ರಾಘವೇಶ್ವರ ಶ್ರೀ ಸೀಮೋಲ್ಲಂಘನೆ, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ

ಮಠ

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಹಾಗೂ ಶ್ರೀಮಠದ ವತಿಯಿಂದ ನೀಡಲಾಗುವ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ (ಸೆ. 2) ಗೋಕರ್ಣ ಬಳಿಯ ಅಶೋಕವನದಲ್ಲಿ ನಡೆಯಲಿದೆ.
ಸೀಮೋಲ್ಲಂಘನೆ ಅಂಗವಾಗಿ ಗಂಗಾವಳಿ ನದಿಯನ್ನು ದಾಟಿ ಅಶೋಕೆಗೆ ಮರಳಿ ಧರ್ಮಸಭೆ ನಡೆಸುವರು. ಕೆ.ಎಸ್.ಗುರುಮೂರ್ತಿ ಶಿಕಾರಿಪುರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಲಿದ್ದಾರೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೂಲತಃ ಶಿರವಂತೆ ಸೀಮೆ ಹೊಸಳ್ಳಿ ಗ್ರಾಮದ ಕಲ್ಸೇಮನೆ ವಾಸಿ ಸಿಬ್ಬಯ್ಯನವರ ಪುತ್ರರಾದ ಗುರುಮೂರ್ತಿಯವರು ಸಾಗರ ಪಶ್ಚಿಮ ವಲಯ ನಿವಾಸಿ.
ಅಶೋಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದೊಂದಿಗೆ ಈ ಬಾರಿಯ ಚಾತುರ್ಮಾಸ್ಯವನ್ನು ವಿದ್ಯಾ ಚಾತುರ್ಮಾಸ ವ್ರತವಾಗಿ ಆಷಾಢ ಹುಣ್ಣಿಮೆಯಿಂದ ಭಾದ್ರಪದ ಹುಣ್ಣಿಮೆವರೆಗೆ ಆಚರಿಸಲಾಗಿದೆ. ಚಾತುರ್ಮಾಸ್ಯದ ನಡುವೆಯೇ ಶ್ರೀಗಳು ಸರ್ವಸಮಾಜದವರಿಗಾಗಿ ಗೋಕರ್ಣ ಬಳಿ ಆರಂಭಿಸುತ್ತಿರುವ ಶ್ರೀಸಾರ್ವಭೌಮ ಗುರುಕುಲ ಮತ್ತು ಶ್ರೀ ರಾಜರಾಜೇಶ್ವರಿ ಗುರುಕುಲಗಳ ಆನ್‍ಲೈನ್ ತರಗತಿ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಕುಡ್ಲೆ ಬೀಚ್ ಸಮೀಪ ಉಭಯ ಗುರುಕುಲಗಳ ಸಮುಚ್ಛಯ ಪ್ರಾಣಾಂಕುರ ಪ್ರಾಂಗಣ ಈಗಾಗಲೇ ಸಜ್ಜುಗೊಂಡಿದೆ ಎಂದು ವಿವರಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಸರ್ಕಾರದ ನೀತಿ ನಿಯಮಗಳಿಗೆ ಅನುಸಾರವಾಗಿ ದೊಡ್ಡಸಂಖ್ಯೆಯ ಶಿಷ್ಯಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೇ ಸರಳವಾಗಿ ಚಾತುರ್ಮಾಸ್ಯ ಆಚರಿಸಲಾಗಿದ್ದು, ಚಾತುರ್ಮಾಸ್ಯ ಅವಧಿಯಲ್ಲಿ ಗುರುಕುಲ ಸ್ಥಾಪನೆಯಂಥ ಶಾಶ್ವತ ಕಾರ್ಯಗಳು ನಡೆದಿವೆ ಎಂದು ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮತ್ತಿತರರು ಸೀಮೋಲ್ಲಂಘನ ಧರ್ಮಸಭೆಯಲ್ಲಿ ಪಾಲ್ಗೊಳ್ಳುವರು.

Author Details


Srimukha

Leave a Reply

Your email address will not be published. Required fields are marked *