ದೇಶೀ ಹಸುಗಳ ಮಹತ್ವವನ್ನು ಸಮಾಜ ಗುರುತಿಸಿದೆ: ಲಲಿತಾ ಹೆಬ್ಬಾರ್ ಕುಮಟಾ

ಮಾತೃತ್ವಮ್

“ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಪಡೆದವಳು ನಾನು. ಮಾಸದ ಮಾತೆಯಾಗಿ ಸೇರಿದಾಗ ಗುರಿತಲುಪ ಬಲ್ಲೆನೇ ಎಂಬ ಆತಂಕ ಸಹಜವಾಗಿ ಮೂಡಿ ಬಂದಿತ್ತು. ಆದರೆ ಶ್ರೀಗುರು ವಚನಗಳೇ ಗೋಸೇವೆಯಲ್ಲಿ ನನಗೆ ದಾರಿದೀಪ. ಗುರುಚರಣಗಳನ್ನು ಸ್ಮರಿಸಿ ಮುನ್ನಡೆದೆ. ಕೇವಲ ಎರಡೇ ತಿಂಗಳಿನಲ್ಲಿ ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ನನ್ನ ಗುರಿ ತಲುಪಿದೆ. ಎಲ್ಲವೂ ಗೋಮಾತೆ,ಶ್ರೀರಾಮ ದೇವರ ಕೃಪೆ” ಎನ್ನುತ್ತಾರೆ ಕುಮಟಾ ಮಂಡಲದ ಮಾತೃತ್ವಮ್ ನ ಮಂಡಲಾಧ್ಯಕ್ಷೆಯಾಗಿರುವ ಲಲಿತಾ ಹೆಬ್ಬಾರ್.

ಹೊನ್ನಾವರ ತಾಲೂಕು ಗುಂಡಿ ಬೈಲಿನ ಸುಬ್ರಾಯ ಭಟ್ ,ಕಲ್ಯಾಣಿ ಸುಬ್ರಾಯ ಭಟ್ ಇವರ ಪುತ್ರಿಯಾದ ಲಲಿತಾ ಹೆಬ್ಬಾರ್ ಅವರಿಗೆ ಗೋ ಸೇವೆ, ಗುರುಸೇವೆ ಎಂದರೆ ಅತ್ಯಂತ ಪ್ರಿಯ.
ಪತಿ ಬಾಲಚಂದ್ರ ಗಜಾನನ ಹೆಬ್ಬಾರ್ ಕುಮಟಾ ಅವರು ಸಹಾ ಪತ್ನಿಯ ಸೇವೆಗೆ ಸದಾ ಬೆಂಬಲವಾಗಿದ್ದಾರೆ.

ಶ್ರೀ ಸಂಸ್ಥಾನದವರ ಗೋ ಸಂರಕ್ಷಣೆಯ ವಿವಿಧ ಯೋಜನೆಗಳಿಂದಾಗಿ ಸಮಾಜ ದೇಶೀ ಹಸುಗಳ ಮಹತ್ವವನ್ನು ಅರಿತುಕೊಂಡಿದೆ. ಹೆಚ್ಚಿನವರೂ ಗೋಸ್ವರ್ಗದ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಂದೆರಡು ಕಡೆಗಳಲ್ಲಿ ತುಸು ನೋವಿನ ಪ್ರಸಂಗಗಳನ್ನು ಎದುರಿಸಬೇಕಾಗಿ ಬಂದರೂ ಅದನ್ನು ಕಡೆಗಣಿಸಿ ಮುಂದುವರಿದಿದ್ದೇನೆ. ಬಹಳಷ್ಟು ಜನ ಸಂತೋಷದಿಂದ ನನ್ನ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಚಾರ ಎನ್ನುವ ಲಲಿತಾ ಹೆಬ್ಬಾರ್ ಶ್ರೀ ಮಠದ ಸೇವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಕೋಟಿ ನೀರಾಜನ,ಹಾಲುಹಬ್ಬ,ಅಭಯಾಕ್ಷರ ಅಭಿಯಾನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಇವರು ಗೋವಿನ ರಕ್ಷಣೆಗಾಗಿ ರಕ್ತಾಕ್ಷರ ನೀಡಿದ್ದಾರೆ.
“ನಮ್ಮೂರಿಗೆ ಶ್ರೀ ಸಂಸ್ಥಾನದವರು ಆಗಮಿಸಿದರೆ ನಮ್ಮೂರಿನ ಮಾತೆಯರ ಜೊತೆಗೆ ಮುಂಚೂಣಿಯಲ್ಲಿರುವವಳು ನಾನು” ಎನ್ನುವ ಲಲಿತಾ ಹೆಬ್ಬಾರ್ ಹೂವಿನ ಹಾರ ತಯಾರಿಸುವುದರಲ್ಲಿ ಸಿದ್ದಹಸ್ತರು.

ಶ್ರೀರಾಮ ಕಥೆಯ ಸಂದರ್ಭದಲ್ಲಿ ಹಲವಾರು ರೀತಿಯ ವೈವಿಧ್ಯಮಯ ಹಾರಗಳನ್ನು ತಯಾರಿಸಿ ರಾಮದೇವರಿಗೆ ಸಮರ್ಪಿಸುವ ಸೌಭಾಗ್ಯ ಒದಗಿ ಬಂದಿದ್ದು ಪೂರ್ವ ಜನ್ಮದ ಸುಕೃತದಿಂದ ಎಂದು ನುಡಿಯುವ ಇವರು ಒಂದೇ ದಿನದಲ್ಲಿ ಐವತ್ತು ತುಳಸೀ ಹಾರಗಳನ್ನು ಕಟ್ಟಬೇಕಾಗಿ ಬಂದ ಅನುಭವವನ್ನು ಹೇಳುತ್ತಾ “ಅಂದು ನನ್ನಿಂದ ಅಷ್ಟು ಸೇವೆ ಮಾಡಲು ಸಾಧ್ಯವಾಗಿದ್ದು ಶ್ರೀರಾಮನ ಕೃಪೆಯಿಂದ ಎಂದು ಆ ಘಟನೆಯನ್ನು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಾರೆ.

ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸಿ ಮಾಸದ ಮಾತೆಯಾಗಿ ಗುರಿ ತಲುಪಿದ ಇವರು ತಮ್ಮ ಸೊಸೆಯನ್ನು ಸಹಾ ಮಾಸದ ಮಾತೆಯಾಗಿಸಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ತಮ್ಮ ಕುಮಟಾ ಮಂಡಲದಿಂದ ಐವತ್ತಕ್ಕೂ ಹೆಚ್ಚು ಮಾತೆಯರ ಮನವೊಲಿಸಿ ಮಾಸದ ಮಾತೆಯರನ್ನಾಗಿ ಮಾಡಿದ ಲಲಿತಾ ಹೆಬ್ಬಾರ್ ಇವರಿಗೆ ಇನ್ನಷ್ಟು ಮಂದಿ ಮಾಸದ ಮಾತೆಯರನ್ನು ಮಾಡಿ ಶ್ರೀಮಠದ ಸೇವೆಗಳಲ್ಲಿ, ಗೋಮಾತೆಯ ಸೇವೆಗಳಲ್ಲಿ ಅವರು ಸಹಾ ಪಾಲ್ಗೊಂಡು ಪುಣ್ಯಗಳಿಸುವಂತಾಗಲಿ ಎಂಬ ಹಂಬಲ.
ಹಾಡು,ಭಜನೆಗಳನ್ನು ಇಷ್ಟ ಪಡುವ ಇವರು ಶ್ರೀಮಠದ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮೊದಲು ಲಯನೆಸ್ ಕ್ಲಬ್‌ ನ ಕೋಶಾಧ್ಯಕ್ಷರಾಗಿ,ಅಧ್ಯಕ್ಷರಾಗಿ ಅನುಭವವುಳ್ಳವರು. ಕುಮಟಾದ ಮಹಿಳಾ ಬ್ಯಾಂಕ್ ನ ಡೈರೆಕ್ಟರ್ ಆಗಿಯೂ ಇದ್ದವರು.
ತನ್ನ ಎಲ್ಲಾ ಕಾರ್ಯಗಳಿಗೂ ಪತಿಯ, ಮಕ್ಕಳ ಪೂರ್ಣ ಸಹಕಾರವಿದೆ ಎಂದು ಹರ್ಷಿಸುವ ಇವರಿಗೆ ಮಗ,ಸೊಸೆ,ಮೊಮ್ಮಗಳು, ಮಗಳು, ಅಳಿಯ ಎಲ್ಲರೂ ಪೂರ್ಣ ಬೆಂಬಲ ನೀಡುತ್ತಿದ್ದಾರೆ.

” ಇನ್ನಷ್ಟು ಗುರುಸೇವೆಯಲ್ಲಿ ತೊಡಗಿಸಿಕೊಳ್ಳ ಬೇಕು, ಮತ್ತಷ್ಟು ಮಾಸದ ಮಾತೆಯರನ್ನು ಮಾಡ ಬೇಕು ಎಂಬುದೇ ಮುಂದಿನ ಗುರಿ” ಎನ್ನುವ ಲಲಿತಾ ಹೆಬ್ಬಾರ್ ಅವರಿಗೆ ತಮ್ಮ ಗುರಿ ತಲುಪಲು ಶ್ರೀಗುರುಗಳ ಕೃಪೆ ದೊರಕಬಹುದು ಎಂಬ ಭದ್ರ ಭರವಸೆಯೂ ಇದೆ.

Author Details


Srimukha

Leave a Reply

Your email address will not be published. Required fields are marked *