ಶ್ರೀಗುರುಕೃಪೆಯಿಂದ ಕಂಡ ಕನಸುಗಳೆಲ್ಲ ನನಸಾಗಿವೆ : ಸರಸ್ವತಿ ಕೂವೆತ್ತಂಡ

ಮಾತೃತ್ವಮ್

 

” ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದೇವೆ. ಶ್ರೀಗುರುಸೇವೆ, ಗೋಸೇವೆಯಿಂದ ಬದುಕಿಗೆ ಒಳಿತಾಗಿದೆ.‌ ಅಸಾಧ್ಯವೆಂದು ಭಾವಿಸಿದ ಅನೇಕ ಕನಸುಗಳು ಕೈಗೂಡಿವೆ. ಶ್ರೀಗುರುಗಳ ಕೃಪೆ ನಮ್ಮ ಬದುಕಿಗೆ ಆಸರೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಉರುವಾಲು ವಲಯದ ಕೂವೆತ್ತಂಡ ಶ್ರೀಧರ ಭಟ್ಟರ ಪತ್ನಿ ಸರಸ್ವತಿ ಎಸ್.ಭಟ್.

ಪುತ್ತೂರು ಸಮೀಪದ ಕೂಜೋಡಿ ಗೋವಿಂದ ಭಟ್, ಗೌರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಫೈನಾನ್ಸ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ.

ರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ೧೧ ದಿನಗಳ ಕಾಲ ಶ್ರೀರಾಮಚಂದ್ರಾಪುರ ಮಠ ,ಹೊಸನಗರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಇವರು ದೇವಿಕಾ ಶಾಸ್ತ್ರಿಯವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಗೋಸೇವೆಯ ಅವಕಾಶವನ್ನು ಪಡೆದುಕೊಂಡವರು.

” ಮಾಸದ ಮಾತೆಯಾಗಿ ಸೇವೆ ಮಾಡಿದರೆ ಗುರಿ ತಲುಪಲು ಅಸಾಧ್ಯವಾಗಬಹುದೇ ಎಂಬ ಅಂಜಿಕೆ ಮೂಡಿ ಸುರಭಿ ಸೇವಿಕೆಯಾಗಿ ಸೇವೆ ಮಾಡೋಣ ಎಂದು ಭಾವಿಸಿದ್ದೆ , ಆದರೆ ಶ್ರೀಗುರುಗಳ ಕೃಪೆಯಿಂದ ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದರು. ಮಾಸದ ಮಾತೆಯಾಗಿ ಸೇವೆಗೈದು ಬಹಳ ಸುಲಭವಾಗಿ ಎರಡು ವರ್ಷಗಳ ಗುರಿ ತಲುಪಿದೆ ” ಎನ್ನುವ ಸರಸ್ವತಿ ಎಸ್.ಭಟ್ ಅಭಯಾಕ್ಷರ ಅಭಿಯಾನದಲ್ಲಿ ಭಾಗವಹಿಸಿದವರು. ಮಂಗಲ ಗೋಯಾತ್ರೆಯ ಸಂದರ್ಭದಲ್ಲೂ ಸೇವೆ ಸಲ್ಲಿಸುವ ಸೌಭಾಗ್ಯ ಪಡೆದವರು.

ಮೂರು ಬಾರಿ ಶ್ರೀಗುರು ಭಿಕ್ಷಾ ಸೇವೆ ನಡೆಸುವ ಅವಕಾಶ ಇವರಿಗೆ ಒದಗಿ ಬಂದಿದೆ. ತಮ್ಮ ಮನೆಯಲ್ಲಿ ಶ್ರೀಗುರು ಭಿಕ್ಷಾ ಸೇವೆಯ ಅವಕಾಶ ಒದಗಿ ಬಂದಿದ್ದು ಪೂರ್ವ ಜನ್ಮದ ಸುಕೃತ ಎನ್ನುವ ಸರಸ್ವತಿ ಅವರ ಹಿರಿಯ ಪುತ್ರ ಶ್ರೀಕೃಷ್ಣ ಶ್ರೀಪರಿವಾರದಲ್ಲಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ವಾಣಿಶ್ರೀ ಘಟಕದ ಅಧ್ಯಕ್ಷರಾದ ಇವರ ಪತಿ ಶ್ರೀಧರ ಭಟ್ ಅವರು ಇತ್ತೀಚೆಗೆ ಅಪಘಾತವೊಂದರ ಆಘಾತಕ್ಕೆ ಒಳಗಾಗಿ ಕೆಲವು ಹೊತ್ತು ಸ್ಮರಣ ಶಕ್ತಿಯನ್ನೇ ಕಳೆದುಕೊಂಡಿದ್ದರಂತೆ. ಶ್ರೀಗುರುಗಳ ಮಂತ್ರಾಕ್ಷತೆ ಸ್ವೀಕರಿಸಿದ ಮರುಕ್ಷಣವೇ ಅವರಿಗೆ ನೆನಪುಗಳು ಮರುಕಳಿಸಿದ್ದು ತಮ್ಮ ಜೀವನದಲ್ಲಿ ಮರೆಯಲಾರದ ಅನುಭವ ಎನ್ನುವ ಸರಸ್ವತಿ ಅವರು ಆ ಆತಂಕಯುಕ್ತ ಕ್ಷಣಗಳಲ್ಲಿ ಶ್ರೀಗುರು ಸ್ಮರಣೆಯೇ ಧೈರ್ಯ ತುಂಬಿದ್ದು ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ.

” ಬದುಕಿನ ಎಲ್ಲಾ ಸೌಭಾಗ್ಯಗಳು ದೊರಕಿದ್ದು ಶ್ರೀಗುರುಗಳ ಕೃಪೆಯಿಂದ , ಇನ್ನು ಮುಂದೆಯೂ ಶ್ರೀಗುರುಗಳ, ಗೋಮಾತೆಯ ಸೇವೆಯಲ್ಲಿ ಸಾಧ್ಯವಾದ ರೀತಿಯಲ್ಲಿ ಮುಂದುವರಿಯುವ ಅಭಿಲಾಷೆಯಿದೆ ” ಎನ್ನುವ ಸರಸ್ವತಿ ಎಸ್ ಭಟ್ ಇವರಿಗೆ ಇನ್ನಷ್ಟು ಸೋದರಿಯರು ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬರಬೇಕು , ಗೋಮಾತೆಯ ಕೃಪೆಗೆ ಪಾತ್ರರಾಗಬೇಕು ಎಂಬ ಸದಾಶಯವಿದೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *