” ಸದಾ ಶ್ರೀಮಠದ ಸೇವೆಗೆ ತುಡಿಯುತ್ತಿದೆ ಮನಸ್ಸು ” : ವಿಜಯಾ ಸರ್ಪಂಗಳ

ಮಾತೃತ್ವಮ್

” ಶ್ರೀಗುರುಗಳ ಗೋಪ್ರೇಮ, ಗೋಮಾತೆಯ ರಕ್ಷಣೆಗಾಗಿ ಶ್ರೀ ಸಂಸ್ಥಾನದವರು ಕೈಗೊಂಡ ವಿವಿಧ ಯೋಜನೆಗಳು‌ ಹಾಗೂ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಹಂಬಲ ‘ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇರಿಕೊಂಡೆ. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವೆ. ಇನ್ನೊಂದು ವರ್ಷದ ಗುರಿ ತಲುಪುವ ಭರವಸೆಯಿದೆ ” ಎನ್ನುತ್ತಾರೆ ಮೂಲತಃ ಕಾಸರಗೋಡಿನ ಸರ್ಪಂಗಳದವರಾದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಎಸ್. ರಾಮಚಂದ್ರ ಭಟ್ಟರ ಪತ್ನಿ ವಿಜಯಾ ಸರ್ಪಂಗಳ ಅವರು.

ಹಾಡು,ಸಂಗೀತ, ಹೊಲಿಗೆ, ಕಸೂತಿಗಳಲ್ಲಿ ಆಸಕ್ತಿ ಇರುವ ವಿಜಯಾ ಸುಮಾರು ಹದಿನೆಂಟು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಭಯಾಕ್ಷರ ಅಭಿಯಾನದ ಮೂಲಕ ಅದೆಷ್ಟೋ ಜನರ ಸಂಪರ್ಕ ಮಾಡಿ ಸಹಿ ಸಂಗ್ರಹ ಮಾಡಿದ್ದಾರೆ. ಸಾವಿರದ ಸುರಭಿ ಯೋಜನೆಯಲ್ಲಿ ಲಕ್ಷ ಭಾಗಿನಿಯಾಗಿ ಶ್ರೀಮಠದಿಂದ ಬಾಗಿನ ಸ್ವೀಕಾರವನ್ನೂ ಮಾಡಿದ್ದಾರೆ.

‘ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರ ಸಂಪೂರ್ಣ ಸಹಕಾರ ಇದೆ ‘ ಎನ್ನುವ ವಿಜಯಾ ಅವರಿಗೆ ತಮ್ಮ ಗುರಿ ತಲುಪಲು ಹೆಚ್ಚು ಸಹಕಾರ ನೀಡಿದವರು ವಲಯಾಧ್ಯಕ್ಷರಾಗಿಯೂ ಸೇವೆಗೈಯುವ ಅವರ ಪತಿ ರಾಮಚಂದ್ರ ಭಟ್.

” ಯೋಗ ಕ್ಲಾಸಿಗೆ ಹೋದಾಗ ಅಲ್ಲಿರುವ ಸ್ನೇಹಿತೆಯರಿಗೂ ದೇಶೀಯ ಗೋವುಗಳ ಮಹತ್ವದ ಬಗ್ಗೆ ತಿಳಿಸಿದೆ. ಹವ್ಯಕೇತರ ಸಮಾಜದವರು ಸಹಾ ಗೋಮಾತೆಯ ಸೇವೆಯಲ್ಲಿ ಕೈ ಜೋಡಿಸಿದ್ದಾರೆ” ಎಂದು ಹೇಳುವ ಇವರಿಗೆ ಇತ್ತೀಚೆಗೆ ಜಗತ್ತನ್ನಾವರಿಸಿದ ಕೊರೋನಾ ಮಹಾ ಮಾರಿಯ ಕಾರಣದಿಂದಾಗಿ ದ್ವಿತೀಯ ವರ್ಷದ ಗುರಿ ತಲುಪಲು ತುಸು ವಿಳಂಬವಾಗುತ್ತಿದೆ ಎಂಬ ಬೇಸರವಿದ್ದರೂ ಕೆಲವೇ ತಿಂಗಳುಗಳಲ್ಲಿ ಗುರಿ ತಲುಪಲು ಸಾಧ್ಯ ಎಂಬ ಭರವಸೆ ಇದೆ.

ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭಗಳಲ್ಲೆಲ್ಲ ಸೇವೆ ಮಾಡುವ ಅವಕಾಶವನ್ನು ಪಡೆದು ಕೊಂಡಿದ್ದೇನೆ. ಶ್ರೀಮಠ ಎಂದರೆ ಮನಸ್ಸಿಗೆ ಅತ್ಯಂತ ಆಪ್ತವಾಗುವ ತಾಣ. ಶ್ರೀಗುರುಗಳನ್ನು ನಂಬಿದವರಿಗೆ ಬದುಕಿನಲ್ಲಿ ಸೋಲಿಲ್ಲ ‘ ಎಂದು ಹೃದಯ ತುಂಬಿ ನುಡಿಯುವ ವಿಜಯಾ ಅವರಿಗೆ ಈ ಹಿಂದೆ ವಲಯ ಮುಷ್ಠಿ ಭಿಕ್ಷಾ ಪ್ರಧಾನೆಯಾಗಿಯೂ, ಶ್ರೀ ಕಾರ್ಯಕರ್ತೆಯಾಗಿಯೂ ಸೇವೆ ಮಾಡಿದ ಅನುಭವವಿದೆ.

ನಮ್ಮ ಶ್ರೀಮಠದ ಗೋ ಸಂರಕ್ಷಣಾ ಕಾರ್ಯವನ್ನು ಸಮಾಜ ಗೌರವಿಸುತ್ತಿದೆ. ದೇಶೀ ತಳಿಗಳ ಮಹತ್ವದ ಅರಿವು ಜನರಲ್ಲಿ ಮೂಡುತ್ತಿದೆ. ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವಾಗ ಯಾವುದೇ ಕಹಿ ಘಟನೆ ಆಗಿಲ್ಲ. ಹೆಚ್ಚಿನವರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂಬ ನೆಮ್ಮದಿಯ ಭಾವ ಹೊತ್ತ ವಿಜಯಾ ಸರ್ಪಂಗಳ ಇವರಿಗೆ ಶ್ರೀಮಠದ ಸೇವೆ, ಗೋಸೇವೆ, ಶ್ರೀಗುರು ಸೇವೆಯಲ್ಲಿ ಇನ್ನಷ್ಟು ನಿರತಳಾಗ ಬೇಕೆಂಬ ಹಂಬಲವಿದೆ‌.

Author Details


Srimukha

Leave a Reply

Your email address will not be published. Required fields are marked *