ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೨

ಅರಿವು-ಹರಿವು
ಅರಿವು ಗುರುಪರಂಪರಾನುಗತವಾಗಿ   ಹರಿದು ಬಂದಿದ್ದೆನಿತು ಎಂದು ಅವಲೋಕಿಸುತ್ತಾ ಹೋದರೆ ಈ ಪ್ರಶ್ನೆಗಳೆಲ್ಲಾ ಮನಸ್ಸಿನಲ್ಲಿ ಮೂಡುತ್ತದೆ..ಅರಿವೇಕೆ ಅವಿಚ್ಛಿನ್ನ ಗುರುಪರಂಪರೆಯಲ್ಲಿಯೇ ಹರಿದು ಬರಬೇಕು..? ಅದರ ಔಚಿತ್ಯವಾದರೂ ಏನು..? ಸ್ವಯಂ ಸಾಧನೆಯಿಂದ ಕಂಡುಕೊಳ್ಳಬಹುದಲ್ಲವೇ ಎಂದೆಲ್ಲ ಅನಿಸಿದರೆ…ಅದಕ್ಕೆ ಪ್ರತ್ಯುತ್ತರವಿಷ್ಟೆ..ಗುರು ಮಾಡಿಸುವ ಅರಿವಿನ ದರ್ಶನ ಸುಲಿದಿಟ್ಟ ಬಾಳೆಹಣ್ಣಿನಂತೆ. ರಾಮಕೃಷ್ಣ ಪರಮಹಂಸರೇ ಹೇಳುವಂತೆ ಜ್ಞಾನಿ ತರಗೆಲೆಯಂತೆ ಅವನು ತಾನೊಬ್ಬ ತೇಲಿಕೊಂಡು ದಾಟಬಲ್ಲ. ಆದರೆ ಇನ್ನೊಬ್ಬರನ್ನು ಹೊತ್ತೊಯ್ಯಲಾರ. ಅದೇ ಗುರುವೊಬ್ಬ ನೌಕೆಯಂತೆ. ಶರಣಾಗತರಾದ ಶಿಷ್ಯರನ್ನು ತನ್ನ ಮೇಲೆ ಹೊತ್ತೊಯ್ಯಬಲ್ಲ. ಪಂಡಿತನನ್ನು, ಪಾಮರನನ್ನು ಒಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಪೂರ್ಣದೆಡೆಗೆ ನಡೆಯಲು ಪ್ರೇರೇಪಿಸುವ ಶಕ್ತಿ ಅವನಲ್ಲಿರುತ್ತದೆ ;
ಸೃಷ್ಟಿಕರ್ತನಾದ ಬ್ರಹ್ಮನಿಂದಲೇ ಹಯಗ್ರೀವನೆಂಬ ರಾಕ್ಷಸನಿಂದ ವೇದಗಳು ಕದಿಯಲ್ಪಟ್ಟರೂ ಸುದೈವವಶಾತ್ ವೇದವು ಉಳಿಯಿತು. ಸೃಷ್ಟಿಯ ಅಳಿವಿನ ಕಾಲದಲ್ಲಿ ಸೃಷ್ಟಿಯ ಒಡೆಯನಾದ ಬ್ರಹ್ಮನಿಗೇ ಅರಿವು ನಾಶವಾಗಿ ಹೋಗಿತ್ತಂತೆ. ಆಗ ನಾರಾಯಣನ ನಾಭಿಕಮಲದಿಂದ ಮತ್ತೆ ಬ್ರಹ್ಮನು ಹುಟ್ಟಿಬಂದನಂತೆ. ಆಗ ಸ್ಥಿತಿಕರ್ತನಾದ ಶ್ರೀಮನ್ನಾರಾಯಣನು ಬ್ರಹ್ಮನಿಗೆ ವೇದಗಳ ಉಪದೇಶವ ಗೈದಾಗ ಮತ್ತೆ ಬ್ರಹ್ಮನಿಗೆ ತನ್ನ ಪುನಃಸ್ಮರಣೆಯಾಗಿ ಅರಿವುಂಟಾಯಿತು. ಹೀಗೆ ಅವಿಚ್ಛಿನ್ನ ಜ್ಞಾನಪರಂಪರೆಯು ಮೊದಲಾಯಿತು. ಹೀಗೆ ಆದಿಯಲ್ಲಿ ಜ್ಞಾನಸ್ವರೂಪಿಯಾದ ಬ್ರಹ್ಮನಿಗೂ ಸಹ ಮರೆವು ಉಂಟಾಗಿ ಅರಿವು ನಾಶವಾಗಿ ಸೃಷ್ಟಿಯೇ ತಲ್ಲಣಿಸುವಂತಾಯಿತು. ಹೀಗೆ ಅರಿವಿನ ಮರೆವು ಉಂಟಾದಾಗ ಸೃಷ್ಟಿಕರ್ತನಾದ ಬ್ರಹ್ಮನಂಥಾ ಬ್ರಹ್ಮನಿಗೂ ಗುರುವೊಬ್ಬ ಬೇಕಾಯಿತೆಂದರೆ ನಮ್ಮಂತಹ ಪಾಮರರಿಗೆ ಗುರುವಿನ ಅಗತ್ಯತೆ ಅರಿವಿಗಾಗಿ ಏನೆಂದು ಅರಿವಾಗುತ್ತದೆ. ಅರಿವೆಂದರೆ ಆನಂದ. ಅದು ಶಬ್ಧಗಳಲ್ಲಿ ವರ್ಣಿಸಲಸಾಧ್ಯವಾದದ್ದು. ಆ ಪರಮಾನಂದ ಸ್ಥಿತಿಗೆ ತಲುಪಬೇಕಾದರೆ ಮೂಲದ ಸ್ಮರಣೆಯಾಗಬೇಕು. ಇದರ ಸ್ಮರಣೆ ಉಂಟಾಗಲು ಸೃಷ್ಟಿಯ ಜ್ಞಾನ ಬೇಕು. ಈ ಸೃಷ್ಟಿಯ ಜ್ಞಾನಕ್ಕೆ ಆದಿಮೂಲನಾದ ನಾರಾಯಣನಿಂದ ಯಾವ ಜ್ಞಾನ ಹರಿದು ಬ್ರಹ್ಮನಿಗೆ ಉಪದೇಶವಾಯಿತೋ ಅದೇ ಮತ್ತೆ ಉಪದೇಶವಾದರಷ್ಟೇ ಆ ಸಹಜ ಸ್ಥಿತಿಗೆ ತಲುಪಿ ಜೀವಿಯು ಪರಮಾನಂದವನ್ನನುಭವಿಸಲು ಸಾಧ್ಯ. ಆದ್ದರಿಂದ ಅವಿಚ್ಛಿನ್ನ ಜ್ಞಾನಪರಂಪರೆ ಮಾತ್ರವೇ ಹೀಗೆಯೇ ಗುರುವಿನಿಂದ ಗುರುವಿಗೆ ಹರಿದು ಇಡೀ ಸಮಾಜವನ್ನು ಇಹದಲ್ಲಿ ಸರಿಮಾರ್ಗದಲ್ಲಿ ನಡೆಸಿ ಉತ್ತಮವಾದ ಪರಕ್ಕೆ ಕರೆದೊಯ್ಯಲು ಸಾಧ್ಯವಾಗಿಸುತ್ತದೆ.

Author Details


Srimukha

Leave a Reply

Your email address will not be published. Required fields are marked *