ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೮

ಅರಿವು-ಹರಿವು
ಅರಿವನ್ನು  ಹರಿಸಲೆಂದೇ  ಉಂಟಾದ ಅರಿವಿನ ಸೆಲೆ- ‘ಅವಿಚ್ಛಿನ್ನ ಗುರುಪರಂಪರೆ’ ತನ್ನ ಮೂವತ್ತೊಂದನೆಯ ಪಾತ್ರವನ್ನು ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ರೂಪದಿಂದ ಪ್ರಕಟಗೊಳಿಸಿತು. ಆ ಪ್ರಕಟಗೊಂಡ ಅರಿವಿನಮೂರ್ತಿ ಧರ್ಮಾಚಾರ್ಯರ  ಪುಣ್ಯಜೀವನವನ್ನೊಮ್ಮೆ ಈ ಸಂಚಿಕೆಯಲ್ಲಿ ಸ್ಮರಿಸೋಣ.
ಲಭ್ಯವಾದ ಶ್ರೀಮಠದ  ಇತಿಹಾಸದಲ್ಲಿ ಉಲ್ಲಿಖಿತವಾದಂತೆ ನಮ್ಮ ಗುರುಪರಂಪರೆಯ ಧರ್ಮಾಚಾರ್ಯಸ್ಥಾನವನ್ನು ಆರೋಹಿಸಿದವರಲ್ಲಿ ಹೆಚ್ಚಿನ ಸಂಖ್ಯೆಯವರು  ಗೋಕರ್ಣ ಮತ್ತು ಕೆಕ್ಕಾರಿನವರು. ಆದರೆ ಮೂವತ್ತೊಂದನೆಯವರ  ಪೂರ್ವಾಶ್ರಮದ ಹುಟ್ಟು ಪ್ರಧಾನ ಮಠದ ಸನಿಹ ಹೆದ್ಲಿ ಗ್ರಾಮದಲ್ಲಿ.  ಶ್ರೀಗಳಿಗೆ ಶಾಂಕರಪೀಠದ ಧರ್ಮಾಚಾರ್ಯರಾಗಿ ತುರೀಯಾಶ್ರಮವು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ದೊರಕಿತು. ಶ್ರೀಮಠದಲ್ಲಿಯೇ ಉಳಿದು ಉತ್ತಮವಾದ ರೀತಿಯಲ್ಲಿ ಪೂರ್ವಾಚಾರ್ಯ ಸಂಪ್ರದಾಯದಂತೆ ಶಾಸ್ತ್ರಾಧ್ಯಯನಾದಿಗಳನ್ನು ಪೂರೈಸಿದ ಶ್ರೀಗಳು ತಪೋನಿಷ್ಠರಾಗಿದ್ದರು. ಸಂನ್ಯಾಸವನ್ನು ಸ್ವೀಕರಿಸಿದ ಕೆಲವೇ ದಿನಗಳಲ್ಲಿ  ಗುರುಗಳಾದ  ೩೦ ನೆಯ ಯತಿಗಳಾದ ಶ್ರೀಮದ್ರಾಘವೇಶ್ವರರು ಮುಕ್ತರಾದಾಗ ಕೆಕ್ಕಾರಿನ ರಘೂತ್ತಮ ಮಠದ ಹದಿಮೂರನೆಯ ಯತಿಶ್ರೇಷ್ಠರೂ, ಶಾಸ್ತ್ರಜ್ಞರೂ, ಆಡಳಿತದಲ್ಲಿ ಅನುಭವಿಗಳೂ, ತಪೋವೃದ್ಧರೂ ಆಗಿದ್ದ  ಶ್ರೀರಾಘವೇಶ್ವರ ಭಾರತೀ ಶ್ರೀಗಳು ರಾಮಚಂದ್ರಾಪುರಮಠದಲ್ಲಿ ಉಳಿದು ಪೂಜ್ಯಶ್ರೀಗಳಿಗೆ ಶಾಸ್ತ್ರಾಧ್ಯಾಪನವನ್ನು ಮಾಡಿದ್ದರು. ಅಪ್ರತಿಮ ಶಾಸನ ವಿಧಿಸುವ ಶಕ್ತಿಯುಳ್ಳ ಶ್ರೀರಾಘವೇಶ್ವರಭಾರತಿಗಳಿಗೆ ಆ ಕಾಲದಲ್ಲಿ ‘ಹಿರೇ ಒಡೆಯರು’ ಎಂಬ ಬಿರುದೂ ಇತ್ತು. ನೂತನ ಶ್ರೀಗಳು ಇನ್ನೂ ಚಿಕ್ಕವಯಸ್ಸಿನವರಾದ್ದರಿಂದ  ಶ್ರೀಮಠದ ಆಡಳಿತದ ಹೊಣೆಯನ್ನೂ ಸ್ವೀಕರಿಸಿದ್ದರು. ಅನಂತರ ತಮ್ಮ ಕೆಕ್ಕಾರಿನ ಮಠದ ಸರ್ವಾಧಿಕಾರವನ್ನೂ ಶ್ರೀರಾಮಚಂದ್ರಭಾರತೀ ಶ್ರೀಗಳಿಗೆ  ವಹಿಸಿಕೊಟ್ಟರು. ಆಮೇಲೆ ಕೆಕ್ಕಾರಿನ ‘ರಘೂತ್ತಮ’ ಮಠಕ್ಕೆ ಅರಿವಿನಮೂರ್ತಿಯ ಪೀಠಾಧಿಪತ್ಯ ಪ್ರತ್ಯೇಕವಾಗಿ ರಚನೆಯಾಗದೇ  ಆ ಮಠವು ಶ್ರೀರಾಮಚಂದ್ರಾಪುರಮಠದಲ್ಲಿಯೇ ವಿಲೀನವಾಯಿತು.
ಇಲ್ಲೊಂದು ವೈಶಿಷ್ಟ್ಯವನ್ನು ಗಮನಿಸುವುದಾದರೆ ನಮ್ಮ ಶ್ರೀಮಠದ ಹನ್ನೊಂದನೆಯ ಪೀಠಾಧೀಶರಾಗಿದ್ದ ಮೊದಲನೆ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳ ಶಿಷ್ಯರಾದ ಶ್ರೀಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ ಪ್ರತ್ಯೇಕವಾಗಿ ರೂಪುಗೊಂಡ ಕೆಕ್ಕಾರಿನ ರಘೂತ್ತಮ ಮಠವು ಅದೇ ಶ್ರೀಮದ್ರಾಘವೇಶ್ವರಭಾರತೀ ಹಾಗೂ ಶ್ರೀರಾಮಚಂದ್ರಭಾರತೀ ಎಂಬ ಶುಭಾಭಿದಾನದವರ ಕಾಲದಲ್ಲಿಯೇ ಮತ್ತೆ ಒಂದಾಯಿತು. ಶ್ರೀಗಳೂ ಇಹ ಜೀವನದಲ್ಲಿ  ಹೆಸರಿಗೆ ತಕ್ಕಂತೆ ಶ್ರೀರಾಮಪಟ್ಟಂತಹ ಕಷ್ಟವನ್ನೇ ಪಡಬೇಕಾಗಿ ಬಂದಿತು. ಶ್ರೀಮಠದ ವಿರುದ್ಧದ ದುಷ್ಟರ ಪಿತೂರಿಯ ವಿರುದ್ಧ ಹೋರಾಡಿ ಮಠದ ಘನತೆ, ಗೌರವ, ಸ್ಥಾನವನ್ನು ಕಾಪಾಡಿದರು. ಇದರಿಂದ ಮಠಕ್ಕೆ ಯಾವ ಹಾನಿಯೂ ಉಂಟಾಗಲಿಲ್ಲ. ಈ ಸಂದರ್ಭವನ್ನು ಗುರುಕೃಪಾತರಂಗಿಣಿ ಹೀಗೆ ವರ್ಣಿಸಿದೆ. “ಮಹತ್ತಾದ ಮೈನಾಕಪರ್ವತವನ್ನೇ ತನ್ನಲ್ಲಿ ಮುಳುಗಿಸಿಕೊಂಡ ಸಾಗರದಲ್ಲಿ ಬಿರುಗಾಳಿಯು ದೊಡ್ಡದಾದ ತೆರಗಳನ್ನುಂಟು ಮಾಡಬಹುದೇ ಹೊರತು ಸಮುದ್ರದ ಗಾಂಭೀರ್ಯವನ್ನು ತ್ಯಜಿಸುವಂತೆ ಮಾಡಲು ಸಮರ್ಥವೇ???..”
‘ಬಾಲೇ ಪೀಠಂ ಶ್ರಿತವತಿ ಗುರೌ ರಾಮಚಂದ್ರಾಭಿಧಾನೇ
ಕಂಚಿತ್ಕಾಲಂ ಪಿಶುಜನತಾ ಹ್ಯಂತರಾಯಂ ವಿತೇನೇ |
ವಾತ್ಯಾ ನೂನಂ ಜನಯಿತುಮಲಂ ಜಾತು ಕಲ್ಲೋಲಮದ್ಧಾ
 ತದ್ಗಾಂಭೀರ್ಯಂ ತಿರಯತು ಕಥಂ ಮಗ್ನಮೈನಾಕಶೈಲೇ||
    ಪೂಜ್ಯ ಶ್ರೀಗಳು ಪೀಠಕ್ಕೆ ಬಂದ  ಕೆಲಕಾಲದಲ್ಲಿ ಅಧೀನಮಠವೊಂದರ ಸ್ವಾಮಿಗಳು ಕೆಕ್ಕಾರಿನ ರಘೂತ್ತಮ ಮಠವು ತಮಗೆ ಸಲ್ಲತಕ್ಕದ್ದೆಂದು ಹಾಗೂ ತಾವು ಆ ಮಠದ ಹಕ್ಕುದಾರರೆಂದೂ ಹೇಳಿಕೊಂಡು ಮಠವನ್ನು ಆಕ್ರಮಿಸಿದರು. ಆಗ ಆಳುವ ಮಹಾಪ್ರಭುಗಳಾದ ಮುಮ್ಮಡಿಕೃಷ್ಣರಾಜ ಒಡೆಯರ ಹತ್ತಿರ ದೂರು ಹೋಗಿ ಒಡೆಯರು ಶ್ರೀಮಠದ ಎಲ್ಲಾ ವಿಚಾರಗಳನ್ನೂ ಪರಾಮರ್ಶಿಸಿ ಈ ಹಿಂದೆ ನಗರದಲ್ಲಿ ಮಹಾರಾಜರ ಅಪ್ಪಣೆಯಂತೆ ಈ ಬಗ್ಗೆ ಸಭೆ ಸೇರಿದ್ದ ವಿದ್ವಾಂಸರು ತೀರ್ಮಾನಿಸಿದಂತೆ  ಶ್ರೀರಾಮಚಂದ್ರಾಪುರಮಠ ಹಾಗೂ ಕೆಕ್ಕಾರು ಮಠ ಈ ಎರಡೂ ಮಠಗಳಿಗೂ ಶ್ರೀ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳು ಅಧಿಕಾರಿಗಳು. ಕೆಕ್ಕಾರು ಮಠವು ಹೊಸನಗರದ ಶ್ರೀ ರಾಮಚಂದ್ರಾಪುರ ಮಠಕ್ಕೆ ಸಲ್ಲತಕ್ಕದ್ದೇ ಹೊರತು ಅಧೀನ ಮಠಕ್ಕಲ್ಲ. ಆ ಮಠದ ಶ್ರೀಗಳು ವಾಪಸ್ಸು ಹೋಗಬೇಕು ಎಂದು ನ್ಯಾಯನಿರ್ಣಯವನ್ನು ನೀಡಿ ಆ ಮಠದವರು ಒಯ್ದಿದ್ದ ಎಲ್ಲಾ ವಸ್ತುಗಳನ್ನು ಮರಳಿ ಕೊಡಿಸಿ ನಿಶ್ಚಿಂತರಾಗಿ ಮುಕ್ತಿ ಭಾಜನವಾದ ತಪಸ್ಸಾಮ್ರಾಜ್ಯಾನುಸಂಧಾನದಲ್ಲಿ ತೊಡಗಬೇಕೆಂದು ಪ್ರಾರ್ಥಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರೂಪ ಕೊಟ್ಟಿದ್ದನ್ನು ಇತಿಹಾಸವು ಉಲ್ಲೇಖಿಸಿದೆ. ಇವರ ಕಾಲದಲ್ಲಿಯೇ ಕೆಲವು ಶಿಷ್ಯಜನರು ಮಠದ ವಿರುದ್ಧ ಬಂಡಾಯವೆದ್ದು ಗುರುಕಾಣಿಕೆ, ಆಚಾರ ವಿಚಾರ ಮುಂತಾದ ವಿಷಯಗಳಲ್ಲಿ ಪ್ರಾಕ್ ಪದ್ಧತಿಯನ್ನು ಮೀರಲು ಯತ್ನಿಸಿದಾಗ ಮೈಸೂರಿನ ಅರಸರಾದ ಶ್ರೀ ಕೃಷ್ಣ ರಾಜ ಒಡೆಯರವರೇ ಶ್ರೀಮಠಕ್ಕೆ ಸಂಬಂಧಿಸಿದ ತಾಲ್ಲೂಕುಗಳ ಕಿಲೇದಾರರಿಗೆ ನಿರೂಪವನ್ನು ಕಳಿಸಿ ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ ಶಿಷ್ಯವರ್ಗದಲ್ಲಿ ಗುರುಕಾಣಿಕೆ ಆಚಾರ ವಿಚಾರಗಳಲ್ಲಿ ಕೆಲವು ಜನರು ಪೂರ್ವ ಮರ್ಯಾದೆಗೆ ನೆಡೆದುಕೊಳ್ಳದೇ ಇದ್ದುದು ತಿಳಿದುಬಂದಿದ್ದು ಇನ್ನು ಮುಂದೆ ಇಂತಹ ರಗಳೆಗಳನ್ನು ಮಾಡದೇ ಪೂರ್ವಮರ್ಯಾದೆಯಂತೆ ಈ ಮಠಕ್ಕೆ ನಡೆದುಕೊಳ್ಳುವ ರೀತಿಯಲ್ಲಿ ತಾಕೀತು ಮಾಡಿಸಿ ಇಂತಹವರ ಮೇಲೆ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳುವಂತೆ ೧೬ ನವೆಂಬರ್ ೧೮೧೪ರಂದು ಆಜ್ಞೆಯನ್ನು ಹೊರಡಿಸಿದ್ದರು.
ಪೂಜ್ಯ ಶ್ರೀಗಳವರು ಪೂರ್ವಾಚಾರ್ಯ ಸಮ್ಮತವಾದ ರೀತಿಯಲ್ಲಿಯೇ ಶಿಷ್ಯಾನುಗ್ರಹ ನಿಮಿತ್ತ ಒಮ್ಮೆ ೧೮೨೭ರ ವ್ಯಯ ಸಂವತ್ಸರದ ಪುಷ್ಯ ಬಹುಳ ೭ ಶನಿವಾರದಂದು ತಮ್ಮೆಲ್ಲ ಬಿರುದು ಬಾವಲಿಗಳೊಡನೆ ಸಂಚಾರ ಹೊರಟಾಗ  ‘ಕಳಸ’ದ ಸಮೀಪ ಶೇಷ ಜೋಯ್ಸ್ ಎಂಬ ವ್ಯಕ್ತಿಯು ಸುಮಾರು ೩೦೦ಮಂದಿ ಆಯುಧಪಾಣಿ ಜನರೊಂದಿಗೆ ಬಂದು ಅಡ್ಡಗಟ್ಟಿ ಆನೆ, ಕುದುರೆ ಮೊದಲಾದ ಎಲ್ಲಾ ರಾಜಲಾಂಛನಗಳನ್ನೂ ಅಪಹರಿಸಿದ. ಆಗ ಸಾಗರ, ಚಂದ್ರಗುತ್ತಿ, ಅನಂತಪುರ, ಸೊರಬ, ನಗರ ಪ್ರಾಂತಗಳ ಶಿಷ್ಯಮಂಡಲಿಯ ಕೋರಿಕೆಯಂತೆ ಮುಮ್ಮಡಿ ಕೃಷ್ಣರಾಜ ಒಡೆಯರೇ ಭಕ್ಷಿ ರಾಮರಾಯರಿಗೆ ತತ್ಕ್ಷಣ ಅಪಹೃತವಾದ ಎಲ್ಲಾ ಶ್ರೀಮಠದ ಸ್ವತ್ತುಗಳನ್ನು ವಾಪಸ್ಸು ಕೊಡಿಸುವಂತೆ ಆಜ್ಞೆ ಮಾಡಿ ಅವನ್ನೆಲ್ಲಾ ವಾಪಸ್ಸು ಕೊಡಿಸಿ ಸುಯೋಗ್ಯ ಮರ್ಯಾದೆಯಿಂದ ಕಳಿಸಿಕೊಟ್ಟರು. ಪೂಜ್ಯ ಶ್ರೀ ಶ್ರೀಮದ್ರಾಮಚಂದ್ರ ಭಾರತೀ ಮಹಾಸ್ವಾಮಿಗಳು ಪೀಠಾರೂಢರಾದ ದಿನದಿಂದಲೂ  ಇಂತಹ ನಾನಾ ತರಹದ ತೊಂದರೆಗಳನ್ನು ಸಹಿ‌ಸುತ್ತಾ ಶ್ರೀಮಠದ ಸ್ಥಾನಮಾನಗಳನ್ನು ರಕ್ಷಣೆ ಮಾಡಿಕೊಳ್ಳುವುದರಲ್ಲಿಯೇ ಪೂಜ್ಯರ ಹೆಚ್ಚಿನ ಸಮಯವು ವ್ಯಯವಾಗಿ ಹೋಗಿತ್ತು ಎಂಬುದು ಅಪ್ರಿಯವಾದರೂ ಸತ್ಯ. ತಮ್ಮ ಜೀವನವನ್ನು ಅರಿವಿನ ಹರಿಯುವಿಕೆಗೆ ಕೊಟ್ಟಿದ್ದಲ್ಲದೇ ಅದರ ಸೆಲೆ ನೆಲೆಯಾಗಿದ್ದ ಮಠವೆಂಬ ವ್ಯವಸ್ಥೆಯ ಶ್ರೇಷ್ಠ ಅವಿಚ್ಛಿನ್ನ ಗುರುಪರಂಪರೆಯನ್ನು ಬೆಳೆಸಿದ ಆಗರಕ್ಕೂ ಮುಡಿಪಾಗಿಟ್ಟರು. ಕಾಲಾಂತ್ಯದಲ್ಲಿ ಸಕಲ ಲಕ್ಷಣ ಸಂಪನ್ನ ಉತ್ತರಾಧಿಕಾರಿಯಾಗಿ ಯೋಗ್ಯತೆ ಹೊಂದಿದ ೧೫ವರ್ಷದ ವಟುವೋರ್ವರಿಗೆ ಯೋಗಪಟ್ಟವನ್ನಿತ್ತು ಶ್ರೀ ಪೀಠದಲ್ಲಿ ಅತ್ಯಂತ ನವೀನವಾದ ಶ್ರೀ ಶ್ರೀಮದ್ರಾಘವೇಂದ್ರ ಭಾರತೀ ಎಂಬ ಲೋಕಮಂಗಳ ನಾಮವನ್ನಿತ್ತು ಅರಿವಿನ ಹರಿಯುವಿಕೆಯ ಈ ಪಾತ್ರವನ್ನು ಮುಕ್ತಗೊಳಿಸಿ ಅರಿವಿನಲ್ಲೇ ಒಂದಾದರು.

Author Details


Srimukha

Leave a Reply

Your email address will not be published. Required fields are marked *