ಪೆರಾಜೆ: ಭಾರತೀಯವಾದ ಅನೇಕ ವಿದ್ಯೆಗಳಿಗೆ ಅಮೂಲಾಗ್ರ ಶಿಕ್ಷಣದ ಕೊರತೆ ಇದೆ. ಎಲ್ಲಾ ವಿಧ್ಯೆಗಳು ಒಂದೇ ಸೂರಿನಲ್ಲಿ ಸಿಗಬೇಕೆಂಬ ನಿಟ್ಟಿನಲ್ಲಿ ವಿಶ್ವವಿದ್ಯಾ ಪೀಠದ ಸ್ಥಾಪನೆ ನಡೆಸಲಾಗುತ್ತಿದೆ. ಭಾರತೀಯತೆಯ ಜತೆಗೆ ಸಮಯುಗದ ಅಗತ್ಯಗಳನ್ನು ಕಲಿಸುವ ಕಾರ್ಯ ಮಾಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ನಿಷ್ಠೆ ಹಾಗೂ ಜ್ಞಾನವನ್ನು ತುಂಬುವ ಕಾರ್ಯವಾಗಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಹೇಳಿದರು.
ಅವರು ಶುಕ್ರವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದ ಜನಭವನದಲ್ಲಿ ಫೆ.16ರಂದು ಮಂಗಳೂರಿನಲ್ಲಿ ನಡೆಯುವ ವಿವಿ ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾರ್ಗದರ್ಶನ ಮಾಡಿದರು.
ಪೂರ್ಣ ವಿಕಾಸಕ್ಕೆ ಸಮಯವನ್ನು ತೆಗೆದುಕೊಳ್ಳುವ ವಿಶಿಷ್ಟ ಹಾಗೂ ವಿಭಿನ್ನ ಕಲ್ಪನೆಯ ಕೇಂದ್ರವಾಗಿದೆ. ವಿಶ್ವವಿದ್ಯಾ ಪೀಠದಲ್ಲಿ ಯಾವ ರೀತಿಯ ಬೇದಭಾವಗಳಿರುವುದಿಲ್ಲ. ಶಾಖೆಗಳಿಗೆ ಅಗತ್ಯವಿರುವ ಆಚಾರ್ಯರು ದೇಶದ ಮೂಲೆಮೂಲೆಗಳಿಂದ ಕರೆಸಿಕೊಳ್ಳಲಾಗುತ್ತದೆ. ಅಸ್ತಿತ್ವದಲ್ಲಿ ಇರುವ ವ್ಯವಸ್ಥೆಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಕಾರ್ಯ ಮಾಡಲಾಗುತ್ತಿದೆ. ರಾಮಚಂದ್ರಾಪುರಮಠದಿಂದ ಜಗತ್ತಿಗೆ ಕೊಡುಗೆಯಾಗಿ ಹೊರಹೊಮ್ಮುಬೇಕು ಎಂದು ತಿಳಿಸಿದರು.
ಶ್ರೀರಾಮ, ಶ್ರೀಕೃಷ್ಣ, ಶಂಕರಾಚಾರ್ಯರು ಕಲಿತ ರೀತಿಯ ಶಿಕ್ಷಣವನ್ನು ಎಲ್ಲರಿಗೂ ಕೊಡುವ ಪ್ರಯತ್ನ ಮಾಡಲಾಗುತ್ತದೆ. ಸರಿಯಾಗಿ ಭಾರತೀಯ ವಿದ್ಯೆಯನ್ನು ಕಲಿತವನನ್ನು ವಿದ್ಯೆಯೇ ಸಾಕುತ್ತದೆ. ಸರ್ಕಾರವೂ ಮಾಡದ ಕಲ್ಪನೆಯನ್ನು ಮಠ ಮಾಡಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕಾರ್ಯಕರ್ತರಿಗೆ ಇದೆ ಎಂದರು.
ವಿವಿ ಸಂವಾದದ ಬಗ್ಗೆ ಮಂಗಳೂರು ಮಂಡಲಗಳ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸಮರ್ಪಣೆ ಮಾಡಲಾಯಿತು.
ಸಂಪನ್ಮೂಲ ಖಂಡದ ಶ್ರೀಸಂಯೋಜಕ ಜಯರಾಮ ಕೋರಿಕ್ಕಾರ್, ಸದಾನಂದ ಹೆಗಡೆ ಮುಡಾರೆ, ವಿಶ್ವ ವಿದ್ಯಾ ಸಂವಾದ ಸಮಿತಿ ಅಧ್ಯಕ್ಷೆ ಶೈಲಜಾ ಕೆ. ಟಿ. ಭಟ್, ಮೂಲ ಮಠ ಮಹಾ ಸಮಿತಿ ಅಧ್ಯಕ್ಷ ಪಡೀಲು ಮಹಾಬಲ ಭಟ್, ಹವ್ಯಕ ಮಹಾಮಂಡಲ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ವಿವಿ ಉಪಾಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವಿವಿವಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿಶ್ವ ವಿದ್ಯಾ ಸಂವಾದ ಸಮತಿ ಕಾರ್ಯದರ್ಶಿ ವೆಂಕಟೇಶ್ವರ ಭಟ್ ಮುಳ್ಳುಂಜ ಕಾರ್ಯಕ್ರಮ ನಿರೂಪಿದರು.