ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೫

ಅರಿವು-ಹರಿವು
ಅರಿವು ಆಚಾರ್ಯ ಶಂಕರರ ರೂಪದಿಂದ ಭುವಿಗೆ ಬೆಳಕಾಗಿ ಬಂದು ಗುರುಪರಂಪರೆಯನ್ನು ಉದ್ಧರಿಸಿತೆನ್ನುತ್ತಾ ಪಾತ್ರದ ಪೂರ್ವಾಶ್ರಮ ಘಟನೆಗಳನ್ನು ಅವಲೋಕಿಸಿದೆವು. ಈಗ ಬಹುಜನಚರ್ಚಿತ  ಲೋಕಕಲ್ಯಾಣಿ ಈ ಪಾತ್ರವನ್ನು ಮತ್ತದರ ಶ್ರೇಷ್ಠ ಸಮರ್ಥನೀಯ ನಡೆಯನ್ನು ಈ ಸಂಚಿಕೆಯಲ್ಲಿ ನೋಡೋಣ.
ಸಂಕಲ್ಪ ಮಾತ್ರದಿಂದ ಸಂನ್ಯಸ್ತನಾದ ಬಾಲ ವಟು ಶಂಕರನು ಆತ್ಮಸಾಧನೆಗೆ ಈ “ಶಾಖಾಯ ಲವಣಾಯ ಚ” ವೃತ್ತಿಗಳು ಯೋಗ್ಯವಾಗಲಾರದೆಂದು ನಿರ್ಧರಿಸಿದ್ದಾದ್ದರಿಂದ ತದುತ್ತರದ ಆಶ್ರಮಗಳಿಗೆ ಪ್ರವೇಶಿಸದೆ ಮಹೌನ್ನತ್ಯಕ್ಕಾಗಿ ಜನ್ಮಜಾಗವನ್ನು ತೊರೆದು ನಡೆಯಲು ಮನಸ್ಸು ಮಾಡಿದನು. ಹೌದು, ದಿವಿ ಸೂರ್ಯ ಸಹಸ್ರ ಸಮವಾದ ಆ ಬೆಳಕು, ಮಹಾನ್ ಚೇತನ ಲೋಕಕ್ಕೆ ಪ್ರಕಾಶವಾಗಬೇಕಾದರೆ ತಳದಲ್ಲಿರದೆ ಮೇಲ್ಸ್ಥಾನಲ್ಲಿರಬೇಕಾದದ್ದು ಸಹಜವೇ ಅಲ್ಲವೇ? ಅದಕ್ಕೇ ಎಂಬಂತೆ ಉತ್ತರ ಉತ್ತರದೆಡೆಗೆ ಧಾವಿಸಲು ಮುಂದಾದರು. ಅರಿವು ಶುದ್ಧಪ್ರಕೃತಿಯೊಡನೆ ಸಮ್ಮಿಲನಗೊಂಡು ರೂಪವಾಗಿದ್ದ ಶಂಕರರಿಗೆ ಆತ್ಮಸಾಧನೆ ಮಾಡಲು ಏನೂ ಉಳಿದಿಲ್ಲದಾದರೂ ಲೋಕಬೆಳಗುವ ಹೊಣೆಗಾರಿಕೆಗೇ ಜನ್ಮವಾದ್ದರಿಂದ ಈ ಎಲ್ಲ ಔಪಚಾರಿಕ ವಿಧಿನಿಯಮಘಟನಾವಳಿಗಳಲ್ಲಿ ಪಾಲ್ಗೊಳ್ಳಬೇಕಾಯಿತೆಂದು ಮನಗೊಂಡು ಅವರು ನಮಗಿತ್ತ ಕೊಡುಗೆಗೆ ಚಿರಋಣಿಯಾಗಿರಬೇಕು ಎನ್ನುತ್ತಾ… ಬ್ರಹ್ಮಚಾರಿ ಶಂಕರನು ಸ್ವಗೃಹವನ್ನು ತೊರೆಯುವ ಆ ಸಂದರ್ಭವನ್ನು ನೋಡೋಣ.
ಬಹುಇಚ್ಛೆಯಿಂದ ಸಂನ್ಯಾಸ ಸಂಕಲ್ಪಿಯಾದ ನಾನು ತೊರೆದು ಹೋಗಲೇಬೇಕಮ್ಮ, ದಯವಿಟ್ಟು ಅಪ್ಪಣೆ ಕೊಡು ಎಂದು ತಾಯಿ ಆರ್ಯಾಂಬೆಗೆ ಅವಳಿಗಿದ್ದ ಏಕೈಕ ಸುಪುತ್ರ, ಅವಳ ಕಣ್ಮಣಿ, ಕುಲೋದ್ಧಾರಕ, ಅವಳ ಭವಿಷ್ಯದ ಏಕೈಕ ಆಸೆ-ಆಸರೆಯಾದ ಬಾಲ ಶಂಕರನು ಇಂತು ಕೇಳಿದನು. ಸಹಜವಾಗಿ ತಾಯಿಯ ಕರುಳಲ್ಲವೇ.. ಅದು ಮಗನ ಮಮತೆಯನ್ನು ಸುಲಭವಾಗಿ ತ್ಯಜಿಸಬಲ್ಲದೇ? ಅಂತೆಯೇ ಮಹಾಸಾಧ್ವಿಯಾದ, ಸಹೃದಯಿಯಾದ ಆ ತಾಯಿಯು ಹಿಂದೆ ಮೊಸಳೆಯ ಬಾಯಿಯಲ್ಲಿ ಮಗ ಶಂಕರ ಸಿಕ್ಕಿಕೊಂಡ ಸನ್ನಿವೇಶವನ್ನು ನೆನೆದು ಆಗ ಆ ಸಂದರ್ಭದಲ್ಲಿ ಮೊಸಳೆಯ ಬಾಯಿಯಿಂದ ಉಳಿದರೆ ಸಾಕೆಂದು ಸಂನ್ಯಾಸಕ್ಕೆ ಅನುಮತಿಯಿತ್ತೆ. ಆದರೆ ಈಗ ನೀನು ಹೀಗೆ ನನ್ನನ್ನು ತೊರೆದು ಹೋಗಲು ಅನುಮತಿ ಕೇಳಿದರೆ ನಾನು ಅದಕ್ಕೆ ಹೇಗೆ ಒಪ್ಪಲಿ ಎಂದು ದೈನ್ಯತೋರಿದಳು. ಅಲ್ಲದೇ ನಾನು ಸತ್ತಾಗಲೂ ನೀನು ಬಂದು ನನಗೆ ಸಂಸ್ಕಾರವನ್ನು ಮಾಡುವುದಿಲ್ಲವಾದರೆ ನಿನ್ನನ್ನು ಹಡೆದ ಸಾರ್ಥಕತೆಯ ಫಲವೆಲ್ಲಿ  ಹೇಳೆಂದು ಕೊರಗಿದಳು. ಅದಕ್ಕೆ ಬಹುಪ್ರೀತಿಯ ತನ್ನ ತಾಯಿಯನ್ನು ಶಂಕರನು ಸಂತೈಸುತ್ತಾ ಪಿತ್ರಾರ್ಜಿತ ಸಂಪತ್ತು ಸ್ವಲ್ಪ ಇದ್ದದ್ದಾದ್ದರಿಂದ ನಿನ್ನ ದೇಹವಿರುವವರೆಗೂ ಬಂಧುಜನರು ನಿನ್ನನ್ನು ನೋಡಿಕೊಳ್ಳುತ್ತಾರೆ. ನಿನ್ನ ಅಪರ ಸಂಸ್ಕಾರಕ್ಕಾಗಿ ನಾನೆಲ್ಲೇ ಇದ್ದರೂ ಬರುವೆನು ಮತ್ತು  “ಅಮ್ಮಾ ಹಗಲಲ್ಲೇ ಆಗಲಿ, ರಾತ್ರಿಯಲ್ಲೇ ಆಗಲಿ ನೀನು ಸ್ವವಶಳಾಗಿ ಅಥವಾ ರೋಗಗಳಿಂದ ಪರವಶಳಾಗಿ ನನ್ನನ್ನು ಸ್ಮರಿಸುವೆಯೋ ಆಗ ನಾನು ಬಳಿಬರುವೆನು. ಅನಾಥೆಯಾದ ನನ್ನನ್ನು ಬಿಟ್ಟು ಈ ಹುಡುಗನು ಸಂನ್ಯಾಸ ಮಾಡಿದನಲ್ಲ ಎಂದು ಚಿಂತಿಸಬೇಡ” ಎಂದು ಸಮಾಧಾನಗೊಳಿಸಿ ಬಂಧು
ಜನರಿಗೆ ತಿಳಿಸಿ, ತಾಯಿಯನ್ನು ಅವರ ವಶಕ್ಕೊಪ್ಪಿಸಿ ಸ್ವಗ್ರಾಮವನ್ನು ತೊರೆದನು. ಮಹಾತ್ಮರ ನಡೆಯು ಲೋಕಕ್ಕೆಲ್ಲಾ ಪಾಠವದು. ಸಂನ್ಯಾಸಕ್ಕೆ ಹೋಗುವುದಾದರೂ ತಾಯಿಯ ಅಪ್ಪಣೆ ಬೇಕೆನ್ನುವುದಾದರೆ ಮಾತೃಸ್ಥಾನದ ಮಹತಿ ಎಷ್ಟೆಂಬುದನ್ನು ಆಚಾರ್ಯ ಶಂಕರರು ನಿರೂಪಿಸಿದ್ದುದು ನಮಗೆಲ್ಲಾ ಅನುಸರಣೀಯ.
ಸ್ವಗ್ರಾಮವನ್ನು ತೊರೆದ ಬಾಲಕ ಶಂಕರನು ಮುಂದೆ ಮುಂದೆ ಸಾಗುತ್ತಾ ದುರ್ಗಮವಾದ ದಾರಿಯನ್ನು ಕ್ರಮಿಸಿ ನರ್ಮದಾ ತೀರದ ಗುಹೆಯೊಂದರ ಬಳಿ ಬಂದು ನಿಂತನು ಎಂಬಲ್ಲಿಗೆ ಈ ಸಂಚಿಕೆಯ ಪೂರ್ಣವಿರಾಮ.

Leave a Reply

Your email address will not be published. Required fields are marked *