ಪೂಜೆಯ ವೇಳೆ ಒಳ ಮನಸ್ಸು ಒಳಿತನ್ನೇ ಯೋಚಿಸಬೇಕು ಕೆಡುಕಲ್ಲ – ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಇತರೆ

 

ಸಾಗರ : ದೇವಿಯ ನಾಮ ಕಿವಿಯ ಮೇಲೆ ಬೀಳುವುದಕ್ಕೂ ಪುಣ್ಯಯೋಗ ಬೇಕು ಅದೃಷ್ಟವೂ ಇರಬೇಕು ಅನುಷ್ಠಾನದ ಭಾವವಿರಬೇಕು ಅಂತವರ ಬದುಕಿನಲ್ಲಿ ಆಕೆಯ ಕರುಣೆಯ ಕಿರಣ ಬೀಳಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.

ಸಾಗರ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದಲ್ಲಿ ಏರ್ಪಡಿಸಿರುವ ನವರಾತ್ರ ಸಮಸ್ಯಾದ ಮೂರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ದೇವರ ಪೂಜೆ ಮಾಡುವುದು ಎಷ್ಟು ಮುಖ್ಯವೋ ಅದರಲ್ಲಿ ಏಕಾಗ್ರತೆಯೂ ಅಷ್ಟೇ ಮುಖ್ಯ ಮತ್ತು ಪ್ರಾರ್ಥನೆಯೂ ಒಳ್ಳೆಯದೇ ಇರಬೇಕು, ಪೂಜೆ ಪ್ರಾರ್ಥನೆ ಮಾಡುವಾಗ ಒಳ ಮನಸ್ಸು ಏನು ಯೋಚಿಸುವುದೋ ಅದೇ ಫಲ ದೊರೆಯಲಿದೆ ಎಂದ ಅವರು, ಇದಕ್ಕೆ ಉದಾಹರಣೆಯಾಗಿ ಕಲ್ಪವೃಕ್ಷದ ಕೆಳಗೆ ಕುಳಿತು ಕಲ್ಪನೆ ಮಾಡಿದ ಮನುಷ್ಯನೋರ್ವನ ಕತೆಯನ್ನು ವಿವರಿಸಿ ಹೇಗೆ ಒಳ್ಳೆಯ ಯೋಚನೆಗೆ ಒಳಿತು ಫಲಗಳು, ಕೆಟ್ಟ ಯೋಚನೆಗೆ ಕೆಡುಕು ಫಲಗಳು ಲಭ್ಯವಾಗಲಿದೆ ಎಂದರಲ್ಲದೆ ಪರರ ಕುರಿತು ಕೆಟ್ಟದನ್ನು ಬಯಸುವುದಕ್ಕಿಂತ ನಮ್ಮ ಕುರಿತು ಒಳಿತಾಗಲಿ ಎನ್ನುವ ಭಾವವು ಹೆಚ್ಚು ಒಳ್ಳೆಯದು ಎಂದರು.

ವ್ಯಕ್ತಿಯಿಂದ ಸ್ಥಾನಕ್ಕೂ ಮಹತ್ವ ಬರುವುದಿದೆ ಹಾಗೆ ಸ್ಥಾನದಿಂದ ವ್ಯಕ್ತಿಗೂ ಮಹತ್ವ ಬರುವುದಿದೆ ಅಂತಹ ಸ್ಥಾನ ದೇವಿಯದು ಅಂತೆಯೇ ಶ್ರೀರಾಮನದೂ ಹೌದು ಇನ್ನು ಶಂಕರಾಚಾರ್ಯರು ವ್ಯಕ್ತಿಯಾಗಿ ಸ್ಥಾನಕ್ಕೆ ಮಹತ್ವ ತಂದಿರುವುದನ್ನು ಗಮನಿಸಬಹುದು ಆದರೆ ಇದು ಎಲ್ಲರ ಬದುಕಿನಲ್ಲಿ ಸಾಧ್ಯವಿಲ್ಲ ಎಂದರು.

ಇದಕ್ಕೂ ಮುನ್ನ ಈಡಿಗ ಸಮಾಜ, ದೈವಜ್ಞ ಬ್ರಾಹ್ಮಣ ಸಮಾಜ, ವನೀಕುಲಕ್ಷತ್ರೀಯ ಸಮಾಜ ಮತ್ತು ಚಿತ್ಬಾವನ ಸಮಾಜಕ್ಕೆ ನಮಸ್ಯಾ ಸಮಿತಿಯವತಿಯಿಂದ ಸಮಾಜ ಸಂಭ್ರಮದ ಗೌರವ ನೀಡಲಾಯಿತು. ಆಯಾ ಸಮಾಜದ ಅಧ್ಯಕ್ಷರಾದ ಮರಸ ಮಂಜಪ್ಪ, ಮೋಹನ್ ಶೇಟ್, ಆರ್ ಶ್ರೀನಿವಾಸ, ರಮಾನಾಥ ಗೋಖಲೆ ಗೌರವ ಸ್ವೀಕರಿಸಿದರು. ಸಾಮಾಜಿಕ ಕಾರ್ಯಕರ್ತರಾದ ಡಾ. ರಾಜನಂದಿನಿ ಕಾಗೋಡು ಶ್ರೀಗಳವರಿಂದ ಆಶೀರ್ವಾದ ಪಡೆದರು.

ಮಹಾಮಂಡಲದ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ನವರಾತ್ರ ನಮಸ್ಯಾ ಸಮಿತಿಯ ನಾರಾಯಣ ಖಂಡಿಕಾ, ಗುರುಪಾದ ಭೀಮನಕೋಣೆ, ಗೌತಮ , ಎಂಜಿ, ರಾಮಚಂದ್ರ, ಹು.ಬ ಅಶೋಕ, ರವಿ ಕೈತೋಟ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ರಾಘವೇಂದ್ರ ಮಧ್ಯಸ್ಥ, ಶ್ರೀನಾಥ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಬೆಳಗ್ಗೆ ಮಹಾಲಕ್ಷ್ಮಿ ಹವನ, ಚಂಡಿಕಾ ಹವನ, ಮಹಿಷಮರ್ಧಿನಿ ಉಪಾಸನೆ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ , ಸುವರ್ಣ ಪಾದುಕಾ ಪೂಜೆ, ಭಜನೆ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.

 

 

– ರಮೇಶ್ ಹೆಗಡೆ ಗುಂಡೂಮನೆ

Leave a Reply

Your email address will not be published. Required fields are marked *