ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೯

ಅರಿವು-ಹರಿವು
ಸುರೇಶ್ವರಾಚಾರ್ಯರು  ಎಂಬ ಅಭಿಧಾನದಿಂದ ಸಂನ್ಯಸ್ತರಾದ ಮಂಡನಮಿಶ್ರರು ಗುರುಗಳೊಂದಿಗೆ ಹೊರಡುತ್ತಿದ್ದಂತೆಯೇ…  ಉಭಯ ಭಾರತೀ ದೇವಿಯೂ ತನ್ನ ಕರ್ತವ್ಯಗಳನ್ನು ಮುಗಿಸಲೆಳಸಿದಳು..  ಉಭಯ ಭಾರತೀ ದೇವಿಯೇನೂ ಸಾಮಾನ್ಯಳಲ್ಲ..  ಪ್ರಕಾಂಡ ಕರ್ಮವಾದಿಗಳೆಂದೇ ಖ್ಯಾತರಾದ.. ಮಂಡನಮಿಶ್ರರ ಗುರುಗಳೂ ಆದ  ಕುಮಾರಿಲ ಭಟ್ಟರ ತಂಗಿ… ಸಾಂಗವಾಗಿ ವೇದ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದ್ದವಳು.. ತನ್ನ ಪತಿಯೊಂದಿಗೆ ಸರಿಸಮನಾಗಿ  ಗುರುಕುಲದ ಜವಾಬ್ದಾರಿಯನ್ನು ಹೊತ್ತಿದ್ದವಳು, ಈಗ ಪತಿಯು ವಿರಾಗಿಯಾಗಿ ಹೊರಟ ಕೂಡಲೇ, ಪತಿಯ ಹಿರಿಯ ಶಿಷ್ಯರ ಕೈಗೆ ಗುರುಕುಲದ ಜವಾಬ್ದಾರಿ ಒಪ್ಪಿಸಿ ..  ವೈರಾಗ್ಯದ ನೇರದಲ್ಲಿ ಮನೆಬಿಟ್ಟು ನಡೆದರು,  ಹೀಗೆ ಕರ್ಮ ಸಿದ್ಧಾಂತವು ಜ್ಞಾನಪಥ ದಲ್ಲಿ ಪರ್ಯವಸಾನವಾಯಿತು.
ಅರಿವಿನ ಪ್ರಸಾರಕ್ಕಾಗಿಯೇ ಅವತರಿಸಿದ ಆಚಾರ್ಯ ಶಂಕರರು ಉತ್ತರದಿಂದ ದಕ್ಷಿಣದೆಡೆಗೆ ದಿಗ್ವಿಜಯಕ್ಕೆ ಬಂದರು. ಎಲ್ಲೆಲ್ಲೂ ಅದ್ವೈತ ಪ್ರಸಾರ ಮಾಡಿದರು. ಶ್ರೀಶೈಲ ದಾಟಿ ಗೋಕರ್ಣ, ಕೊಲ್ಲೂರು ಮೂಕಾಂಬಿಕಾ ಸ್ಥಾನ, ಶೃಂಗೇರಿ ಹೀಗೆ ಎಲ್ಲೆಡೆ ಭೇಟಿ ನೀಡಿದರು. ಪ್ರವಾಸ ಮಾಡುತ್ತಾ ಶ್ರೀಬಲಿ ಎಂಬ ಅಗ್ರಹಾರಕ್ಕೆ ಬಂದರು. ಅಲ್ಲಿ ಎರಡು ಸಾವಿರ ಅಗ್ನಿಹೋತ್ರಿಗಳಿದ್ದರಂತೆ. ಅವರಲ್ಲಿ ಪ್ರಭಾಕರನೆಂಬ ಬ್ರಾಹ್ಮಣನು ಅಪಾರ ಶಿಷ್ಯ ಸಮೂಹವನ್ನು ಹೊಂದಿ, ವೇದ ಗುರುಕುಲವನ್ನು ನಡೆಸುತ್ತಿದ್ದನು. ಅವನಿಗೆ ಒಬ್ಬ ಮಗ,  ಐಹಿಕ ಸಂಪತ್ತೆಲ್ಲವೂ ಇದ್ದರೂ ತನಗಿದ್ದ ಒಬ್ಬನೇ ಮಗನು ಹುಟ್ಟಿದಂದಿನಿಂದಲೇ ಮೂಕನಾಗಿದ್ದರಿಂದ ಆ ಬ್ರಾಹ್ಮಣನು ಶೋಕಾಕ್ರಾಂತನಾಗಿದ್ದನು. ಶಂಕರಾಚಾರ್ಯರು ಅಲ್ಲಿಗೆ ಬಂದದ್ದು ತಿಳಿದಾಗ ಮಹಾತ್ಮರ ದರ್ಶನದಿಂದಲಾದರೂ ಅವನು ಗುಣವಾಗಲೆಂದು ಭಾವಿಸಿ, ತಮ್ಮ ಮಗನನ್ನು ಶಂಕರರ ಬಳಿಗೆ ಕರೆದುಕೊಂಡು ಹೋಗಿ ದೈನ್ಯತೆಯಿಂದ ನಮಸ್ಕರಿಸಿದನು. ಶಂಕರರು ತಮ್ಮ ಕಾಲಿಗೆರಗಿದ ಅವರನ್ನು ಮೇಲೆಬ್ಬಿಸಿ, ದಯಾ ಪೂರ್ಣರಾಗಿ  ವೀಕ್ಷಿಸಿದರು. ತಂದೆಯು ತನ್ನ  ಮಗನ ಸ್ಥಿತಿಯನ್ನು ವಿವರಿಸಿ ಹೇಳಿದನು. ಆಚಾರ್ಯ ಶಂಕರರು  ಆತನ ಕುರಿತಾಗಿ ನೀನು ಯಾರಪ್ಪಾ? ಏಕೆ ಜಡನಂತೆ ಆಚರಿಸುತ್ತಿದ್ದೀಯೆ ಎಂದು ಕೇಳಲು ಗುರುವೇ “ನಾನು ಜಡನಲ್ಲ ನನ್ನ ಸನ್ನಿಧಿಯಲ್ಲಿ ಜಡವು ತನ್ನ ವ್ಯಾಪಾರವನ್ನು ಮಾಡುತ್ತಿರುವುದು. ಅರಿಷಡ್ವರ್ಗಗಳೂ ಇಲ್ಲದ ಆನಂದಸ್ವರೂಪವಾದ ಪರತತ್ವವೇ ನಾನು” ಎಂದು ಆತ್ಮತತ್ವದ ಸ್ವರೂಪವನ್ನು ವಿವರಿಸಿದನು. “ಯಾವ ಉಪಾಧಿಯೂ ಇಲ್ಲದ ಆಕಾಶಕಲ್ಪನಾಗಿರುವ ಯಾವನು – ಸೂರ್ಯನು ಜನರ ವ್ಯವಹಾರಕ್ಕೆ ನಿಮಿತ್ತನಾಗಿರುವಂತೆ ಮನಸ್ಸು ಚಕ್ಷುಷಾದಿಗಳ ಪ್ರವೃತ್ತಿಗೆ ನಿಮಿತ್ತನಾಗಿರುವನೋ ಆ ನಿತ್ಯ ಚೈತನ್ಯ ಸ್ವರೂಪನಾದ ಆತ್ಮನೇ ನಾನು( ಸ ನಿತ್ಯೋಪಲಬ್ಧಿ ಸ್ವರೂಪೋsಹಮಾತ್ಮಾ)” ಎಂದೆಲ್ಲಾ ಪರಮಾತ್ಮ ತತ್ವವನ್ನು  ಸರಳವಾಗಿ ಹೇಳಿದನು. ಇದನ್ನು ಕೇಳಿದ ಬಳಿಕ ಶಂಕರರು ಈ ಬಾಲಕನಿಗೆ ಸಹಜ ವೈರಾಗ್ಯ ಲಭಿಸಿದ್ದು,  ತನ್ನಾತ್ಮದಲ್ಲಿ ನೆಲೆಯುಳ್ಳವನಾದ ಈತನು ಜಡನಂತೆ ಇರುತ್ತಾನೆ. ಇವನಿಂದ ಸಾಂಸಾರಿಕವಾಗಿ ನಿಮಗ್ಯಾವ ಲಾಭವೂ ಇಲ್ಲ, ಇವನನ್ನು ನಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ನಮ್ಮೊಡನೆಯೇ ಇರಿಸಿಕೊಳ್ಳುವುದಾಗಿ ಹೇಳಿ ಅವನ ತಂದೆಯನ್ನು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದರು. ಇಂತಹ ಪರಮಾತ್ಮ ತತ್ವವನ್ನು ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಅರಿತ ಈ ಯೋಗಿಶ್ರೇಷ್ಠನಿಗೆ ಹಸ್ತಾಮಲಕ ಎಂಬ ಹೆಸರೇ ಬಿರುದುಗೊಂಡು ಪ್ರಸಿದ್ಧವಾಯಿತು. ಶಂಕರಾಚಾರ್ಯರ ಶಿಷ್ಯಶ್ರೇಷ್ಠರಲ್ಲಿ ಒಬ್ಬರಾಗಿಯೂ ಅರಿವಿನ ಪ್ರಸಾರದ ಚುಕ್ಕಾಣಿ ಹಿಡಿದ ನಾವಿಕನಾಗಿಯೂ ಶಂಕರರ ಜೊತೆ ದೇಶದ ಉದ್ದಗಲದಲ್ಲೂ ಸಂಚರಿಸಿ ಅದ್ವೈತ ಜ್ಞಾನಾಂಜನ ಲೇಪದಿಂದ  ಅಜ್ಞಾನದ ಕತ್ತಲೆಯನ್ನು ದೂರಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.
                ಅರಿವಿನ ಪ್ರಸಾರಕ್ಕಾಗಿ ಪೂರ್ವದಿಕ್ಕಿನಲ್ಲಿ  ಗೋವರ್ಧನ ಪೀಠವನ್ನು ಸ್ಥಾಪಿಸಿ ಹಸ್ತಾಮಲಕಾಚಾರ್ಯರನ್ನು  ಅಲ್ಲಿರುವಂತೆ ತಿಳಿಸಿದರು. ಶ್ರೀ ಹಸ್ತಾಮಲಕರು “ಪ್ರಜ್ಞಾನಂ ಬ್ರಹ್ಮ” ಎಂಬ ಮಹಾವಾಕ್ಯದ ಧ್ಯೇಯವನ್ನು ಹೊತ್ತು ಅನುಸರಿಸಿ ಬೋಧಿಸಿ ಶಂಕರರ ಇಚ್ಛೆಯನ್ನು ಕಾರ್ಯರೂಪಕ್ಕೆ ತಂದರು ಎಂಬಲ್ಲಿಗೆ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *