ಗೋಸೇವೆಯ ದಿವ್ಯತೆಯಲ್ಲಿ ಧನ್ಯತೆ : ದಿವ್ಯಶ್ರೀ ಮತ್ತು ಧನ್ಯಶ್ರೀ , ಇಳಂತಿಲ

ಮಾತೃತ್ವಮ್

 

ತಾಯ್ತಂದೆಯರು ಶ್ರೀಮಠದ ಸೇವೆಯಲ್ಲಿ ಸದಾ ನಿಷ್ಠೆ ಹೊಂದಿರುವವರಾದುದರಿಂದ ಈ ಮಕ್ಕಳಿಗೆ ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ. ಶ್ರೀಗುರುಗಳ ಆಶೀರ್ವಚನಗಳನ್ನು ಕೇಳಿ ಶ್ರೀಮಠದ ಸೇವೆ ಹಾಗೂ ಗೋಸೇವೆಯ ಬಗ್ಗೆ ಈ ಸಹೋದರಿಯರಿಗೆ ವಿಶೇಷ ಶ್ರದ್ಧೆ ಮೂಡಿತು.

ದಕ್ಷಿಣ ಕನ್ನಡ ಇಳಂತಿಲ ಮೂಲದ ಪ್ರಸ್ತುತ ಮಂಗಳೂರು ಮಂಡಲ ಮಧ್ಯ ವಲಯದ ಕೊಂಚಾಡಿ ನಿವಾಸಿಗಳಾಗಿರುವ ವಿಷ್ಣು ಪ್ರಕಾಶ್ ,ಲಕ್ಷ್ಮೀ ಪ್ರಕಾಶ್ ದಂಪತಿಗಳ ಪುತ್ರಿಯರಾದ ದಿವ್ಯಶ್ರೀ ಹಾಗೂ ಧನ್ಯಶ್ರೀಯರೇ ಈ ವಿದ್ಯಾ ಲಕ್ಷ್ಮಿಯರು.

ಮಂಗಳೂರು ನಂತೂರಿನ ಶ್ರೀಭಾರತಿ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ದಿವ್ಯಶ್ರೀ ಹಾಗೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧನ್ಯಶ್ರೀ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷದ ಗುರಿ ತಲುಪಿದ ಮಾಸದ ಮಾತೆಯರು.

ಮಾಸದ ಮಾತೆಯಾಗಿ ತಾಯಿ ಮಾಡುತ್ತಿರುವ ಗೋಸೇವೆಯನ್ನು ಹತ್ತಿರದಿಂದ ಗಮನಿಸುತ್ತಿದ್ದ ಈ ಪುಟಾಣಿಗಳಿಗೆ ಸಹಜವಾಗಿಯೇ ಮಾಸದ ಮಾತೆಯಾಗಿ ಗೋಮಾತೆಯ ಸೇವೆ ಮಾಡುವ ಆಸಕ್ತಿ ಉಂಟಾಯಿತು. ‌

ಪೆರಾಜೆಯ ಮಾಣಿ ಮಠದಲ್ಲಿ ನಡೆದ ಶ್ರೀಗುರುಗಳ ಚಾತುರ್ಮಾಸ್ಯದ ಸಂದರ್ಭವು ಇವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಅವಕಾಶ ಹಾಗೂ ವಿಶೇಷ ಪ್ರೇರಣೆಗೆ ಕಾರಣವಾಯಿತು.

ಕೆಲವು ವರ್ಷಗಳ ಹಿಂದೆ ಅಭಯಾಕ್ಷರ ಅಭಿಯಾನ , ಗೋಮಂಗಲ ಯಾತ್ರೆಯ ಅಕ್ಷತಾಭಿಯಾನವೇ ಮೊದಲಾದ ಕಾರ್ಯಗಳಲ್ಲಿ ಪುಟಾಣಿ ಧನ್ಯಶ್ರೀ ತಾಯಿಯೊಂದಿಗೆ ಕಾಲ್ನಡಿಗೆಯಲ್ಲಿ ಮನೆ ಮನೆಗೆ ತೆರಳಿ ತನ್ನ ಅಳಿಲು ಸೇವೆಯನ್ನು ಸಲ್ಲಿಸಿದ್ದಾಳೆ.

ವಿದ್ಯಾರ್ಥಿನಿಯರಾದ ಇವರಿಗೆ ಶ್ರೀಮಠದ ಸೇವೆ ಹಾಗೂ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹೆತ್ತವರ ಹಾಗೂ ಬಂಧುಗಳ‌ ಸಹಕಾರವಿದೆ. ತಾಯಿಯ ಮಾರ್ಗದರ್ಶನದ ಮೂಲಕ ಮಾತೃತ್ವಮ್ ಯೋಜನೆಯ ಗುರಿ ತಲುಪಿದ ದಿವ್ಯಶ್ರೀ ಹಾಗೂ ಧನ್ಯಶ್ರೀ ಗೆ ಗೋವುಗಳ ಮೇಲೆ ತುಂಬಾ ಮಮತೆಯಿದೆ.

” ಮಾಸದ ಮಾತೆಯಾಗಿ ಗೋಸೇವೆ ಮಾಡಲು ಮನಸ್ಸೊಂದಿದ್ದರೆ ಸಾಕು, ಶ್ರೀಗುರುಗಳ ದಿವ್ಯಾನುಗ್ರಹದಿಂದ ಗುರಿ ತಲುಪಲು ಸಾಧ್ಯ ” ಎನ್ನುವ ಇವರಿಗೆ ಗೋಮಾತೆಯ ಸೇವೆಯ ಬಗ್ಗೆ ಧನ್ಯತಾ ಭಾವವಿದೆ.

ದಿವ್ಯಶ್ರೀ ಒಂದು ವರ್ಷದ ಗುರಿ ತಲುಪಿದ ಸಂದರ್ಭದಲ್ಲಿ ಗೋಪ್ರೇಮಿಗಳೊಬ್ಬರು ನೀಡಿದ ಸಹಕಾರದಿಂದ ಬಹಳ ಬೇಗನೆ ಗುರಿ ತಲುಪುವಂತಾದರೆ ಧನ್ಯಶ್ರೀ ಅವರ ಚಿಕ್ಕಮ್ಮ ,ವಿದೇಶದಲ್ಲಿ ನೆಲೆಸಿರುವ ಚೇತನಾ ಅವರ ನೆರವಿನಿಂದ ಗುರಿ ತಲುಪಿದರು.

ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ಈ ಸಹೋದರಿಯರು ಕನ್ಯಾ ಸಂಸ್ಕಾರವನ್ನು ಪಡೆದಿದ್ದಾರೆ. ಶ್ರೀಗುರುಗಳು ಅನುಗ್ರಹಿಸಿದ ಸ್ತೋತ್ರಗಳನ್ನು ಪಠಣ ಮಾಡುವ ಇವರಿಬ್ಬರೂ ಸಂಗೀತವನ್ನೂ ಅಭ್ಯಸಿಸುತ್ತಿದ್ದಾರೆ.

ಕಳೆದ ವರ್ಷ ತಾಯಿಯ ಜೊತೆಗೆ ಬಾನ್ಕುಳಿಯ ಗೋಸ್ವರ್ಗದಲ್ಲಿ ಶ್ರೀಗುರುಗಳಿಂದ ಬಾಗಿನ ಸ್ವೀಕರಿಸಿದ ಕ್ಷಣಗಳು ತಮ್ಮ ಪಾಲಿಗೆ ಮರೆಯಲಾರದ ಅನುಭವ ‘ ಎನ್ನುವ ದಿವ್ಯಶ್ರೀ ಹಾಗೂ ಧನ್ಯಶ್ರೀ ಗೆ ಇನ್ನು ಮುಂದೆಯೂ ಗೋಮಾತೆಯ ಸೇವೆ, ಶ್ರೀಮಠದ ಸೇವೆಯಲ್ಲಿ ಮುಂದುವರಿಯುವ ಅಭಿಲಾಷೆಯಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *