ಶ್ರೀಮಠದ ಸೇವೆ ಬದುಕಿನ ಪಲ್ಲವಿ: ಭಾರತೀ ಕೊಡಿಪ್ಪಾಡಿ

ಮಾತೃತ್ವಮ್

ಭಾರತಿ ಅವರ ಮಕ್ಕಳಿಬ್ಬರೂ ಉನ್ನತ ಪದವಿ ಗಳಿಸಿ ಉದ್ಯೋಗ ನಿರತರು. ಅಮ್ಮನೆಂದರೆ ಅವರಿಗೆ ವಿಪರೀತ ಪ್ರೀತಿ. ತಾಯಿಯ ಇಚ್ಛೆ ಮೀರಿದವರಲ್ಲ. ಇಂಥಹ ತುಂಬು ಪ್ರೀತಿಯ ವಾತಾವರಣವಿರುವ ಕುಟುಂಬವಿದ್ದರೂ ಅವರು ಬಯಸಿದ್ದು ಸರಳ ಜೀವನವನ್ನು, ಗೋಸೇವೆಯನ್ನು,ಅದರಲ್ಲೂ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿರುವ ಗೋವುಗಳ ಸೇವೆಯನ್ನು. ಶ್ರೀಮಠಕ್ಕೆ ಬರುವ ಅತಿಥಿಗಳನ್ನು ಉಪಚರಿಸುತ್ತಾ ,ಗೋಶಾಲೆಯಲ್ಲಿರುವ ಹಸುಗಳ ಸೇವೆ ಮಾಡುತ್ತಾ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು.

ಪಡಾರು ಪಿ.ಕೆ.ನಾರಾಯಣ ಭಟ್ ಹಾಗೂ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಚೆಕ್ಕೆಮನೆ ಮೂಲದ ಸುಳುಗೋಡು ಚಂದ್ರಶೇಖರ ಅವರ ಪತ್ನಿ. ಪ್ರಸ್ತುತ ಉಪ್ಪಿನಂಗಡಿ ಮಂಡಲದ ಪುತ್ತೂರು ವಲಯದ ಕೊಡಿಪ್ಪಾಡಿ ನಿವಾಸಿಯಾಗಿದ್ದಾರೆ.

ಧಾರ್ಮಿಕ ವಿಚಾರದಲ್ಲಿ ಅತೀವ ಆಸಕ್ತಿ ಹೊಂದಿರುವ ಭಾರತಿಯವರು ಪ್ರಸ್ತುತ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದಂತಹ ಶಿಷ್ಯಬಂಧುಗಳು,ಯಾತ್ರಾರ್ಥಿಗಳು ಒಮ್ಮೆಯಾದರೂ ಇವರ ಆತಿಥ್ಯದ ವಿಶಿಷ್ಟ ಅನುಭವವನ್ನು ಪಡೆದವರು‌.

“ನಮ್ಮ ಮಾತುಗಳು ಇತರರ ಮನ ನೋಯಿಸುವಂತಿರ ಬಾರದು,ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಹಾಗೂ ತಾಳ್ಮೆ ಮತ್ತು ನಗು ನಮ್ಮ ಬದುಕಿಗೆ ಒಂದು ಆಭರಣ ” ಎನ್ನುವ ಭಾರತಿ ಅವರು ಶ್ರೀ ರಾಮಚಂದ್ರಾಪುರ ಮಠದಲ್ಲಿರುವ ಮೂವತ್ತೆರಡು ದೇಶೀಯ ತಳಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದವರು. ರಾಮಚಂದ್ರಾಪುರ ಮಠಕ್ಕೆ ಆಗಮಿಸುವವರಿಗೆ ಅಲ್ಲಿ ನಡೆಸಲಾಗುವ ಗೋಸೇವೆಗಳ ಮಾಹಿತಿಗಳನ್ನು ಒದಗಿಸಿಕೊಟ್ಟು ಅವರು ಸಹಾ ಗೋಸೇವೆಯಲ್ಲಿ ಭಾಗಿಯಾಗುವ ಅವಕಾಶ ದೊರಕಿಸಿಕೊಡುವ ಇವರು ತಮ್ಮ ಸರಳ ನಡೆನುಡಿಗಳಿಂದಲೇ ಜನಮಾನಸ ಗೆದ್ದವರು.

ಶ್ರೀರಾಮ ದೇವರ ಪೂಜೆಗಾಗಿ ಹೂವು ಸಂಗ್ರಹಿಸುವ ,ಶ್ರೀರಾಮ ದೇವರ ಅಭೀಷೇಕಕ್ಕಾಗಿ ಹಾಲು ಕರೆಯುವ ಕಾರ್ಯವನ್ನು ಸಹಾ ನಿತ್ಯ ಕೈಗೊಳ್ಳುವ ಇವರು “ನನ್ನದೇನಿದ್ದರೂ ರಾಮದೇವರ ಸೇವೆ,ಗುರುಸೇವೆ,ಗೋಸೇವೆ. ಹೆಚ್ಚೇನೂ ಇಲ್ಲ” ಎಂದು ಸಂಕೋಚದಿಂದಲೇ ನುಡಿಯುತ್ತಾರೆ.

“ಒಂದು ಬಾರಿ ವಿದೇಶದಿಂದ ಬಂದ ಒಬ್ಬ ದಂಪತಿಗಳ ಆರು ವರ್ಷದ ಮಗನಿಗೆ ಯಾವುದೋ ಚರ್ಮದ ಕಾಯಿಲೆ ಇತ್ತು. ಮಾತಿನ ನಡುವೆ ಈ ವಿಚಾರ ತಿಳಿದಾಗ ಶ್ರೀಮಠದ ಗವ್ಯೋತ್ಪನ್ನಗಳಲ್ಲೊಂದಾದ ಸಾಬೂನನ್ನು ಒಂದು ಬಾರಿ ಉಪಯೋಗಿಸಿ ನೋಡಿ ಎಂದು ಹೇಳಿದೆ. ಅವರು ಒಪ್ಪಿ ಸ್ವೀಕರಿಸಿದರು. ಮುಂದೆ ಕೆಲವೇ ವಾರಗಳಲ್ಲಿ ಮತ್ತೊಮ್ಮೆಶ್ರೀ ಮಠಕ್ಕೆ ಬಂದು ಸುಮಾರು ಅರುವತ್ತಕ್ಕೂ ಹೆಚ್ಚು ಸಾಬೂನುಗಳನ್ನು ಖರೀದಿಸಿ ತಮ್ಮ ಮಗನಿಗೆ ಈ ಸಾಬೂನಿನ ಬಳಕೆಯಿಂದ ಕಾಯಿಲೆ ಕಡಿಮೆಯಾಗಿದೆ ಎಂದು ಕೃತಜ್ಞತೆ ಅರ್ಪಿಸಿದರು” ಎಂದು ತಮ್ಮ ಬದುಕಿನ ಕೆಲವು ವಿಶಿಷ್ಟ ಅನುಭವಗಳ ಬಗ್ಗೆ ಭಾರತಿಯವರು ನುಡಿಯುತ್ತಾರೆ.

ನರದೌರ್ಬಲ್ಯದಿಂದ ಬಳಲುತ್ತಿದ್ದ ಯುವಕನೊಬ್ಬನು ಗೋಅರ್ಕ ಸೇವೆಯಿಂದ ಸಂಪೂರ್ಣ ಗುಣಮುಖ ಹೊಂದಿದ ಘಟನೆಯ ಬಗ್ಗೆ ವಿವರಿಸುವ ಅವರು ಶ್ರೀರಾಮ ದೇವರಲ್ಲಿ ಸಂಪೂರ್ಣ ಶ್ರದ್ಧಾ ಭಕ್ತಿ, ಹಾಗೂ ಸಮರ್ಪಣಾ ಭಾವದ ಶರಣಾಗತಿಯಿಂದ ಬದುಕಿನಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬುದು ಭಾರತಿಯವರ ಅಚಲ ನಂಬಿಕೆ.

ನಿತ್ಯ ನಿರಂತರ ಗೋಸೇವೆಯಲ್ಲಿ ನಿರತರಾಗಿರುವ ಇವರ ಮನ ಸದಾ ಗೋವುಗಳಿಗಾಗಿಯೇ ಮಿಡಿಯುತ್ತಿದೆ. ಈ ಕಾರಣದಿಂದಲೇ ಅವರು ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾದವರು. ಮಾತ್ರವಲ್ಲದೆ ಮಾತೃತ್ವಮ್ ಯೋಜನೆಯ ಮೂಲಕವೂ ಮಾಸದ ಮಾತೆಯಾಗಿ ಗುರಿ ತಲುಪಿದವರು.

ಎಲೆ ಮರೆಯ ಕಾಯಿಯಂತೆ ಸದಾ ಗೋಸೇವೆಯಲ್ಲಿ ಸಂತೃಪ್ತಿ ಕಾಣುವ ಇವರ ಬದುಕು ಇತರರಿಗಿಂತ ತುಂಬಾ ಭಿನ್ನ ಹಾಗೂ ಅನುಕರಣೀಯ.

Author Details


Srimukha

Leave a Reply

Your email address will not be published. Required fields are marked *