ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೪

ಅರಿವು-ಹರಿವು
ಅವಿಚ್ಛಿನ್ನ ಗುರುಪರಂಪರೆಯ ಅರಿವಿನ  ಹರಿವಿನಲ್ಲಿ ಬರುವ ಮುಂದಿನ ಪಾತ್ರ ಬ್ರಹ್ಮರ್ಷಿ ಶಕ್ತಿ. ಹೋಲಿಕೆಯೇ ಇಲ್ಲದ ಎರಡು ವ್ಯಕ್ತಿತ್ವಗಳಾದ ವಸಿಷ್ಠ ಅರುಂಧತಿಯರ ಧರ್ಮದಾಂಪತ್ಯದ ಫಲ ಇವರು. ಹೆಸರೇ ಸೂಚಿಸುವಂತೆ ಬ್ರಹ್ಮರ್ಷಿ ಶಕ್ತಿಗಳ ಜ್ಞಾನ ಚಕ್ಷುವಿನ ಶಕ್ತಿ ಅಗಾಧ. ತಂದೆಯೊಡನೆ ಯಜ್ಞ, ಯಾಗ, ವಿದ್ಯಾದಾನ ಒಟ್ಟಿನಲ್ಲಿ ಬ್ರಹ್ಮಚರ್ಯೆ ಚಾಚೂ ತಪ್ಪದೇ ಸಾಗುತ್ತಿದ್ದರೂ ವಿಧಿನಿಯಾಮಕವಾದ ಭೂಲೋಕ ಇವರ ಬದುಕಿನಲ್ಲೂ ಚಿತ್ರ ವಿಚಿತ್ರ ಘಟನೆಗಳಿಗೆ ಇವರನ್ನು ಪಾತ್ರಧಾರಿಯನ್ನಾಗಿ ಮಾಡಿತು.
ಅದೊಂದು ಸಂದರ್ಭ; ಇಕ್ಷ್ವಾಕು ವಂಶಸ್ಥನಾದ ಸತ್ಯವ್ರತನೆಂಬ ರಾಜ ಸಶರೀರ ಸ್ವರ್ಗಸ್ಥನಾಗಬೇಕೆಂಬ ಬಯಕೆಯ ಈಡೇರಿಕೆಗೆ ಯಜ್ಞ ಮಾಡಿಸಬೇಕೆಂಬ ಕೋರಿಕೆಯು ವಸಿಷ್ಠರಿಂದ ಆಗಲೇ  ನಿರಾಕರಣೆಗೊಂಡಿದ್ದರೂ ಮತ್ತೂ ಅದೇ ದುಷ್ಕಾಮನೆ ಹೊತ್ತು ಶಕ್ತಿಯಲ್ಲಿ ಬರುತ್ತಾನೆ. ನಿಮ್ಮ ತಂದೆಯವರು ಇದು ಸಾಧ್ಯವಾಗದೆಂದು ನುಡಿದಿದ್ದಾರೆ. ಅವರಿಂದ ಸಾಧ್ಯವಾಗದ್ದನ್ನು ನೀವು ಮಾಡಿಸಿಕೊಡಬೇಕು. ಇದರಿಂದ ನಿಮ್ಮ ತಪೋ ಶಕ್ತಿ ನಿಮ್ಮ ತಂದೆಯವರಿಗಿಂತ ಹೆಚ್ಚೆಂಬುದು ಸಾಬೀತಾಗುತ್ತದೆ. ಅಲ್ಲದೇ ಇಕ್ಷ್ವಾಕು ವಂಶದ ರಾಜಪುರೋಹಿತರನ್ನಾಗಿಯೂ ನಿಮ್ಮನ್ನೇ ನೇಮಿಸಿಕೊಳ್ಳುತ್ತೇನೆ. ಸಶರೀರವಾಗಿ ಸ್ವರ್ಗಸ್ಥನನ್ನಾಗಿಸುವ ಯಜ್ಞಕ್ಕೆ ಅಧ್ವರ್ಯು ನೀವೆ ಎಂದು ಶಕ್ತಿಗಳಲ್ಲಿ ಹೇಳುತ್ತಾನೆ. ತಂದೆ ವಸಿಷ್ಠರಲ್ಲಿ ಅಪಾರ ಗೌರವ, ಶ್ರದ್ಧೆ ಹೊಂದಿದವರಾದ ಶಕ್ತಿಗೆ ತಮ್ಮ ತಂದೆಯವರಲ್ಲಿ ಇವನ ಅವಿಧೇಯತೆ ಮತ್ತು ತಮ್ಮ ಬಳಿಗೇ ಬಂದು ಮಹಾಜ್ಞಾನಿಯಾದ ತಮ್ಮ ತಂದೆಯವರ ವಿರುದ್ಧವೇ ನಡೆಯುವಂತೆ ಆಜ್ಞಾಪಿಸಿದ್ದು ಕೋಪವನ್ನು ತರಿಸುತ್ತದೆ. ಈ ಅಧರ್ಮಕ್ಕಾಗಿ ರಾಜಾ ಸತ್ಯವ್ರತನನ್ನು ಸಾವಿರ ವರ್ಷಗಳ ಕಾಲ ಚಂಡಾಲತ್ವವನ್ನು ಪಡೆ ಎಂದು ಶಪಿಸುತ್ತಾರೆ. ಇವನೇ ಮುಂದೆ ತ್ರಿಶಂಕು ಎಂದು ಕುಖ್ಯಾತನಾಗುತ್ತಾನೆ.
ಇನ್ನೊಂದು ಸಂದರ್ಭವದು; ಬ್ರಹ್ಮರ್ಷಿ ಶಕ್ತಿಗಳು ಕಾಡು ಹಾದಿಯಲ್ಲಿ ನಡೆದುಹೋಗುತ್ತಿರುವಾಗ ಅದೇ ದಾರಿಯಲ್ಲಿ ರಾಜ ಕಲ್ಮಷಪಾದನೂ ಸಹ ರಥವೇರಿ ಬರುತ್ತಿದ್ದನು. ದಾರಿಯಲ್ಲಿ ಇಬ್ಬರೂ ಇದಿರುಬದಿರಾದಾಗ ರಾಜದರ್ಪದಿಂದ ಕಲ್ಮಷಪಾದನು ನೀವು ಪಕ್ಕಸರಿದುಹೋಗಿರೆಂದು ಶಕ್ತಿಗಳಲ್ಲಿ ಆಜ್ಞೆ ಮಾಡಿದನು.  ಧರ್ಮದ ಪ್ರಕಾರ ಸಂತ ಇದಿರಾದಾಗ ರಾಜನಾದರೂ ಸಹ ತಾನು ತಲೆಬಾಗಿ ಪಕ್ಕಕ್ಕೆ ಸರಿದುಹೋಗಬೇಕು. ಆದರೆ ಕಲ್ಮಷಪಾದನು ಹಾಗೆ ಮಾಡಲಿಲ್ಲ. ಈ ಅಧರ್ಮದ ಸಂಬಂಧವಾಗಿ ಬ್ರಹ್ಮರ್ಷಿ ಶಕ್ತಿಯು ರಾಜನನ್ನು ಶಪಿಸುತ್ತಾರೆ. ಈ ಘಟನೆಯು, ವಸಿಷ್ಠರಲ್ಲಿ ನಿಷ್ಠೂರವನ್ನು ಬಯಸಿ ಬ್ರಹ್ಮರ್ಷಿತ್ವ ಸಾಧನೆಯಲ್ಲಿದ್ದ  ಕೌಶಿಕ( ವಿಶ್ವಾಮಿತ್ರ)ರಿಗೆ ತಿಳಿಯುತ್ತದೆ. ಇವರ ಕೈವಾಡದಿಂದ ಕಿಂಕರನೆಂಬ ರಾಕ್ಷಸನು ಈ ರಾಜ ಕಲ್ಮಷಪಾದನ ಶರೀರದೊಳಗನ್ನು ಆವರಿಸಿಕೊಳ್ಳುತ್ತಾನೆ. ರಾಕ್ಷಸಸಹಜ ಪ್ರವೃತ್ತಿಗಳು ಇವನಲ್ಲಿ ಆರಂಭವಾಗುತ್ತದೆ. ಅಲ್ಲಿಗೆ ಬ್ರಹ್ಮರ್ಷಿ ಶಕ್ತಿಯ ಶಾಪ ನೆರವೇರುತ್ತದೆ. ಆದರೆ ಕಲ್ಮಷಪಾದನು ಕ್ರುದ್ಧನಾಗಿ, ನನ್ನನ್ನು ರಾಕ್ಷಸನನ್ನಾಗಿ ಮಾಡಿ ವಿವೇಚನಾ ಶಕ್ತಿಯನ್ನು ಕಸಿದುಕೊಂಡು ಈ ನೀಚ ಪ್ರವೃತ್ತಿಗಳು ಪ್ರವಹಿಸುವಂತೆ ಮಾಡಿದಿರಿ. ಆದ್ದರಿಂದ ರಾಕ್ಷಸವೃತ್ತಿಗನುಗುಣವಾಗಿ ನಿಮ್ಮನ್ನು ನಾನು ನುಂಗಿ ಹಾಕುತ್ತೇನೆಂದು ಹೇಳುತ್ತಾನೆ. ಬ್ರಹ್ಮರ್ಷಿ ಶಕ್ತಿಯು ತಮ್ಮ ಮಾತಿಗನುಸಾರವಾಗಿ ಅಲ್ಲಿಯೇ ನಿಂತಿರುತ್ತಾರೆ. ಆ ರಾಕ್ಷಸರೂಪವು ಬ್ರಹ್ಮರ್ಷಿ ಶಕ್ತಿಗಳನ್ನು ನುಂಗಿಹಾಕುತ್ತದೆ. ಹೀಗೆ ಶಕ್ತಿ ಮುನಿಯ ಜೀವನ ಇಹದಲ್ಲಿ ದುರಂತಗೊಂಡರೂ, ತಮ್ಮ ವರ್ಚಸ್ಸು, ತೇಜಸ್ಸಿನ ಪ್ರತೀಕವಾಗಿ  ಅವರ ಕರುಳಿನ ಕುಡಿ ಅವಿಚ್ಛಿನ್ನ ಗುರುಪರಂಪರೆಯ ಅರಿವಿನ  ಹರಿವಿಗೆ ಕೊಂಡಿಯಾಗಿ ಧರ್ಮಪತ್ನಿ ಅದೃಶ್ಯಂತಿಯ ಗರ್ಭಾಂಬುಧಿಯಿಂದ ಹೊರಬಂದು ಲೋಕವನ್ನು ಬೆಳಗುತ್ತದೆ. ಆ ಪಾತ್ರವನ್ನು ಮುಂದಿನ ಸಂಚಿಕೆಯಲ್ಲಿ ಅವಲೋಕಿಸೋಣ.

Author Details


Srimukha

Leave a Reply

Your email address will not be published. Required fields are marked *