ಅವಿಚ್ಛಿನ್ನ ಗುರುಪರಂಪರೆಯನ್ನು ಉಳಿಸಿ ಕಲಿಯುಗದಂತಹ ಕ್ರೂರ ಕಾಲದಲ್ಲಿಯೂ ಶಿಷ್ಟರ ರಕ್ಷಣೆಗಾಗಿ ಮತ್ತು ದುಷ್ಟರನ್ನೂ ಶಿಷ್ಟಾಚಾರದಲ್ಲಿ ತೊಡಗಿಸಲು ಸದಾ ದಯೆತೋರುತ್ತಾ ಭುವಿಯಲ್ಲಿ ಗುರುವೆಂಬ ಸ್ಥಾನದಲ್ಲಿ ಮೂಡಿಬರುತ್ತಿರುವ ಶ್ರೀಮನ್ನಾರಾಯಣ, ೨೭ನೇ ಗುರುಮೂರ್ತಿಯಾಗಿ ಶ್ರೀ ಶ್ರೀಮದ್ರಘೂತ್ತಮ ಭಾರತೀ(೩) ಎಂಬ ಶುಭನಾಮದಿಂದ ತೋರ್ಪಟ್ಟ. ಹಾಗೆ ಅಂದಿನಿಂದಲೂ ತೋರ್ಪಡುತ್ತಾ ಬಂದಿರುವ ಶ್ರೀಮನ್ನಾರಾಯಣ ಪ್ರತಿರೂಪಿ ಗುರು ಹೇಗಿರುತ್ತಾನೆಂದು ಶ್ರೀಮದಾಚಾರ್ಯ ಶಂಕರಭಗವತ್ಪಾದರ ಮಠಾಮ್ನಾಯದಲ್ಲಿ ಉಲ್ಲೇಖಿಸಿದೆ.
ಶುಚಿರ್ಜಿತೇಂದ್ರಿಯೋ ವೇದವೇದಾಂಗ ವಿಶಾರದಃ |
ಯೋಗಜ್ಞಃ ಸರ್ವತಂತ್ರಾಣಾಮಸ್ಮದಾಸ್ಥಾನಮಾಪ್ನುಯಾತ್ ||
ಇಂತೆಯೇ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು (೩) ಸರ್ವದಾ ಶುಚಿಭೂತರೂ, ಇಂದ್ರಿಯ ನಿಗ್ರಹಿಗಳೂ, ವೇದವೇದಾಂಗಗಳನ್ನು ಚೆನ್ನಾಗಿ ಅರಿತವರೂ, ಯೋಗಶಾಸ್ತ್ರ ವಿಹಿತವಾದ ಸಿದ್ಧಿಗಳನ್ನು ಪಡೆದವರೂ ಆಗಿದ್ದರು. ಆ ಕಾಲದ ಆಳರಸರಿಗೆ ಮಠವೆಂಬ ಧರ್ಮಸಿಂಧುವಿನೊಡನೆ ಅಪ್ಯಾಯಮಾನವಾಗಿ ಬೆಳೆಸಿಕೊಂಡಿದ್ದ ಬಾಂಧವ್ಯವನ್ನು ಈ ಹಿಂದಿನಿಂದಲೂ ಕಾಣುತ್ತಾ ಬಂದಿದ್ದೇವೆ. ಅಂತೆಯೇ ಶ್ರೀಮನ್ಮಹಾಮಂಡಲೇಶ್ವರ ಲಕ್ಷ್ಮೀದೇವಿ ಅಮ್ಮನವರು ಶ್ರೀ ಶ್ರೀಮದ್ರಘೂತ್ತಮ ಭಾರತೀ ಶ್ರೀಗಳ ಭಿಕ್ಷಾಸ್ವಾಸ್ಥ್ಯಕ್ಕೆಂದು ದೀವಿಗೆ, ಕಣಿಲೇಗದ್ದೆ, ದುಂಡಕುಳಿ ಮೊದಲಾದ ಪ್ರದೇಶಗಳನ್ನು ದಾನಧಾರಾಪೂರ್ವಕವಾಗಿ ಕೊಟ್ಟಿದ್ದು ಉಲ್ಲೇಖಿತವಾಗಿದೆ. ನಗಿರೆ, ಹೈವ, ತುಳುವ, ಕೊಂಕಣ ರಾಜ್ಯಗಳನ್ನು ಆಳುತ್ತಿದ್ದ ಶ್ರೀಮನ್ಮಹಾಮಂಡಲೇಶ್ವರ ಸಾಳ್ವ ಕೃಷ್ಣದೇವರಸ ಒಡೆಯರು ತಮ್ಮ ಆಯುಷ್ಯಾಭಿವೃಧ್ಯರ್ಥವಾಗಿ ಮನ್ಮಥ ಸಂವತ್ಸರದ ಮಾಘ ಬಹುಳ ದಶಮಿಯಂದು ಸೈಗನಹಳ್ಳಿ ಮಾಗಣಿ ಸೀಮೆಯ ಕುಂಟಗೊಣಿ, ಸಂಟಗೊಣಿಯ ಸ್ಥಳಗಳನ್ನು ಹಿರಣ್ಯೋದಕ ದಾನಧಾರಾಪೂರ್ವಕವಾಗಿ ಧಾರೆಯೆರೆದು ಕೊಟ್ಟು ಅಪ್ಪಣೆ ಕಾಣಿಕೆ ಕಡ್ಡಾಯ, ಊರು ವರಾಡ, ದೇಶ ವರಾಡ ಮೊದಲಾದ ಯಾವ ನಿಯಮಗಳಿಗೂ ಒಳಪಡದ ರೀತಿಯಲ್ಲಿ ಸರ್ವಮಾನ್ಯವಾಗಿ ಶಿಷ್ಯಪಾರಂಪರ್ಯ ಆಳಿ ಅನುಭವಿಸಿಕೊಂಡು ಬರುವಂತೆ ಧರ್ಮಶಾಸನ ಮಾಡಿದ್ದನ್ನು ಶಾಸನಗಳಲ್ಲಿ ಕಾಣಬಹುದಾಗಿದೆ. ಹೀಗೆ ಸುದೀರ್ಘ ಕಾಲ ಶ್ರೀಮಠದ ಧೌರ್ಯವನ್ನು ಹೊತ್ತು ಸಮಾಜಕ್ಕೆ ಸತ್ಪಥವನ್ನು ತೋರಿಸಿದ ಪೂಜ್ಯ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು (೩) ನೂತನ ಶಿಷ್ಯರೋರ್ವರಿಗೆ ಯೋಗಪಟ್ಟವನ್ನಿತ್ತು ತಮ್ಮ ಗುರಗಳಾದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ (೫) ಎಂಬ ಶುಭಾಭಿಧಾನವನ್ನಿತ್ತು ತಾವು ಪರಮಪದವನ್ನು ಸೇರಿದರು.