ್ನು ಪರಂಪರೆಯ ಉತ್ತರಾಧಿಕಾರಿಯಾಗಿ ನೇಮಿಸುವ ಮೂಲಕ ಆ ಪರಮ ತತ್ವವನ್ನು ತೋರುವ ಗುರುವಾಗಿರಿಸಿ ನಮಗೆ ಅನುಸರಣೀಯ ಕೇಂದ್ರವಾಗಿಸಿದರು. ನಂತರ ವಿದ್ಯಾನಂದರು ಪರಬ್ರಹ್ಮ ತತ್ವದಲ್ಲಿಯೇ ಮನವನ್ನು ನೆಲೆಗೊಳಿಸಿ ಬ್ರಹ್ಮಲೀನರಾದರು. ಈ ನಮ್ಮ ಮಠದ ಪ್ರಥಮ ಪೀಠಾಧಿಪತಿಯಾಗಿದ್ದ ಪೂಜ್ಯ ಶ್ರೀ ವಿದ್ಯಾನಂದಾಚಾರ್ಯರ ಸಮಾಧಿಯು ಗೋಕರ್ಣದ ಸಾಗರತೀರದಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ ಉಲ್ಲಿಖಿತವಾದ ವರುಣತೀರ್ಥದ ಬಳಿ ಸಂಸ್ಥಾಪಿತವಾಗಿದೆ. ಅಜ್ಞಾತವಾಗಿದ್ದ ಈ ಸಮಾಧಿಯನ್ನು ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸಂಸ್ಥಾನದವರು ಪತ್ತೆ ಮಾಡಿಸಿ ಆ ಸ್ಥಳದಲ್ಲಿ ತಾಮ್ರದ ಛಾವಣಿಯುಳ್ಳ ಶಿಲಾಮಯ ಕಟ್ಟಡವನ್ನು ನಿರ್ಮಾಣ ಮಾಡಿಸಿ ನಂದನ ಸಂವತ್ಸರದ ಮಾಘ ಕೃಷ್ಣ ಷಷ್ಠೀ ರವಿವಾರದಂದು ಶ್ರೀವಿದ್ಯಾನಂದರ ಗುರುಮೂರ್ತಿಯ ಪುನಃ ಪ್ರತಿಷ್ಠಾ ಕಾರ್ಯವನ್ನು ನೆರವೇರಿಸಿದ್ದಾರೆ.
ಶ್ರೀ ರಘೂತ್ತಮ ಮಠದ ಪರಂಪರೆಯ ಎರಡನೇ ಪೀಠಾಧಿಪತಿಗಳಾಗಿ ಯೋಗಪಟ್ಟಾಭಿಷಿಕ್ತರಾದ ಪೂಜ್ಯ ಶ್ರೀ ಶ್ರೀ ಚಿದ್ಬೋಧ ಭಾರತಿಗಳು ಮಹಾತಪಸ್ವಿಗಳು. ಇವರೇ ಪ್ರಥಮ ಚಿದ್ಬೋಧಭಾರತಿ ಪದಭೂಷಿತರು. ಗೋಕರ್ಣದ ಶ್ರೀಮಠದಲ್ಲಿ ವಸತಿ ಮಾಡಿದ್ದ ಶ್ರೀಗಳು ‘ಮಠಶ್ಛಾತ್ರಾದಿನಿಲಯಃ’ ಎಂಬ ಪ್ರಾಚೀನೋಕ್ತಿಗೆ ದೃಷ್ಟಾಂತವಾಗಿ ಶ್ರೀಮಠದಲ್ಲಿ ನೂರಾರು ಶಿಷ್ಯರಿಗೆ ವೇದಾಂತಾದಿ ಶಾಸ್ತ್ರಾಧ್ಯಾಪನ ಮಾಡುತ್ತಿದ್ದರು. ಸದಾ ತತ್ವಾರ್ಥ ಚಿಂತನೆಯಲ್ಲಿ ಆಸಕ್ತರಾಗಿದ್ದು ಯುಕ್ತಕಾಲದಲ್ಲಿ ಶಿಷ್ಯವರ್ಗ ಸಂಚಾರಗೈಯುತ್ತಾ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಗುರುಪರಂಪರೆಯ ಆದೇಶಕ್ಕನುಗುಣವಾಗಿ ನಿತ್ಯವೂ ಸಾರ್ವಭೌಮನಾದ ಮಹಾಬಲನನ್ನು ಹಾಗೂ ಶ್ರೀಸೀತಾರಾಮಾದಿ ದಿವ್ಯಮಂಗಳ ಮೂರ್ತಿಗಳನ್ನು ಅರ್ಚಿಸುತ್ತ, ನಿರ್ಗುಣನಾದ ಪರಮಾತ್ಮನಲ್ಲಿ ಚಿತ್ಸುಖಾನಂದವನ್ನು ಅನುಭವಿಸಿದರು. ಪೂಜ್ಯ ಶ್ರೀ ಚಿದ್ಬೋಧ ಭಾರತಿ ಶ್ರೀಗಳ ದಿವ್ಯನಾಮ ಸ್ಮರಣಮಾತ್ರದಿಂದಲೇ ಎಲ್ಲ ಪಾಪಗಳೂ ಕಳೆದುಹೋಗಿ ಶಾಶ್ವತವಾದ ಅರಿವು ಲಭ್ಯವಾಗುತ್ತದೆ ಎನ್ನುವುದು ಪೂಜ್ಯರ ಬಗ್ಗೆ ಇರುವ ಮಂಗಳಾಶಂಸನ. (“ತಸ್ಯ ಸ್ಮರಣಮಾತ್ರೇಣ ಚಿದ್ಬೋಧಸ್ಯ ಮಹಾತ್ಮನಃ| ಸರ್ವಪಾಪವಿನಿರ್ಮುಕ್ತಃ ಪ್ರಾಪ್ನೋತಿ ಶಿವಮವ್ಯಯಮ್||”)
ಇಂತಹ ಮಹಾತ್ಮರಿಂದ ಅರಿವಿನ ಸಾಕ್ಷಾತ್ ರೂಪಿಯಿಂದ ಅರಿವಿನ ಆತ್ಮವಿಸ್ತರವೇ ಎನ್ನಬಹುದಾದುದು ಹೇಗೆ ಜರುಗಿತೆಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.