ಶ್ರೀಸಂಸ್ಥಾನದವರ ಅನುಗ್ರಹದ ನೆರಳಿನಲ್ಲಿರುವುದು ಪೂರ್ವಜನ್ಮದ ಸುಕೃತ : ಅನಘಾ ಹೆಗಡೆ, ತುಂಬೆಮನೆ

ಮಾತೃತ್ವಮ್

ಶ್ರೀಮಠದ ಮಹತ್ವಪೂರ್ಣ ಯೋಜನೆಗಳಲ್ಲೊಂದಾದ ‘ ಮಾತೃತ್ವಮ್ ‘ ಮೂಲಕ ಗೋಮಾತೆಯ ಸೇವೆಯಲ್ಲಿ ನಿರತರಾಗಿರುವ ಮಾತೆಯರು ನೂರಾರು. ಶ್ರೀಮಠದ ಸಂಪರ್ಕದಿಂದ, ಸ್ವಯಂ ಪ್ರೇರಣೆಯಿಂದ ಅನೇಕ ಮಂದಿ ಮಾತೆಯರು ಗೋಸೇವೆಗೆ ಮುಂದೆ ಬಂದರೆ , ಹಿರಿಯರ ಮಾರ್ಗದರ್ಶನದ ಮೂಲಕ ಮಾತೃತ್ವಮ್ ಸೇವೆಯಲ್ಲಿ ಕೈಜೋಡಿಸುವ ಮಾತೆಯರು ಅನೇಕ. ಅನಘಾ ಹೆಗಡೆ ತುಂಬೆಮನೆ ಇವರಲ್ಲಿ ಒಬ್ಬರು.

” ಅಜ್ಜ ಆರ್ ಎಸ್ ಹೆಗಡೆ ಹರಗಿಯವರ ಮೂಲಕ ನನಗೆ ಶ್ರೀಮಠದ ಸಂಪರ್ಕ ದೊರಕಿತು. ಅಪ್ಪ ಅಮ್ಮನ ಪ್ರೋತ್ಸಾಹ ನನಗೆ ಪ್ರೇರಣೆಯಾಯಿತು. ಎಳವೆಯಿಂದಲೇ ಶ್ರೀಮಠಕ್ಕೆ ಹೋಗುತ್ತಿದ್ದೇನೆ. ಮಠದ ಎಲ್ಲಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿರುವ ಅಜ್ಜ ಅಜ್ಜಿ ನನ್ನ ಎಲ್ಲಾ ಕಾರ್ಯಗಳಿಗೂ ಸ್ಪೂರ್ತಿಯಾಗಿದ್ದಾರೆ. ನನ್ನ ಅಜ್ಜಿಯೂ ಮಾಸದ ಮಾತೆಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಶ್ರೀಗುರುಗಳ ಮೇಲೆ, ಶ್ರೀಮಠದ ಸೇವೆಯಲ್ಲಿ ನನಗೆ ಅಪರಿಮಿತ ನಂಬಿಕೆ ,ಶ್ರದ್ಧೆ ಇದೆ ” ಎಂದು ನುಡಿಯುವವರು ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ತುಂಬೆಮನೆ ವಿವೇಕಾನಂದ ಹೆಗಡೆ, ರಾಜಲಕ್ಷ್ಮಿ ಹೆಗಡೆ ದಂಪತಿಗಳ ಪುತ್ರಿ ಅನಘಾ ಹೆಗಡೆ.

ನರ ಮನೋವಿಜ್ಞಾನದಲ್ಲಿ ( ನ್ಯೂರೋ ಸೈಕಾಲಜಿ ) ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅನಘಾ ಹೆಗಡೆ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಶ್ರೀಮಠಕ್ಕೆ ಬಿಂದುವಿನಷ್ಟು ಸೇವೆ ಮಾಡಿದರೆ ಸಿಂಧುವಿನಷ್ಟು ಭಾಗ್ಯ ಪಡೆಯಬಹುದು ಎಂಬುದು ನಮ್ಮೆಲ್ಲರ ನಂಬಿಕೆ. ನನಗೆ ಸಿಂಧುವಿನಷ್ಟು ಭಾಗ್ಯ ಕೊಟ್ಟ ಶ್ರೀಮಠಕ್ಕೆ ಬಿಂದುವಿನಷ್ಟಾದರೂ ಕೊಡುಗೆ ನೀಡಬೇಕೆಂಬುದು ನನ್ನ ಆಸೆ. ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಶ್ರೀಸಂಸ್ಥಾನದವರ ಆಶೀರ್ವಾದದ ಕರುಣೆಯಿಂದ ಅದನ್ನು ನಿವಾರಿಸಿಕೊಂಡು ಹೋಗಬಹುದು ಎಂಬುದು ನನ್ನ ವಿಶ್ವಾಸ. ಶ್ರೀಗುರುಗಳ ಆಶೀರ್ವಚನಗಳ ನಿರಂತರ ಶ್ರವಣದಿಂದ ನನ್ನಲ್ಲಿ‌ ಆತ್ಮವಿಶ್ವಾಸ ಮೂಡಿದೆ. ಆಶೀರ್ವಚನಗಳ ಮೂಲಕ ಬದುಕಿನ ಪಾಠವನ್ನು ಕಲಿಸುವ ಶ್ರೀಗುರುಗಳ ಅನುಗ್ರಹದ ನೆರಳಿನಲ್ಲಿರುವುದು ಪೂರ್ವ ಜನ್ಮದ ಸುಕೃತ ” ಎನ್ನುವ ಅನಘಾಗೆ ಗೋಮಾತೆಯ ಮೇಲೂ ತುಂಬಾ ಪ್ರೀತಿ.

” ಮಾಸದಮಾತೆಯಾಗಲು ಸಿದ್ದಾಪುರದ ವೀಣಕ್ಕ ಪ್ರೇರಣೆ ನೀಡಿದರು. ಅಮ್ಮನ ಸಹಕಾರವೂ ಇತ್ತು. ಪದವಿಪೂರ್ವ ತರಗತಿಯ ವ್ಯಾಸಂಗದಲ್ಲಿರುವಾಗಲೇ ಮಾಸದಮಾತೆಯಾದೆ. ನಮ್ಮ ಅನೇಕ ಬಂಧುಗಳು, ಅಪ್ಪನ ಆತ್ಮೀಯರು, ಅಮ್ಮನ ಗೆಳತಿಯರು ಗೋಸೇವೆಗೆ ಕೈ ಜೋಡಿಸಿದ್ದಾರೆ. ವಿಶೇಷ ದಿನಗಳಲ್ಲಿ ಗೋಮಾತೆಗೆ ಕಾಣಿಕೆ ನೀಡುವ ಅಭ್ಯಾಸ ಈಗಲೂ ಇದೆ ” ಎನ್ನುವ ಅನಘಾ ಹೆಗಡೆಗೆ ತಮ್ಮ ಭವಿಷ್ಯದುದ್ದಕ್ಕೂ ಶ್ರೀಮಠದ ಸೇವೆ ಮಾಡುವ ಕನಸು. ಅಜ್ಜ ಅಜ್ಜಿಯರ ಹಾದಿಯಲ್ಲಿ ಮುನ್ನಡೆಯುವ ಹಂಬಲ. ಹಗಲಿರುಳು ಶ್ರೀಮಠದ ಸೇವೆಯ ಬಗ್ಗೇ ಯೋಚಿಸುವ ಇವರು ಪ್ರಸ್ತುತ ಶಾಸನತಂತ್ರದ SEO ಉಪಖಂಡದ ವಿಕಿಪೀಡಿಯಾ ಅನುಖಂಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಉದ್ಯೋಗದ ಜೊತೆಗೆ ಶ್ರೀಮಠದ ಸೇವೆಯಲ್ಲೂ ತೊಡಗಿಸಿಕೊಂಡು, ಗೋಮಾತೆಯ ಸೇವೆಯನ್ನೂ ಮುಂದುವರಿಸುತ್ತಿರುವ ಅನಘಾ ಹೆಗಡೆಯವರ ಕನಸುಗಳೆಲ್ಲ ನನಸಾಗಲಿ.

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *