ತಾಳ್ಮೆ ಜೀವನದ ಅಮೂಲ್ಯ ಸಂಪತ್ತು: ರಾಘವೇಶ್ವರ ಶ್ರೀ

ಮಠ

ಗೋಕರ್ಣ: ತಾಳ್ಮೆ ಪ್ರತಿಯೊಬ್ಬರ ಜೀವನದ ಅಮೂಲ್ಯ ಸಂಪತ್ತು. ತಾಳ್ಮೆ ಎಂಬ ಮಹಾ ಸಂಪತ್ತು ನಮ್ಮೆಲ್ಲರ ಬದುಕಿನಲ್ಲಿ, ವ್ಯಕ್ತಿತ್ವದಲ್ಲಿ ಬರಲಿ; ಈ ಮೂಲಕ ಜೀವನ ಸುಖಮಯವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಆಶಿಸಿದರು.
ಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಹನ್ನೊಂದನೇ ದಿನವಾದ ಶನಿವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ತಾಳ್ಮೆ ಕಡಿಮೆ ಇದ್ದರೆ, ನಿರೀಕ್ಷಿತ ಫಲ ಪಡೆಯಲು ಸಾಧ್ಯವಿಲ್ಲ. ತಾಳ್ಮೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಗ ಜೀವನ ಸುಂದರವಾಗುತ್ತದೆ” ಎಂದರು.


ಬೆಳಿಗ್ಗೆ ಕಾಳು ಬಿತ್ತಿ ಸಂಜೆಗೆ ಪೈರು ಬರಲು ಸಾಧ್ಯವೇ? ಹೀಗೆ ಜೀವನದಲ್ಲೂ ತಾಳ್ಮೆ ಅತ್ಯಂತ ಮಹತ್ವ. ಜೀವನದಲ್ಲೂ ನಾವು ಅವಸರ ಮಾಡುತ್ತೇವೆ. ಇದು ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಮಂಕು ತಿಮ್ಮನ ಕಗ್ಗವನ್ನು ಉದಾಹರಿಸಿದರು. ಜೀವನದಲ್ಲಿ ಕಾಲಕ್ಕೆ ಅತ್ಯಂತ ಮಹತ್ವ ಇದೆ. ಸೂಕ್ತ ಕಾಲಕ್ಕೆ ಕಾಯುವ ತಾಳ್ಮೆ ನಮಗೆ ಬೇಕು. ವೇಳೆಯ ಗಡುವು ಮರೆತರೆ ಹದ ತಪ್ಪುತ್ತದೆ. ತಾಳುಮೆಯೇ ಪರಿಪಾಕ ಎಂದು ಡಿವಿಜಿಯವರು ಕಗ್ಗದಲ್ಲಿ ಬಣ್ಣಿಸಿದ್ದಾರೆ ಎಂದು ವಿವರಿಸಿದರು.
ಒಬ್ಬ ವ್ಯಕ್ತಿಯ ಬಗ್ಗೆ ತೀರ್ಮಾನಕ್ಕೆ ಬರುವ ಮುನ್ನ ಸಾಕಷ್ಟು ಯೋಚಿಸಬೇಕು. ಯಾವ ವಿಷಯದ ಬಗ್ಗೆಯೂ ತೀರ್ಮಾನಕ್ಕೆ ಬರುವಾಗ ಅವಸರ ಮಾಡದೇ, ಹತ್ತು ಬಾರಿ ಪರಾಮರ್ಶೆ ಮಾಡಬೇಕು ಎಂದು ಸುಂದರ ಕಥೆಯೊಂದರ ಮೂಲಕ ನಿರೂಪಿಸಿದರು.
ತಂದೆ ತನ್ನ ಐದಾರು ವರ್ಷದ ಮಗಳ ಜತೆ ಆಡುತ್ತಿದ್ದಾಗ ಮಗು ಸೇಬುಹಣ್ಣು ಅಪೇಕ್ಷೆ ಪಟ್ಟಿತು. ತಂದೆ ಎರಡು ಸೇಬು ಖರೀದಿಸಿ ಮಗುವಿಗೆ ನೀಡಿದ. ಮಗುವಿಗೆ ಖುಷಿಯಾಯಿತು. ಎರಡೂ ಕೈಗಳಲ್ಲಿ ಹಿಡಿದು ಸಂಭ್ರಮಿಸಿತು. ಈ ಹಂತದಲ್ಲಿ ತಂದೆ ಒಂದು ಸೇಬು ತನಗೆ ನೀಡುವಂತೆ ಮಗುವನ್ನು ಕೇಳಿದ. ಆಗ ಮಗು ಎರಡೂ ಹಣ್ಣುಗಳನ್ನು ಸ್ವಲ್ಪ ಸ್ವಲ್ಪ ಕಚ್ಚಿ ಕೈಯಲ್ಲಿ ಹಿಡಿದುಕೊಂಡಿತು.
ಆಗ ತಾನೇ ಬೆಳೆಸಿದ ಮಗು ಎಷ್ಟು ಸ್ವಾರ್ಥಿಯಾಗಿ ಬೆಳೆಯಿತು, ಇದಕ್ಕೆ ನಾನು ಸೂಕ್ತ ಸಂಸ್ಕಾರ ನೀಡಿಲ್ಲ ಎಂಬ ಭಾವನೆ ತಂದೆಯಲ್ಲಿ ಬಂದು ಮುಖದಲ್ಲಿದ್ದ ನಗು ಮಾಯವಾಯಿತು. ಒಂದು ಕ್ಷಣದ ಬಳಿಕ ಮಗು ಈ ಹಣ್ಣು ಹೆಚ್ಚು ಸಿಹಿ ಇದೆ ಎಂದು ಹೇಳಿ ಅದನ್ನು ತಂದೆಗೆ ಕೊಟ್ಟಿತು. ಎರಡರ ಪೈಕಿ ರುಚಿಯಾದ ಹಣ್ಣನ್ನು ತಂದೆಗೆ ಕೊಡಬೇಕು ಎಂಬ ಕಾರಣಕ್ಕೆ ಮಗು ಶಬರಿಯಂತೆ ಎರಡೂ ಹಣ್ಣಿನ ರುಚಿ ನೋಡಿತು. ಆದರೆ ತಂದೆ ತಾಳ್ಮೆ ತಪ್ಪಿದ್ದರಿಂದ ಮಗು ಸ್ವಾರ್ಥಿ ಎಂಬ ಭಾವನೆ ತಂದೆಯಲ್ಲಿ ಮೂಡಿತು. ತಂದೆ ಸ್ವಲ್ಪಮಟ್ಟಿಗೆ ತಾಳ್ಮೆ ವಹಿಸಿದ್ದರೆ ಮಗುವಿನ ಬಗ್ಗೆ ಹೆಮ್ಮೆ ಎನಿಸುತ್ತಿತ್ತು ಎಂದು ವಿಶ್ಲೇಷಿಸಿದರು.
ಎಷ್ಟೋ ಬಾರಿ ನಮ್ಮ ಜೀವನದಲ್ಲಿ ಕಲಹ, ಯುದ್ಧಗಳಿಗೆ ಇಂಥ ತಪ್ಪುಗ್ರಹಿಕೆ ಕಾರಣವಾಗುತ್ತದೆ. ಸ್ವಲ್ಪ ತಾಳ್ಮೆ, ಸಮಾಧಾನ ಬೇಕು. ಎಲ್ಲ ದೃಷ್ಟಿಕೋನಗಳಿಂದ ಯೋಚನೆ ಮಾಡಬೇಕು. ಪರಾಮರ್ಶೆ ಮಾಡದಿದ್ದಾಗ ನಾವು ಬಹಳಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ.
ಅವಸರದಲ್ಲಿ ಅಪಾರ್ಥವಾಗುತ್ತದೆಯೇ ವಿನಃ ಅರ್ಥವಾಗುವುದಿಲ್ಲ. ತಾಳ್ಮೆ ಜೀವನದ ಅತ್ಯಮೂಲ್ಯ ಸಂಪತ್ತು. ಸಾಧ್ಯವಾದಷ್ಟೂ ತಾಳ್ಮೆಯಿಂದ ಜೀವನ ಕಳೆಯೋಣ ಎಂದು ಕಿವಿ ಮಾತು ಹೇಳಿದರು.
ಶನಿವಾರದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎಚ್.ಸಿ.ಆಕಾಶ್ ಹಾಗೂ ಆದಿತ್ಯ ಎಚ್.ಸಿ. ಗಮಕ ವಾಚನ ನಡೆಸಿಕೊಟ್ಟರು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ, ಆಂಜನೇಯನ ಪ್ರೀತ್ಯರ್ಥವಾಗಿ ತ್ರಿಮಧುರಯುಕ್ತ ಬಾಳೆಹಣ್ಣಿನ ಹವನವನ್ನು ನೆರವೇರಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *