ಅವಿಚ್ಛಿನ್ನ ಅರಿವಿನ ಹರಿವಿಗೆ ಪಾತ್ರವಾಗಿ ಬಂದವರು ಇಪ್ಪತ್ತೈದನೇ ಪೀಠಾಧೀಶರಾದ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು(೨). ಸಣ್ಣಪ್ರಾಂತ್ಯ ಹೊಂದಿದ್ದರೂ ಸಮರ್ಥ ರಾಜ್ಯಭಾರ ಮಾಡಿದ ಇಕ್ಕೇರಿ ಅರಸರು ಸಹಜವಾಗಿಯೇ ಅರಿವಿನ ಧ್ಯೇಯ ಸಾಧನವಾದ ಧರ್ಮಮಾರ್ಗದ ಅನುಸರಣೆಗಾಗಿ ಅವಿಚ್ಛಿನ್ನ ಅರಿವಿನ ಗುರುಪರಂಪರೆಯನ್ನು ಹೊಂದಿದ ಶ್ರೀರಾಮಚಂದ್ರಾಪುರ ಮಠದ ಪೀಠಾಧೀಶರ ಶಿಷ್ಯತ್ವವನ್ನು ಪಡೆದಿದ್ದರು. ಆದ್ದರಿಂದ ಶ್ರೀಗುರುಗಳಲ್ಲಿ ವಿಶೇಷ ಗೌರವವನ್ನು ಹೊಂದಿದ್ದ ಇಕ್ಕೇರಿಯ ಅರಸನಾದ ಬಸಪ್ಪನಾಯಕನು ಕ್ರಿ.ಶ ೧೭೪೫ರಲ್ಲಿ ನಿರೂಪವೊಂದನ್ನು ಹೊರಡಿಸಿ ಶ್ರೀರಾಮಚಂದ್ರಾಪುರ ಮಠಕ್ಕೆ ರಾಯದತ್ತವಾಗಿ ಬಂದ ದಿವಾಜ್ಯೋತಿ ಮಕರಣತೋರಣಾದಿ ಬಿರುದು ಬಾವಲಿಗಳನ್ನಿತ್ತು ಬೇರೆ ಎಲ್ಲಾ ಮಠಾಧೀಶರು ಬಳಸುವಂತಿಲ್ಲವೆಂದು ಆಜ್ಞೆಯನ್ನು ಹೊರಡಿಸಿದ್ದನು. ಶಾಸನದ ಸಂಪೂರ್ಣ ಪಾಠವು ಈ ರೀತಿಯಲ್ಲಿ ದಾಖಲಾಗಿದೆ…
ಆ ಕಾಲದಲ್ಲಿ ಹೈವ ರಾಜ್ಯವನ್ನು ಆಳುತ್ತಿದ್ದ ಗದುಗಿನ ಲಖ್ಖಂಣ ಅಯ್ಯಗಳ ಮಕ್ಕಳೂ ಹಾಗೂ ಅವರ ತಮ್ಮ ದೇವರಾಯ ಸೋವಂಣಗಳು ಗುಂಡಪ್ಪಡನಾಯಕರ ಮಠದ ಪಾರುಪತ್ಯವನ್ನು ಪೂಜ್ಯ ಶ್ರೀಮದ್ರಘೂತ್ತಮ ಭಾರತೀ(೨) ಶ್ರೀಗಳಿಗೆ ಧರ್ಮಶಾಸನದ ಮೂಲಕ ಸಮರ್ಪಿಸಿದ್ದು ಇತಿಹಾಸದಲ್ಲಿ ಉಲ್ಲಿಖಿತವಾಗಿದೆ. ಅಲ್ಲದೆ ಇನ್ನೂ ಅನೇಕ ಉಂಬಳಿಗಳು, ಶ್ರೀರಾಮದೇವರ ಸೇವೆಗೆಂದು ವಿಶೇಷ ಭೂಮಿ ಹಾಗೂ ಇನ್ನಿತರ ಸಂಪತ್ತುಗಳೂ ಆಳರಸರ ಭಕ್ತಿಪ್ರತೀಕವಾಗಿ ಪೂಜ್ಯ ಶ್ರೀಗಳ ಕಾಲದಲ್ಲಿ ಶ್ರೀಮಠಕ್ಕೆ ನಿವೇದಿತವಾದವು. ಪೂಜ್ಯ ಶ್ರೀಗಳು ಬಹುಕಾಲ ಶ್ರೀಮಠದ ಧುರವನ್ನು ಧರಿಸಿ ಸಮಾಜಕ್ಕೆ ಶಿಷ್ಯವರ್ಗಕ್ಕೆ ಔನ್ನತ್ಯದ ದಾರಿಯನ್ನು ತೋರಿಸಿ ಯೋಗ್ಯ ವಟುವೋರ್ವನನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿ ತಮ್ಮ ಗುರುವರ್ಯರಾದ ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಶುಭನಾಮಧೇಯವನ್ನೇ ಇತ್ತು ಪರಮಪದವನ್ನು ಆರೋಹಿಸಿದರು.
ಅವಿಚ್ಛಿನ್ನ ಗುರುಪರಂಪರೆಯಲ್ಲಿ ಇಪ್ಪತ್ತಾರನೆಯವರಾಗಿ ಯೋಗಪಟ್ಟಾಭಿಷಿಕ್ತರಾದವರು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು(೪). ವಿಜಯನಗರ ಸಾಮ್ರಾಜ್ಯದ ಆಡಳಿತವೂ ಶಿಥಿಲವಾಗಿ, ಸಾಮಂತರಾಜರೇ ಸರ್ವಾಧಿಕಾರಿಗಳಾಗಿದ್ದ ಕಾಲಘಟ್ಟದಲ್ಲಿ, ಸನಾತನವಾದ ವೈದಿಕ ಧರ್ಮಕ್ಕೆ ಸುತ್ತಲಿನ ಆಘಾತವಿದ್ದ ಸಮಯದಲ್ಲಿಯೂ ಶ್ರೀಮಠದ ಸಂಪ್ರದಾಯವನ್ನು, ಮೂಲಧ್ಯೇಯವನ್ನು ಕಿಂಚಿತ್ತೂ ಕೊಂಕಿಸದೆ ಶಿಷ್ಯಕೋಟಿಗೂ ಯೋಗ್ಯ ಮಾರ್ಗದರ್ಶನವನ್ನು ನೀಡಿದ ಮಹಾಮುನಿಗಳು. ತಮ್ಮ ಅಂತ್ಯಕಾಲದಲ್ಲಿ ಯೋಗ್ಯ ವಟುವೋರ್ವನಿಗೆ ಯೋಗಪಟ್ಟಾಭಿಷೇಕವ ಗೈದು ಶ್ರೀ ಶ್ರೀಮದ್ರಘೂತ್ತಮ ಭಾರತೀ(೩) ಎಂಬ ಶುಭಾಭಿಧಾನವನ್ನಿತ್ತು ಇಹ ಶರೀರವನ್ನು ಪಂಚಭೂತಗಳಲ್ಲಿಯೇ ಲೀನಗೊಳಿಸಿ ಅರಿವೊಂದೇ ತಾವಾಗಿ ಚಿರರಾದರು ಎನ್ನುತ್ತಾ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.