” ಐದನೇ ವಯಸ್ಸಿನಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವಳು ನಾನು. ಅಪ್ಪ ಮಾಲೂರು ಗೋಶಾಲೆಯಲ್ಲಿ ಸೇವಾ ನಿರತರಾದುದರಿಂದ ನನಗೂ ಗೋವುಗಳ ಸಾಂಗತ್ಯ ಎಳವೆಯಿಂದಲೇ ದೊರಕಿತು. ಮಾನವನ ಕಷ್ಟಗಳನ್ನು ಅರಿತು ಅವನಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬರುತ್ತಾರೆ. ಆದರೆ ಗೋಮಾತೆಯ ಕಷ್ಟಗಳನ್ನು ನಾವೇ ತಿಳಿದು ಅವಳ ಸೇವೆ ಮಾಡಬೇಕಷ್ಟೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಈ ಕಾರಣದಿಂದ ನಾನು ಗೋಸೇವೆಗೆ ಕೈ ಜೋಡಿಸಿದೆ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ರಾಜರಾಜೇಶ್ವರಿ ವಲಯದ ಉಜ್ವಲ ಭಟ್ ಅವರ ಪತ್ನಿ ವಾಣಿಶ್ರೀ ಶರ್ಮಾ.
ಮಾಲೂರು ನಿವಾಸಿಗಳಾಗಿರುವ ಅರವಿಂದ ಶರ್ಮಾ ಹಾಗೂ ವಸುಂಧರಾ ಶರ್ಮಾ ದಂಪತಿಗಳ ಪುತ್ರಿಯಾದ ಇವರು ಬೆಸ್ಕಾಂನ ಉದ್ಯೋಗಿಯಾಗಿದ್ದಾರೆ.
ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಅಭಯಾಕ್ಷರ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು ಮಾಲೂರು ಗೋಶಾಲೆಯಲ್ಲಿ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲೂ ಗೋಮಾತೆಯ ಸೇವೆ ಮಾಡಿದವರು.
” ಮಲೆ ಮಹದೇಶ್ವರ ಬೆಟ್ಟದಲ್ಲಿ ಗೋಸೇವೆಯ ಅನುಭವ ನಿಜಕ್ಕೂ ವಿಶಿಷ್ಟ ಅನುಭೂತಿ ನೀಡಿದೆ. ಸುಮಾರು ೨೦೦೦ ಕ್ಕೂ ಹೆಚ್ಚು ಹಸುಗಳ ಒಡನಾಟ ವಿಶೇಷ ಅನುಭವ . ಸಾವಿರಾರು ಹಸುಗಳು ಮುಕ್ತವಾಗಿ ಸಂಚರಿಸುತ್ತಿದ್ದರೂ ಅವರ ನಡುವೆ ತಮ್ಮ ಯಜಮಾನ ಬಂದಾಗ ಅವರನ್ನು ಹಿಂಬಾಲಿಸುವ ದೃಶ್ಯ ಅದ್ಭುತವೆನಿಸಿತು. ಮಲೆ ಮಹದೇಶ್ವರ ಬೆಟ್ಟದ ಗೋಸೇವೆಯ ಅನುಭವಗಳನ್ನು ವರ್ಣಿಸಲು ಸಾಧ್ಯವಿಲ್ಲ. ಒಂದು ರೀತಿಯ ಆತ್ಮ ಸಂತೋಷದ ಸೇವೆ ಅದು ” ಎನ್ನುವ ವಾಣಿಶ್ರೀ ಶರ್ಮಾ ಕೆಲವು ಕಾಲ ಶ್ರೀಮಠದ ಪ್ರಸ್ತುತಿ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ.
ಮಾಲೂರು ಗೋಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕಟುಕರ ಕೈಯಿಂದ ತಪ್ಪಿಸಿಕೊಂಡು ಬಂದ ಕರುವೊಂದರ ಸೇವೆಯನ್ನು ಶ್ರೀಗುರುಗಳ ಅಣತಿಯಂತೆ ನಿಷ್ಠೆಯಿಂದ ಮಾಡಿದ ಇವರಿಗೆ ಕರು ಆರೋಗ್ಯವಾಗಿ ಓಡಾಡಲು ಆರಂಭಿಸಿದಾಗ ಸರಕಾರಿ ಉದ್ಯೋಗವೂ ಲಭಿಸಿತು. ಇದು ಶ್ರೀಗುರುಗಳ ಅನುಗ್ರಹ ಎನ್ನುವ ವಾಣಿಶ್ರೀ ಶರ್ಮಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಇವರ ವಿವಾಹವು ಬಾನ್ಕುಳಿಯ ಗೋಸ್ವರ್ಗದಲ್ಲಿ ನಡೆದಿದ್ದು ಮದುವೆಗೆ ಬಂದ ಅತಿಥಿಗಳಿಗೆಲ್ಲ ಗೋಗ್ರಾಸ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು.
” ಗೋಸ್ವರ್ಗದಲ್ಲಿ ಮದುವೆಯಾಗಿದ್ದು ಜೀವನದಲ್ಲಿ ಅತ್ಯಂತ ಖುಷಿ ಎನಿಸಿದ ಕ್ಷಣ. ನೂರಾರು ಗೋವುಗಳ ನಡುವೆ ಹೊಸ ಬದುಕಿಗೆ ಕಾಲಿರಿಸುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ. ಮದುವೆಗೆ ಬಂದ ಅತಿಥಿಗಳೆಲ್ಲ ಗೋಸ್ವರ್ಗದ ಹಸುಗಳನ್ನು ಕಂಡು ಸಂತಸ ಪಟ್ಟಿದ್ದಾರೆ. ಮದುವೆಗೆ ಬಂದ ಅತಿಥಿಗಳೋರ್ವರು ಇಲ್ಲಿಂದ ಪ್ರೇರಣೆ ಪಡೆದು ತಮ್ಮ ಮನೆಯಲ್ಲಿ ಎರಡು ಗೀರ್ ಹಸುಗಳನ್ನು ಸಾಕುತ್ತಿದ್ದಾರೆ. ಎಲ್ಲರೂ ಹೀಗೆ ಗೋಮಾತೆಯ ಸೇವೆ ಮಾಡುವಂತಾಗಬೇಕು ” ಎನ್ನುವ ಇವರು ಬದುಕಿನಲ್ಲಿ ಸದಾ ಗೋಸೇವೆ ಹಾಗೂ ಶ್ರೀಮಠದ ಸೇವೆ ಮಾಡುವ ಅವಕಾಶ ಇನ್ನಷ್ಟು ಒದಗಿಬರಲಿ ಎಂಬ ಸದಾಶಯ ಹೊಂದಿದ್ದಾರೆ.
ಪ್ರಸನ್ನಾ ವಿ ಚೆಕ್ಕೆಮನೆ