ಮಕ್ಕಳಿಗೆ ಗೋವಿನ ಮಹತ್ವದ ಅರಿವು ಮೂಡಿಸುವ ಶಿಕ್ಷಕಿ: ವಿಜಯಾ ಶ್ಯಾನುಭಾಗ್

ಮಾತೃತ್ವಮ್
“ಮಕ್ಕಳಿಗೆ ಎಳವೆಯಿಂದಲೇ ಗೋವಿನ ಮೇಲೆ ಮಮತೆ ಮೂಡಿಸಿದರೆ  ಮುಂದಿನ ಪೀಳಿಗೆಯೂ ಗೋ ಸಾಕಣೆಯತ್ತ ಮನಸ್ಸು ಮಾಡ ಬಹುದಷ್ಟೆ. ಅಳಿಯುತ್ತಿರುವ ಗೋತಳಿಗಳ ಪರಿಚಯ ಮಾಡಿಸಿ, ಆ ಹಸುಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮುಂದೊಂದು ದಿನ ನಮ್ಮ ಸಮಾಜ ಭಾರತೀಯ ಗೋತಳಿಗಳ ಮಹತ್ವವನ್ನು ಜಗತ್ತಿಗೇ ಸಾರಬಹುದು” ಎಂಬುದು ಶಿಕ್ಷಕಿಯಾಗಿರುವ ಶಿರಸಿಯ ವಿಜಯಾ ಶ್ಯಾನುಭಾಗ್ ಅವರ ಅಭಿಪ್ರಾಯ.

ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಾ ಶ್ಯಾನುಭಾಗ್ ಕೆಕ್ಕಾರು ಮಠದಲ್ಲಿ ಶ್ರೀ ಸಂಸ್ಥಾನದವರ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕಕ್ಕೆ ಬಂದವರು.  ಮುಂದೆ ಮಠದ ಎಲ್ಲಾ ಯೋಜನೆಗಳಲ್ಲೂ ಕೈ ಜೋಡಿಸುವ ಮೂಲಕ ಶ್ರೀ ಮಠದ ಬಗ್ಗೆ ಜನ ಮಾನಸದಲ್ಲಿ ಉತ್ತಮ ಭಾವನೆಗಳನ್ನು ಬೆಳೆಸಿ ಇತರರು ಸಹಾ  ಗೋ ಸಂರಕ್ಷಣೆಯಂತಹ ಪುಣ್ಯ ಕಾರ್ಯದಲ್ಲೂ ಸಹಕರಿಸುವಂತೆ ಮಾಡಿದವರು ‌.

ಶಾಲಾ ಶಿಕ್ಷಕಿಯಾಗಿರುವ ಇವರು ತಮ್ಮ ಊರಿನ ಸಮೀಪದಲ್ಲೇ ಇರುವ ಗೋ ಸ್ವರ್ಗದ ಗೋವುಗಳ ಮೇಲೆ ವಿಶೇಷ ಪ್ರೀತಿ, ಕಾಳಜಿ ತೋರುತ್ತಿದ್ದಾರೆ.
ಹಸುಗಳೆಂದರೆ ಕೇವಲ ಮೂಕ ಪ್ರಾಣಿಗಳಲ್ಲ. ಅವರ ಜೊತೆ ಒಡನಾಡಿದಾಗಲೇ ಅವರ ಪ್ರೀತಿ, ಮಮತೆಗಳನ್ನು  ಅರಿಯಲು ಸಾಧ್ಯ , ಗೋ ಸ್ವರ್ಗಕ್ಕೆ ಹೋದವರಿಗೆ ದೊರಕುವ ಶಾಂತಿ, ನೆಮ್ಮದಿ  ಬೇರೆಲ್ಲೂ ಸಿಗಲಾರದು ಎನ್ನುವಷ್ಟು ಗೋ ಪ್ರೇಮಿ ಇವರು.

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಸ್ವೀಕರಿಸಿದ ಅವರು ತಮ್ಮ ಬಿಡುವಿನ ವೇಳೆಗಳನ್ನು ಗೋ ಸ್ವರ್ಗದ ಹಸುಗಳ ಸೇವೆ ಮಾಡಲು ಮೀಸಲಿರಿಸಿದ್ದಾರೆ.

“ನಾವು ಒಂದು ತುತ್ತು ತಿನ್ನುವ ಮೊದಲು ಗೋವಿಗೆ ನೀಡಬೇಕು ಎಂಬ ತತ್ವದಡಿಯಲ್ಲಿ ಸಾಧ್ಯವಾದಷ್ಟು ಗೋ ಸೇವೆ ಮಾಡುತ್ತಿದ್ದೇನೆ. ಇದಕ್ಕೆ ಶ್ರೀ ಮಠ, ಶ್ರೀಗಳ ಆಶೀರ್ವಚನಗಳ ನುಡಿಗಳೇ ಪ್ರೇರಣೆ ,ಶ್ರೀ ಗುರುಗಳನ್ನು ಸ್ಮರಿಸುತ್ತಲೇ ಎಲ್ಲಾ ಕಾರ್ಯಗಳನ್ನು ಆರಂಭಿಸಿದರೆ ಅದರಲ್ಲಿ ಸೋಲೆಂಬುದು ಇಲ್ಲ, ಇದು ನನ್ನ ಜೀವನಾನುಭವ” ಎಂಬುದು ಒಂದು ವರ್ಷದ ಕಾಲ ಒಂದು ಗೋವಿನ ನಿರ್ವಹಣಾ ವೆಚ್ಚ ಭರಿಸಿ ಮಾಸದ ಮಾತೆಯಾಗಿ ಗುರಿ ಸೇರಿದ ವಿಜಯಾ ಶ್ಯಾನುಭಾಗ್ ಅವರ ಅನುಭವದ ಮಾತುಗಳು.

ಹನಿ ಹನಿ ಕೂಡಿ ಹಳ್ಳ ಎಂಬಂತೆ ಹಲವಾರು ಜನರ ಸಹಕಾರದಿಂದ ಗುರಿ ತಲುಪುವಂತಾದೆನೆಂಬ ನಂಬಿಕೆ ಇರುವ ವಿಜಯಾ ಅವರ ನೆಚ್ಚಿನ ಹವ್ಯಾಸ ಕವನ ರಚನೆ. ಗೋಸ್ವರ್ಗದ ಬಗ್ಗೆ, ಗೋವಿನ ಬಗ್ಗೆ ಹಲವು ಕವನಗಳನ್ನು ರಚಿಸಿರುವ ಇವರು ತಮ್ಮ ವಿದ್ಯಾರ್ಥಿಗಳಿಗೂ ಭಾರತೀಯ ಗೋ ತಳಿಗಳ ಪರಿಚಯ ಮಾಡಿಸಿ, ಗೋ ಉತ್ಪನ್ನಗಳ ಉಪಯೋಗದ ಅರಿವು ಮೂಡಿಸಿ, ಬಾಲ್ಯದಿಂದಲೇ ಮಕ್ಕಳಿಗೆ ಹಸುಗಳ ಮೇಲೆ ಪ್ರೀತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಮೃತಪಥ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರಿಗೆ ಪರಿಸರ ಶುಚಿತ್ವದ ಬಗ್ಗೆಯೂ ವಿಪರೀತ ಕಾಳಜಿಯಿದೆ.

“ಜನರ ಮನದಲ್ಲಿರುವ ತಪ್ಪು ಅಭಿಪ್ರಾಯಗಳನ್ನು ಮಾತಿನ ಮೂಲಕ ನಿವಾರಿಸಿದಾಗ ಅವರು ಪೂರ್ಣ ಮನಸ್ಸಿನಿಂದ ಗೋ ಸೇವೆಗೆ ನೀಡುವ ಕಾಣಿಕೆ ಸ್ವೀಕರಿಸುವ ಸಮಯದಲ್ಲಿ ಮೂಡುವ ಆತ್ಮತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ! , ಇನ್ನು ಮುಂದೆಯೂ ಇದೇ ರೀತಿಯಲ್ಲಿ ಗೋ ಸೇವೆ ಮಾಡುವ ಗುರಿ ಇದೆ. ಇದಕ್ಕೆ ಮನೆಯವರ ಪೂರ್ಣ ಸಹಕಾರವೂ ಇದೆ”

ಗೋಸ್ವರ್ಗದ ಗೋವುಗಳಲ್ಲಿ ದೈವಿಕತೆಯನ್ನು ಗುರುತಿಸಿ ಗೋ ಸೇವೆಯಲ್ಲಿ ಸಾರ್ಥಕ ಭಾವ ಕಾಣುತ್ತಿರುವ ವಿಜಯಾ ಶ್ಯಾನುಭಾಗ್ ಅವರಿಗೆ ಮುಂದಿನ ಪೀಳಿಗೆಗೂ ಗೋವಿನ ಮಹತ್ವವನ್ನು ಸಾರಿ, ಗೋಮಾತೆಯ ಅನುಗ್ರಹದಿಂದ ಸುಂದರ ಸಮಾಜ ನಿರ್ಮಾಣವೇ ಮುಂದಿನ ಗುರಿಯಾಗಿದೆ.

Author Details


Srimukha

Leave a Reply

Your email address will not be published. Required fields are marked *