ನಂಬಿಕೆ ಜೀವನಕ್ಕೆ ಅಮೃತ ಇದ್ದಂತೆ: ರಾಘವೇಶ್ವರ ಶ್ರೀ

ಮಠ

ಗೋಕರ್ಣ: ನಂಬಿಕೆ ಎಂಬ ಭಾವ ಜೀವನಕ್ಕೆ ಅಮೃತ ಇದ್ದಂತೆ. ದೇವರು ನಮ್ಮನ್ನು ಕಾಪಾಡುವ ಬದಲು ಅಚಲವಾದ ನಂಬಿಕೆ ಅಥವಾ ಭರವಸೆಯೇ ನಮ್ಮನ್ನು ಕೋಟೆಯಾಗಿ ನಮ್ಮನ್ನು ಕಾಯುತ್ತದೆ. ಆದ್ದರಿಂದ ಎಲ್ಲರೂ ದೇವರು, ಧರ್ಮ, ಗುರುವಿನಲ್ಲಿ, ಒಳಿತಿನಲ್ಲಿ ನಂಬಿಕೆ ಇಟ್ಟುಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಎಂಟನೇ ದಿನವಾದ ಬುಧವಾರ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಬಲವಾದ ನಂಬಿಕೆ ಇದ್ದರೆ ಅದು ಎಂದಿಗೂ ಹುಸಿಯಾಗುವುದಿಲ್ಲ. ಅತ್ಯಂತ ದೃಢವಾದ, ಅಚಲವಾದ ನಂಬಿಕೆಯೆಂಬ ಭಾವವೇ ಎಲ್ಲ ಸಾಧನೆಯನ್ನು ಮಾಡಿಕೊಳ್ಳುತ್ತದೆ. ನಂಬಿಕೆ ಎನ್ನುವುದು ನಮ್ಮನ್ನು ಹಾಗೂ ಭಗವಂತನನ್ನು ಬಂಧಿಸುವ ಭಾವ. ಇದು ಎಲ್ಲ ತರ್ಕ, ವಿಚಾರ, ಪುರಾವೆಗಳ ಸಂಕೋಲೆಯನ್ನು ಮೀರಿದ್ದು ಎಂದು ವಿಶ್ಲೇಷಿಸಿದರು.


ತಂದೆ, ತಾಯಿ, ದೇವರ ಮೇಲೆಯೂ ನಮಗೆ ವಿಶ್ವಾಸವಿಲ್ಲದ ಸ್ಥಿತಿ ಇದೆ. ಆದರೆ ವಾಸ್ತವವಾಗಿ ದೇವರಲ್ಲಿ ಅಚಲವಾದ ನಂಬಿಕೆ, ವಿಶ್ವಾಸ ಇಡಬೇಕು. ನಮ್ಮನ್ನು ಬಂಧಿಸಿದ ಹಗ್ಗವನ್ನು ಕಡಿಯಬೇಕು ಎಂದು ಮಾರ್ಮಿಕವಾಗಿ ನುಡಿದರು. ನಮ್ಮನ್ನು ಬಂಧಿಸಿದ ಸಂಸಾರವೆಂಬ ಹಗ್ಗವನ್ನು ಸಂದರ್ಭ ಬಂದಾಗ ಕಡಿದುಕೊಳ್ಳಲು ನಾವು ಮುಂದಾಗದಿದ್ದರೆ ಮುಕ್ತಿ ನಮಗೆ ಪ್ರಾಪ್ತವಾಗುವುದಿಲ್ಲ ಎಂದು ಬಣ್ಣಿಸಿದರು.
ಸನ್ಯಾಸ ಎಲ್ಲ ಬಂಧವನ್ನು ಕಳಚಿಕೊಳ್ಳುವ ಅಪೂರ್ವ ಅನುಭವ. ಬಂಧನವನ್ನು ಕಳಚಿಕೊಂಡರೆ ಮಾತ್ರ ಪರಮಾತ್ಮನನ್ನು ಸೇರಿಕೊಳ್ಳಲು ಸಾಧ್ಯ. ಭಗವಂತನ ಸಂದೇಶ ನಮಗೆ ಅರ್ಥವಾಗುವುದಿಲ್ಲ. ಅದನ್ನು ಅಕ್ಷರಶಃ ಪಾಲಿಸಿದಾಗ ಮಾತ್ರ ನಮಗೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಚಾತುರ್ಮಾಸ್ಯದ ಅಂಗವಾಗಿ ಬುಧವಾರ ಗಣಪತಿ ಪೂಜೆ, ಪುಣ್ಯಾಹ ವಾಚನ, ಕಲಶ ಸ್ಥಾಪನೆ, ನವಗ್ರಹ ಪೂರ್ವಕ ಉಪನಿಷತ್ ಹವನ, ರಾಮತಾರಕ ಹವನ ಮತ್ತು ರುದ್ರಹವನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದುಷಿ ವೈಷ್ಣವಿ ಆನಂದ್ ಅವರಿಂದ ಕರ್ನಾಟಕ ಸಂಗೀತ ಗಾಯನ ನಡೆಯಿತು. ವಿದ್ವಾನ್ ಮೈಸೂರು ಎಚ್.ಎನ್.ಭಾಸ್ಕರ್ ವಯಲಿನ್‍ನಲ್ಲಿ ಮತ್ತು ವಿದ್ವಾನ್ ಪತ್ರಿ ಸತೀಶ್ ಕುಮಾರ್ ಅವರು ಮೃದಂಗದಲ್ಲಿ ಸಹಕರಿಸಿದರು.

Leave a Reply

Your email address will not be published. Required fields are marked *