“ಗುರುಸೇವೆಯಿಂದ ಒಳಿತಾಗಿದೆ”: ಲಕ್ಷ್ಮೀ ಎಸ್.ಭಟ್

ಮಾತೃತ್ವಮ್

“ಹಲವಾರು ವರ್ಷಗಳಿಂದ ಶ್ರೀಮಠಕ್ಕೆ ಹೋಗುತ್ತಿದ್ದೇವೆ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿವಿಧ ಯೋಜನೆಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸಿದೆ” ಎನ್ನುತ್ತಾರೆ ಉತ್ತರಕನ್ನಡ ಮೂಲದ ಹೊನ್ನಾವರ ತಾಲೂಕಿನ ಕಡತೋಕಾ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ಲಕ್ಷ್ಮೀ ಎಸ್. ಭಟ್.

ಶ್ರೀಮಠದ ನಿರ್ದೇಶಾನುಸಾರವಾಗಿ ಪಠಿಸ ಬೇಕಾಗಿರುವ ಎಲ್ಲಾ ಸ್ತೋತ್ರಗಳನ್ನೂ ಕಂಠಪಾಠ ಮಾಡಿ ನಿತ್ಯವೂ ಪಠಿಸುವ ಲಕ್ಷ್ಮೀ ಭಟ್ ಅವರು ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣಗಳನ್ನೂ ಮಾಡುತ್ತಾರೆ. ಧಾರ್ಮಿಕ ವಿಚಾರಗಳಲ್ಲಿ ಅತ್ಯಂತ ಆಸಕ್ತಿ ಹೊಂದಿರುವ ಇವರು ರಾಮಾಯಣ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠಕ್ಕೆ ಹೋಗಿದ್ದಾಗ ಶ್ರೀ ಸಂಸ್ಥಾನದವರ ಆಶೀರ್ವಚನದ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಸೇವೆ ಮಾಡುವ ನಿರ್ಧಾರ ಸ್ವೀಕರಿಸಿದರು.

“ಮಾಸದ ಮಾತೆಯಾಗಿ ಸೇವೆ ಗೈಯಲು ಪೂರ್ಣ ಸಹಕಾರ ನೀಡಿದ್ದು ನನ್ನ ಸೊಸೆ.ಅವಳಿಗೂ ಗುರುಸೇವೆಯಲ್ಲಿ ತುಂಬ ಆಸಕ್ತಿ ಇದೆ. ಅಮೇರಿಕಾದಲ್ಲಿರುವ ಮಗನೂ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾನೆ. ನಮ್ಮ ನೆಂಟರ ಬಳಗದಲ್ಲೆಲ್ಲ ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿಸಿದೆ. ದೇಶೀ ಹಸುವಿನ ರಕ್ಷಣಾ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿದ ಕಾರಣ ಬಹಳ ಬೇಗನೆ ಒಂದು ವರ್ಷದ ಗುರಿ ತಲುಪಿದೆ. ಈ ಕಾರ್ಯದಲ್ಲಿ ಬಹಳ ನೆಮ್ಮದಿ ಇದೆ” ಲಕ್ಷ್ಮೀ ಭಟ್ ಅವರ ಅಂತರಾಳದ ನುಡಿಗಳು ಇವು.

ಪತಿ ಎಸ್.ಎಸ್.ಭಟ್ ಅವರು ಬಿಎಸ್ ಎನ್ ಎಲ್ ನಲ್ಲಿ ಉದ್ಯೋಗದಲ್ಲಿರುವಾಗ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಇವರು ಪತಿಯ ನಿವೃತ್ತಿಯ ನಂತರ ಬೆಂಗಳೂರಿಗೆ ಬಂದವರು. ಉತ್ತರ ಕನ್ನಡದ ಸಾಲಕೋಡು ಇವರ ತವರುಮನೆ.

“ತವರುಮನೆಗೆ ಹೋದಾಗಲೆಲ್ಲ ಗೋಸ್ವರ್ಗಕ್ಕೆ ಹೋಗುತ್ತಿದ್ದೆ. ದೇಶೀಯ ಗೋವುಗಳಿಗಾಗಿ ಅಲ್ಲಿ ನಿರ್ಮಿಸಲಾದ ವ್ಯವಸ್ಥೆ ನಿಜಕ್ಕೂ ಅದ್ಭುತ. ಹಸುಗಳ ಜೊತೆಗೆ ಇರುವಾಗ ಬದುಕಿನ ಇತರ ಯೋಚನೆಗಳು ಮರೆತುಹೋಗುತ್ತವೆ. ಪುಟ್ಟ ಕರುಗಳ ಒಡನಾಟ ಮನಸ್ಸಿಗೆ ನವಚೈತನ್ಯ ನೀಡುತ್ತದೆ” ಎನ್ನುವ ಇವರು ಇತ್ತೀಚೆಗೆ ತಮ್ಮ ವಯೋಸಹಜ ಸಮಸ್ಯೆಗಳಿಂದ ಹಿಂದಿನಂತೆ ಎಲ್ಲಾ ಕಡೆಗೂ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದೂ ನುಡಿಯುತ್ತಾರೆ.

ಒಂದು ವರ್ಷದ ಗುರಿ ತಲುಪಿದ ಇವರಿಗೆ ಗೋಸೇಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಹಂಬಲವಿದ್ದರು ವಯಸ್ಸು ಅಡ್ಡಿ ಪಡಿಸುತ್ತಿದೆ.ಹಾಗಿದ್ದರೂ ಸೊಸೆ ಹಾಗೂ ತಮ್ಮಿಬ್ಬರು ಮಕ್ಕಳ ಬೆಂಬಲದಿಂದ ಇನ್ನಷ್ಟು ಸೇವೆ ಮಾಡಲು ಸಾಧ್ಯ ಎಂಬ ಆಶಾಭಾವನೆಯೂ ಇದೆ.

Author Details


Srimukha

Leave a Reply

Your email address will not be published. Required fields are marked *