ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೬

ಅರಿವು-ಹರಿವು
ಗುರು-ಶಿಷ್ಯರ ಬಂಧ ಅನಿರ್ವಚನೀಯವಲ್ಲವೇ..ಸಂನ್ಯಾಸ ಸಂಕಲ್ಪಿತನಾದ ವಟು ಶಂಕರ ಗುರುಗಳನ್ನು ಹುಡುಕಿಕೊಂಡು ಬಂದನೋ ಅಥವಾ ಗುರುವೇ ತಮ್ಮ ಕಾಂತೀಯ ಕ್ಷೇತ್ರದೊಳಗೆ ಸೆಳೆದರೋ ಅದು ನಮ್ಮ ತರ್ಕಕ್ಕೆ ಮೀರಿದ್ದು. ಒಟ್ಟಿನಲ್ಲಿ ಆಚಾರ್ಯ ಶಂಕರರು ನರ್ಮದಾ ನದಿ ದಂಡೆಯ ಗುಹೆಯ ಬಾಯಿ ಬಳಿಗೆ ಬಂದು ನಿಂತರು.
ಕ್ರಮಸಂನ್ಯಾಸವನ್ನು ಪಡೆಯುವ ಸತ್ಕಾಮದ ಈಡೇರಿಕೆಗಾಗಿ ಗುರುಗಳನ್ನು ಸಂಧಿಸಲು ತವಕಿಸಿದರು. ಸಮಾಧಿ ಸ್ಥಿತಿಯಲ್ಲಿ ಪರಮಾನಂದವನ್ನು ಅನುಭವಿಸುತ್ತಿದ್ದ ತಮ್ಮ ಗೌರವಾನ್ವಿತ ಗುರುಗಳನ್ನು ಅತ್ಯಂತ ಪ್ರೇಮದಿಂದ ಸ್ತುತಿಸಿದರು. ಬಾಗಿಲ ಬಳಿ ನಿಂತ ವಟುವನ್ನು ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಗೋವಿಂದ ಭಗವತ್ಪಾದರು ಔಪಚಾರಿಕವೋ ಎಂಬಂತೆ ನೀನು ಯಾರು ಎಂದು ಪ್ರಶ್ನಿಸಿದರು. ನೀವು ಕಾಯುತ್ತಿರುವ ಶಿಷ್ಯನೇ ಹೌದು ಎಂಬುದಕ್ಕೆ ಸಾಕ್ಷಿಯೆಂಬಂತೆಯೋ ಅಥವಾ ಶಿಷ್ಯತ್ವ ಸ್ವೀಕಾರಕ್ಕೆ ಅರ್ಹ ಜೀವಿಯೇ ನಾನು ಎಂಬುದರ ನಿರೂಪಣೆಗೆ ಸರಿಯೆಂಬಂತೆಯೋ,, ದೇಹವಲ್ಲ, ಇಂದ್ರಿಯ ನಾನಲ್ಲ, ಪಂಚಮಹಾಭೂತಗಳೇ ಆದ ಆಕಾಶ, ವಾಯು, ತೇಜ, ಆಪ, ಪೃಥ್ವಿ ಇದ್ಯಾವುದೂ ಅಲ್ಲ, ಮನಸ್ಸಲ್ಲ, ಬುದ್ಧಿಯೂ ಅಲ್ಲ, ಸತ್ವ, ರಜ, ತಮ ಈ ತ್ರಿಗುಣಗಳೂ ನಾನಲ್ಲ, ಇವೆಲ್ಲದರ ಅತೀತವೇ ಆದ ‘ನಾನು’ ಬಂದಿದ್ದೇನೆ. ಶಿಷ್ಯಗ್ರಹಣ ಮಾಡಿ ಎಂಬ ನುಡಿಗಳನ್ನು ಕೇಳಿದ ಭಗವತ್ಪಾದರು ಒಳಕ್ಕೆ ಕರೆದು ಉಪಚರಿಸಿದರು. ಪ್ರಸ್ತುತ ಎಲ್ಲಿಂದ ಬಂದಿರುವ ಬಾಲಕ ಅವನ ಮತ್ತೆಲ್ಲ ಗೋತ್ರಪ್ರವರಗಳನ್ನೂ ತಿಳಿದ ಗೋವಿಂದ ಭಗವತ್ಪಾದರು ಶಂಕರರ ಇಚ್ಛೆಯಂತೆ, ವಿಧಿಸಂಕಲ್ಪದಂತೆ, ಪರಮೇಶ್ವರನ ಸಂಕಲ್ಪಕ್ಕನುಗುಣವಾಗಿಯೇ ಕ್ರಮಸಂನ್ಯಾಸ ದೀಕ್ಷೆಯನ್ನು ಕೊಡಲು ಉತ್ಸುಕರಾಗಿ ಅವಿಚ್ಛಿನ್ನ ಗುರುಪರಂಪರೆಯಲ್ಲಿ ಹರಿದು ಬಂದ ಅರಿವಿನ ಸಾರವನ್ನು ಉಪದೇಶಿಸಿದರು. ಅಲ್ಲಿ ನಡೆದ ಉಪದೇಶಗಳೂ, ಸಾಂದರ್ಭಿಕ ಘಟನೆಗಳೂ, ವಿವಿಧ ಉಲ್ಲೇಖಗಳಲ್ಲಿ ವಿವಿಧವಾಗಿ ಕಂಡುಬಂದರೂ ಒಟ್ಟಿನಲ್ಲಿ ವೇದಾಂತದರ್ಶನವನ್ನು,  ಅದ್ವೈತ ತತ್ವವನ್ನೂ ಆ ಪರಮೇಶ್ವರ ಸ್ವರೂಪಿ ಶಂಕರರಿಗೆ ಪ್ರಚೋದಿಸಿದರೆಂಬುದಷ್ಟನ್ನು ನಾವು ಅರಿಯಬೇಕಾಗಿದೆ. ಕ್ರಮಸಂನ್ಯಾಸ ದೀಕ್ಷೆಯನುಸಾರವಾಗಿ ಕೆಲವು ಮೂಲಭೂತ ಆಚರಣೆಗಳಾದ ಕೌಪೀನ ಕಾಷಾಯವಸ್ತ್ರ ಧಾರಣೆ, ಶಿಖೆ-ಯಜ್ಞೋಪವೀತ ತ್ಯಾಗ, ಲೋಕಸಂಚಾರ, ಜ್ಞಾನ ಪ್ರಸಾರ, ಆಯಸ್ಸಿರುವವರೆಗೆ ದೇಹಧಾರಣೆಗಾಗಿ ನಿಹಿತವಾದ ಹಲವು ಮನೆಗಳಲ್ಲಿ ಭಿಕ್ಷಾಟನೆ, ಇನ್ನೂ ಇತ್ಯಾದಿಗಳನ್ನು ತಿಳಿಸಿದ ಗೋವಿಂದ ಭಗವತ್ಪಾದಾಚಾರ್ಯರು ‘ಬ್ರಹ್ಮವೇ ನೀನು’ ಎಂಬ ಪರಮಶ್ರೇಷ್ಠ ಸತ್ಯವನ್ನು ಉಪದೇಶಿಸಿದರು ಮತ್ತು ಆ ಕಾಲದಲ್ಲಿ ಹಲವರಿಂದ ಅನ್ಯಅನ್ಯಾರ್ಥಗಳಿಗೊಳಗಾಗಿದ್ದ ಗೀತ, ವೇದವಾಕ್ಯಗಳಿಗೆ ಭಾಷ್ಯವನ್ನು ರಚಿಸಲು ಆಗ್ರಹಿಸಿ ಅನುಗ್ರಹಿಸಿದರು ಎಂಬಲ್ಲಿಗೆ ಇಂದಿನ ಸಂಚಿಕೆಯನ್ನು ಸಂನ್ಯಸ್ತರಾಗಿ ನಮ್ಮೆಲ್ಲರ ಬಾಳಿಗೆ ಬೆಳಕಾದ ಆಚಾರ್ಯ ಶಂಕರರ ಪಾದದಡಿಯಲ್ಲಿಟ್ಟು ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *