” ದೇಶೀಯ ಗೋವುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ, ಗೋಜನ್ಯ ಉತ್ಪನ್ನಗಳ ಸದುಪಯೋಗಗಳ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಿ ಗೋಸೇವೆ ಮಾಡುವುದೆಂದರೆ ಪೂರ್ವ ಜನ್ಮದ ಸುಕೃತ ” ಎನ್ನುವವರು ಕನ್ಯಾನದ ಪಂಜಜೆ ಮೂಲದ ತೋಟದಮೂಲೆ ನಿವಾಸಿಗಳಾಗಿದ್ದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀಗಿರಿನಗರ ವಲಯದ ಹನುಮಂತ ನಗರದಲ್ಲಿ ವಾಸಿಸುವ ಗಣೇಶ ಭಟ್ ಅವರ ಪತ್ನಿ ಅಕ್ಷತಾ.
ಇಪ್ಪತ್ತು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಅಕ್ಷತಾ ಮುದ್ರಜೆ ಸುಬ್ರಹ್ಮಣ್ಯ ಭಟ್ ಹಾಗೂ ಇಂದಿರಾ ದಂಪತಿಗಳ ಪುತ್ರಿ. ಹವ್ಯಾಸಿ ಯೋಗ ಶಿಕ್ಷಕಿಯಾಗಿರುವ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಮದುವೆಗೂ ಮೊದಲೇ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದ್ದೆ. ಮದುವೆಯ ನಂತರ ಪತಿಯ ಮನೆಯವರಿಗೂ ಶ್ರೀಮಠದ ಸಂಪರ್ಕವಾಯಿತು. ಈಗ ನಮ್ಮವರು ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಮಗಳು ಮೇಧಾಳಿಗೂ ಕನ್ಯಾ ಸಂಸ್ಕಾರದ ದೀಕ್ಷೆ ಕೊಡಿಸಿದ್ದೇವೆ. ಬದುಕಿನ ಸಂಕಷ್ಟದ ಸಮಯದಲ್ಲಿ ಶ್ರೀಗುರು ಚರಣಗಳನ್ನು ಸ್ಮರಿಸಿ ಶ್ರೀರಾಮ ದೇವರ ಮುಂದೆ ಪ್ರಾರ್ಥಿಸಿದಾಗ ಎಲ್ಲಾ ಕಷ್ಟಗಳು ಪರಿಹಾರವಾಗಿ ಬದುಕಿನಲ್ಲಿ ನೆಮ್ಮದಿ ನೆಲೆಸಿದೆ ” ಎನ್ನುವ ಅಕ್ಷತಾ ಸೀತಾದೇವಿ ಮಾತೃತ್ವಮ್ ನ ಕೋಶಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ತಮ್ಮ ತಂದೆಗೆ ಇಲಿ ಜ್ವರ ಕಾಡಿದಾಗಲೂ ಶ್ರೀರಾಮ ದೇವರ ಮುಂದೆ ಪ್ರಾರ್ಥಿಸಿ, ಶ್ರೀಗುರುಗಳ ಮಂತ್ರಾಕ್ಷತೆ ಸ್ವೀಕರಿಸಿ ತಂದೆಗೆ ತಲುಪಿದಾಗ ಅವರು ಶೀಘ್ರವಾಗಿ ಚೇತರಿಸಿಕೊಂಡಿದ್ದನ್ನು ಸ್ಮರಿಸುವ ಅಕ್ಷತಾ ಇದು ತಮ್ಮ ಬದುಕಿನಲ್ಲಿ ಮರೆಯಲಾರದ ಅನುಭವ ಎನ್ನುತ್ತಾರೆ.
” ಮೊದಲ ವರ್ಷದ ಗುರಿ ತಲುಪಲು ಬಹುಪಾಲು ಸ್ವಯಂ ನೀಡಿದ್ದೇನೆ , ಹತ್ತಿರದ ನೆಂಟರೂ ಕೈ ಜೋಡಿಸಿದ್ದಾರೆ. ಎರಡನೇ ವರ್ಷದಲ್ಲಿ ಸಮಾಜದ ಅನೇಕ ಮಂದಿ ಗೋಪ್ರೇಮಿಗಳು ದೇಶೀಯ ಗೋವಿನ ಸೇವೆಗೆ ಸಹಕಾರ ನೀಡುತ್ತಿದ್ದಾರೆ. ನನ್ನ ಗೋಸೇವೆ ನಿತ್ಯ ನಿರಂತರ ” ಎನ್ನುವ ಅಕ್ಷತಾ ತಮ್ಮ ಬಿಡುವಿನ ವೇಳೆಯಲ್ಲಿ ಶ್ರೀಗುರುಗಳ ಆಶೀರ್ವಚನಗಳನ್ನು ಕೇಳುತ್ತಾರೆ, ಸ್ತೋತ್ರ ಪಠಣಗಳನ್ನೂ ಮಾಡುತ್ತಾರೆ.
ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ