ಗೋ ಸೇವೆಯಲ್ಲಿ ಸಾರ್ಥಕತೆ ಇದೆ: ಶೋಭಾ ಲಕ್ಷ್ಮಿ ಬಂಗಾರಡ್ಕ

ಮಾತೃತ್ವಮ್

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠವೇರಿದ ನಂತರ ನಿರಂತರ ಮಠದ ಸಂಪರ್ಕದಲ್ಲಿದ್ದ ಕುಟುಂಬ ಬಂಗಾರಡ್ಕದ ಶೋಭಾಲಕ್ಷ್ಮಿ ಇವರದ್ದು.

ಉಪ್ಪಿನಂಗಡಿ ಮಂಡಲದ ಕಬಕ ವಲಯದ
ಈಗ ಪುತ್ತೂರು ಸಮೀಪದ ಕೊಡಿಪ್ಪಾಡಿಯಲ್ಲಿ ವಾಸಿಸುತ್ತಿರುವ ಬಂಗಾರಡ್ಕ ಜನಾರ್ದನ ಭಟ್ ಅವರ ಪತ್ನಿ ಶೋಭಾಲಕ್ಷ್ಮಿ ಬಂಗಾರಡ್ಕ .ಏಕೈಕ ಪುತ್ರ ಎಂ.ಬಿ.ಬಿ.ಎಸ್.ಮುಗಿಸಿ, ಎಂ.ಎಸ್ ಮಾಡುತ್ತಿದ್ದಾನೆ.

ಸಾಹಿತ್ಯ, ಸಂಗೀತ ಸಹಿತ ಎಲ್ಲಾ ಕಲೆಗಳಲ್ಲೂ ಆಸಕ್ತಿ ಇರುವ ಶೋಭಾಲಕ್ಷ್ಮಿ ಗೆ ಆಧ್ಯಾತ್ಮಿಕ ವಿಚಾರದತ್ತ ಹೆಚ್ಚಿನ ಸೆಳೆತ.
ತವರುಮನೆ ನಿಡುಗಳದಲ್ಲೂ ಗೋಸಾಕಣೆ ಇದ್ದುದರಿಂದ ಗೋವಿನ ಮೇಲಿನ ಮಮತೆ ಬಾಲ್ಯದಿಂದಲೂ ಮೂಡಿತ್ತು.ಇದುವೇ ಮುಂದುವರಿದು ಪತಿಗೃಹದಲ್ಲೂ ಗೋ ಸಾಕಣೆಗೆ ಆದ್ಯತೆ ನೀಡಿದವರು ಇವರು.

2002 ರಲ್ಲಿ ಮಾತೃ ಶಾಖೆ ಆರಂಭಗೊಂಡಾಗ ವಲಯದ ಪ್ರಧಾನೆಯಾಗಿ ಕುಂಕುಮಾರ್ಚನೆ,ಮುಷ್ಟಿ ಭಿಕ್ಷಾ ಯೋಜನೆಗಳ ಬಗ್ಗೆ ಮನೆಮನೆಗಳಿಗೆ ತೆರಳಿ ಅರಿವು ಮೂಡಿಸಿದವರು.
2004 ರಲ್ಲಿ ಮಗನ ಉಪನಯನದ ಸಂದರ್ಭದಲ್ಲಿ ಅವರ ಮನೆಯಲ್ಲಿ ಶ್ರೀ ಗುರುಗಳ ಭಿಕ್ಷಾ ಸೇವೆ ನಡೆದಂದಿನಿಂದ ಶ್ರೀ ಮಠದ ಸಂಪರ್ಕ ಮತ್ತಷ್ಟು ನಿಕಟವಾಗಿ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಸಕುಟುಂಬಿಕರಾಗಿ ಭಾಗವಹಿಸುವ ಪುಣ್ಯ ಇವರಿಗೆ ಲಭಿಸಿದೆ.
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದಂತಹ ರಾಮಾಯಣ ಮಹಾಸತ್ರ,ವಿಶ್ವ ಗೋ ಸಮ್ಮೇಳನಗಳಲ್ಲಿ ಆರಂಭದಿಂದ ಅಂತ್ಯದ ವರೆಗೂ ಸೇವಾ ಕಾರ್ಯಕರ್ತೆಯಾಗಿಯೂ ಭಾಗವಹಿಸಿದವರು.

ಪ್ರತಿ ವರ್ಷವೂ ವಲಯದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಶೋಭಾಲಕ್ಷ್ಮಿ ಪ್ರಸ್ತುತ ಕಬಕ ವಲಯದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮನೆಯಲ್ಲಿ ಹಸು ಸಾಕುತ್ತಿದ್ದರೂ ಶ್ರೀ ಗುರುಗಳ ಆಶೀವರ್ಚನದ ಪ್ರೇರಣೆಯಿಂದ ಸಮಾಜಕ್ಕೆ ಗೋವಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದೆ ಬಂದ ಇವರು ಅತೀ ಕಡಿಮೆ ಸಮಯದಲ್ಲಿಯೇ ತಮ್ಮ ಗುರಿ ಮುಟ್ಟಿದವರು.

ವ್ಯಾಟ್ಸಾಪ್ ಗ್ರೂಪ್ ರಚಿಸಿ ಅದರ ಮೂಲಕ ಗೋವಿನ ಬಗ್ಗೆ ಇರುವ ವಿವಿಧ ವೀಡಿಯೋಗಳು,ಪೋಟೋಗಳನ್ನು ಇತರರಿಗೆ ಹಂಚಿ ಜನಮಾನಸದಲ್ಲಿ ಗೋವಿನ ಕುರಿತಾಗಿ ಪೂಜ್ಯ ಭಾವನೆ ಮೂಡಿಸಿದ ಕಾರಣ ಹಲವರು ತಾವಾಗಿಯೇ ಮುಂದೆ ಬಂದು ಮಾತೃತ್ವಮ್ ಯೋಜನೆಗೆ ಸಹಕಾರ ನೀಡಿದರು ಎನ್ನುತ್ತಾರೆ ಶೋಭಾಲಕ್ಷ್ಮಿ.

“ಯಾವುದೇ ಮನೆಯಿಂದಲೂ ಬರಿಗೈಯಿಂದ ಕಳಿಸಿಲ್ಲ ಎನ್ನುವ ಅವರು ತಮ್ಮ ಮನೆಯಲ್ಲಿ ನಡೆದ ಒಂದು ವಿಶೇಷ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ

‘ಆತ್ಮೀಯರೊಬ್ಬರು ಮನೆಗೆ ಬಂದಾಗ ಅವರ ಪುಟ್ಟ ಮಗುವು ಇವರ ಹಟ್ಟಿಯಲ್ಲಿರುವ ಕರುವನ್ನು ಕಂಡು ಸಂತಸ ಪಟ್ಟು ಖುಷಿಯಿಂದ ಅದರ ಜೊತೆಗೆ ಆಟವಾಡಿತು.ಇದನ್ನು ಕಂಡು ಆ ಮಗುವಿನ ಮಾತಾಪಿತರಿಗೂ ತುಂಬಾ ಸಂತಸವಾಗಿ
” ನೀವು ಮಾಸದ ಮಾತೆಯಾಗಿ ಸೇವೆ ಮಾಡುತ್ತಿದ್ದೀರಲ್ಲಾ.ನಮ್ಮ ಮಗುವಿನ ಖುಷಿ ನೋಡಿ ನಮಗೂ ಖುಷಿಯಾಗಿದೆ .ಗೋ ಮಾತೆಗಾಗಿ ನಮ್ಮದೂ ಕಿಂಚಿತ್ ಕಾಣಿಕೆ” ಎಂದು ಒಂದು ಮೊತ್ತವನ್ನು ನೀಡಿದ ಅನುಭವ ನಿಜಕ್ಕೂ ವಿಶಿಷ್ಟ ಅನುಭವ ಮೂಡಿಸಿತು.
ಪುಟ್ಟ ಮಗುವಿನ ಗೋ ಪ್ರೀತಿ ನೋಡುವಾಗ ಮುಂದಿನ ತಲೆಮಾರು ಗೋವಿನಿಂದ ವಿಮುಖವಾಗಲಾರದು ಎಂಬ ಭರವಸೆ ಮೂಡಿತು ಎನ್ನುತ್ತಾರೆ.

ಮಾಣಿಮಠದ ಚಾತುರ್ಮಾಸ್ಯದ ನಂತರ ಗುರು ಬಂಧುಗಳೆಲ್ಲ ನಮ್ಮ ನೆಂಟರಷ್ಟೇ ಆಪ್ತರಾಗಿದ್ದಾರೆ.ಆ ಸಂದರ್ಭದಲ್ಲಿ ಮಗನಿಗೂ ಇಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿತ್ತು.ಮಠವೆಂದರೆ ಈಗ ತವರುಮನೆಯಷ್ಟೇ ಆಪ್ತವಾಗಿ ಬಿಟ್ಟಿದೆ.ಸುಖ ದುಃಖ, ನೋವು ನಲಿವುಗಳಲ್ಲಿ ಮನ ಬಯಸುವ ಆತ್ಮಸಂಬಂಧವಿದು.
ಶ್ರೀ ಮಠದ ಯೋಜನೆಗಳಲ್ಲಿ ಭಾಗವಹಿಸಿ ಸೇವೆ ಸಲ್ಲಿಸುವಾಗ ದೊರಕುವ ಆತ್ಮ ಸಂತೋಷ ಇನ್ನೆಲ್ಲಿಯೂ ದೊರಕುವುದಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದ ಸತ್ಯ ಎನ್ನುವ ಶೋಭಾಲಕ್ಷ್ಮಿಗೆ ತಮ್ಮ ವಲಯದಲ್ಲಿ ಇನ್ನಷ್ಟು ಮಹಿಳೆಯರನ್ನು ಗೋ ಸೇವೆಗೆ ಪ್ರೇರೇಪಿಸಿ,ಅವರನ್ನು ಮಾಸದ ಮಾತೆಯಾಗಿಸಿ ,ಅವರು ಗುರಿ ತಲುಪುವಂತೆ ಅವರೊಡನೆ ತಾವೂ ಸಹಾ ಕೈ ಜೋಡಿಸ ಬೇಕೆಂಬ ಹಂಬಲವಿದೆ.

Leave a Reply

Your email address will not be published. Required fields are marked *