” ‌‌ಶ್ರೀಮಠದ ಸೇವೆಯಿಂದ ರಾಮಾನುಗ್ರಹ ” : ಉಷಾ ಕುಮಾರಿ ಚೇರಾಲು

ಮಾತೃತ್ವಮ್

” ಗಿರಿನಗರದ ಶ್ರೀರಾಮಾಶ್ರಮಕ್ಕೆ ಹೋಗಿದ್ದಾಗ ಶ್ರೀ ಗುರುಗಳ ಆಶೀರ್ವಾದದಿಂದ ಪ್ರೇರಣೆಗೊಂಡು ಶ್ರೀಮಠದ ಸೇವೆಯಲ್ಲಿ ಭಾಗಿಯಾಗಬೇಕು ಎಂಬ ಹಂಬಲ ಮೂಡಿತು. ಸುಮಾ ರಮೇಶ್ ಹಾಗೂ ಲಕ್ಷ್ಮೀ ಇಳಂತಿಲ ಅವರ ಪ್ರೀತಿಯ ಒತ್ತಡಕ್ಕೆ ಮಣಿದು ಮಾಸದ ಮಾತೆಯಾಗಿ ಸೇವೆ ಮಾಡಲು ಕೈಜೋಡಿಸಿದೆ. ಆದರೆ ಮನದ ಮೂಲೆಯಲ್ಲಿ ತುಂಬಾ ಅಳುಕಿತ್ತು. ನಮ್ಮ ವಲಯದ ನಿವೃತ್ತ ಶಿಕ್ಷಕಿ, ಸಮಾಜಸೇವಕಿ ಕಮಲಕ್ಕ ಅವರ ಸಹಕಾರದಿಂದ ಮಾಸದ ಮಾತೆಯಾಗಿ ಸೇವೆಮಾಡಲು ಮಾರ್ಗದರ್ಶನ ದೊರಕಿತು ” ಎನ್ನುತ್ತಾರೆ ಮಂಗಳೂರು ಮಂಡಲದ ಬಾಯಾರು ವಲಯದ ಉಷಾಕುಮಾರಿ ಚೇರಾಲು.

ಚಾಲತ್ತಡ್ಕದ ಶಂಭಟ್ಟ ಹಾಗೂ ಹೊನ್ನಮ್ಮ ದಂಪತಿಗಳ ಪುತ್ರಿಯಾದ ಉಷಾ ಅವರು ನಿವೃತ್ತ ಶಿಕ್ಷಕಿಯಾಗಿದ್ದಾರೆ.

ಇವರ ಪತಿ ಈಶ್ವರ ಭಟ್ ಅವರು ದಶಕಗಳ ಕಾಲ ವಲಯ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಆ ಸಂದರ್ಭದಲ್ಲಿ ಪತಿಗೆ ಸಹಕಾರ ನೀಡುತ್ತಿದ್ದ ಉಷಾ ಪ್ರಸ್ತುತ ಬಾಯಾರು ವಲಯದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

” ಮಾತೃತ್ವಮ್ ಗುರಿ ತಲುಪಲು ಹಲವಾರು ಮಿತ್ರರು,ಬಂಧುಗಳು, ಗೋಪ್ರೇಮಿಗಳು ಸಹಕಾರ ನೀಡಿದ್ದಾರೆ. ಸಹೋದ್ಯೋಗಿಗಳು, ಸಮಾಜ ಬಾಂಧವರು ಕೈ ಜೋಡಿಸಿದ್ದಾರೆ.ಅವರೆಲ್ಲರ ಸಹಕಾರದಿಂದ ಅಸಾಧ್ಯವೆಂದು ಭಾವಿಸಿದ ಕಾರ್ಯ ಹೂವೆತ್ತಿದಷ್ಟು ಸರಳವಾಗಿ ಕೈಗೂಡಿತು ” ಎನ್ನುವ ಅವರು ಇದಕ್ಕೆ ಕಾರಣ ಶ್ರೀಗುರುಗಳ ಅನುಗ್ರಹ ಎಂಬುದನ್ನು ದೃಢವಾಗಿ ನಂಬುವವರು.

ತಮ್ಮ ಗುರಿ ಸಾಧನೆಯ ಹಿಂದೆ ಅನುಭವಿಸಬೇಕಾಗಿ ಬಂದ ಕಹಿಘಟನೆಗಳನ್ನೆಲ್ಲ ಕೆಟ್ಟ ಕನಸಿನಂತೆ ಮರೆತು ಶ್ರೀಗುರುಗಳ, ಗೋಮಾತೆಯ ಸೇವೆ ಪುಣ್ಯಕಾರ್ಯ ಎಂದು ಭಾವಿಸಿ ಇದರಲ್ಲಿ ಮುಂದುವರಿದವರು ಉಷಾ.

ಶ್ರೀಗುರು ಚರಣಗಳಲ್ಲಿ ಅಚಲ ನಂಬಿಕೆಯಿರುವ ಉಷಾ ಶ್ರೀಮಠದ ಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡರೆ ಬದುಕಿನ ಕಷ್ಟಗಳೆಲ್ಲ ಪರಿಹಾರವಾಗಿ ಶ್ರೀರಾಮ ದೇವರ ಅನುಗ್ರಹ ದೊರಕಬಹುದು ಎಂಬ ವಿಶ್ವಾಸ ಹೊಂದಿದವರು.

ಕೆಲವು ವರ್ಷಗಳ ಹಿಂದೆ ಕೈರಂಗಳದ ರಾಮಕಥೆಗೆ ಹೋಗಿದ್ದಾಗ ನಡೆದ ಘಟನೆಯೊಂದು ಶ್ರೀಗುರುಗಳ, ಶ್ರೀರಾಮ ದೇವರ ಮೇಲಿನ ಅಚಲ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಕೈರಂಗಳದಲ್ಲಿ ರಾಮಕಥೆ ಆರಂಭವಾದಾಗ ಉಷಾ ಅವರಿಗೆ ತಮ್ಮ ಮನೆಯ ಕೀಲಿ ಕೈ ಎಲ್ಲಿರಿಸಿದ್ದು ಎಂಬ ಯೋಚನೆ ಬಂದು ತಮ್ಮ ಕೈಚೀಲದಲ್ಲಿ ಹುಡುಕಾಡಿದಾಗ ಕೀಲಿ ಕೈ ಸಿಗಲಿಲ್ಲ. ತಮ್ಮ ಪಕ್ಕದಲ್ಲಿರುವ ಸೋದರಿಯೊಡನೆ ಈ ವಿಚಾರವನ್ನು ತುಸು ಆತಂಕದಿಂದ ಹೇಳಿ ಹೊರಗೆ ಇರುವ ಮಗನಿಗೆ ಪೋನ್ ಕರೆ ಮಾಡಲು ಪ್ರಯತ್ನಿಸಿದರೂ ಸಂಪರ್ಕ ಸಿಗಲಿಲ್ಲ. ಇದೇ ಯೋಚನೆಯಲ್ಲಿ ಹತಾಶರಾಗಿರುವಾಗಲೇ ಶ್ರೀಗುರುಗಳು ತಮ್ಮ ರಾಮಕಥೆಯಲ್ಲಿ ” ಎಲ್ಲರೂ ರಾಮಕಥೆಗೆ ಬನ್ನೀ, ರಾಮ ಕಾಯುತ್ತಾನೆ ” ಎನ್ನುವುದು ಕೇಳಿಸಿತು. ಮನದ ಚಿಂತೆಯನ್ನು ಪಕ್ಕಕ್ಕೆ ಸರಿಸಿ ,ಮನವನ್ನು ರಾಮಚರಣದಲ್ಲಿರಿಸಿ ಕಥೆಯನ್ನೇ ಶ್ರದ್ಧೆಯಿಂದ ಕೇಳಿದರು. ಕಥೆ ಮುಗಿಸಿ ಹೊರಗೆ ಬಂದು ಮಗನಲ್ಲಿ ವಿಚಾರಿಸಿದಾಗ
” ನಿನ್ನಲ್ಲಿ ಕೊಟ್ಟಿದ್ದೆ ” ಎಂದ. ಇನ್ನೆಲ್ಲಿ ಹುಡುಕುವುದು ಎಂದು ಚಿಂತಾಕ್ರಾಂತರಾಗಿರುವಾಗಲೇ ಧ್ವನಿವರ್ಧಕದಲ್ಲಿ
‘ ಕೀಲಿ ಕೈ ಗೊಂಚಲೊಂದು ಬಿದ್ದು ಸಿಕ್ಕಿದ ‘ ಬಗ್ಗೆ ಹೇಳುತ್ತಾ ವಾರಸುದಾರರು ಅವರಿಂದ ಪಡೆದುಕೊಳ್ಳಲು ಹೇಳಿದರು. ತಕ್ಷಣವೇ ಶ್ರೀರಾಮಾನುಗ್ರಹದಿಂದಲೇ ಕೀಲಿ ಕೈ ದೊರಕಿತೆಂದು ಭಾವಿಸಿ ಅಲ್ಲಿಂದ ಪಡೆದುಕೊಂಡರು. ಈ ಘಟನೆಯು ತಮ್ಮ ಜೀವನದಲ್ಲಿ ಎಂದೂ ಮರೆಯಲಾರದ ಅನುಭವ ಎನ್ನುವ ಉಷಾ ಅವರಿಗೆ ಇನ್ನು ಮುಂದೆಯೂ ತಮ್ಮಿಂದ ಸಾಧ್ಯವಾದಷ್ಟು ಗೋಸೇವೆ,ಗುರುಸೇವೆ ಮಾಡಬೇಕೆಂಬ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *