ಅರಿವಿಗಾಗಿಯೇ ಬೆಳೆದ ಗುರುಪರಂಪರೆ ಮಠೀಯ ವ್ಯವಸ್ಥೆಯನ್ನು ಚೆನ್ನಾಗಿ ಪಾಲಿಸಿಕೊಂಡು ಹಾಗೂ ಅಶಾಶ್ವತವಾದ ಈ ಪಾಂಚಭೌತಿಕ ಪ್ರಕೃತಿ ಪಾತ್ರೆಯ ಬದಲಿಕೆಯ ಅನಿವಾರ್ಯದಿಂದಾಗಿ ಇನ್ನೊಂದು ಪಾಂಚಭೌತಿಕ ಶರೀರದಲ್ಲಿ ಪಾತ್ರತ್ವವನ್ನು ನಿರ್ವಹಿಸುತ್ತಾ ಬಂದಿರುವುದನ್ನು ಇಲ್ಲಿಯವರೆಗೂ ಕಾಣುತ್ತಾ ಬಂದೆವು. ಅಂತೆಯೇ ಶ್ರೀ ಶ್ರೀ ನಿತ್ಯಾನಂದ ಭಾರತೀ ಮಹಾಸ್ವಾಮಿಗಳು ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತಿಗಳಿಗೆ ಯೋಗಪಟ್ಟವನ್ನಿತ್ತರು. ಈ ಆರನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ನಿತ್ಯಬೋಧಘನೇಂದ್ರ ಭಾರತೀ ಶ್ರೀಗಳಿಂದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಮೂಲಕ ಪರಂಪರೆ ಮುಂದುವರೆದು ಎಂಟನೆಯವರಾಗಿ ಶ್ರೀ ಶ್ರೀ ಚಿದ್ಘನೇಂದ್ರ ಭಾರತೀ ಮಹಾಸ್ವಾಮಿಗಳಿಂದ ಪೀಠ ಭೂಷಿತಗೊಂಡು ಅರಿವಿನ ಬೆಳಕಿನ ಪರಮಾನಂದ ಸ್ಥಿತಿಗೆ ಲೋಕವೆಲ್ಲವೂ ತುಡಿಯುವಂತಾಗಿ ಸಾಧನೆಗೈಯಲು ಪ್ರೇರೇಪಿಸುವ ಧಾರ್ಮಿಕ ಮಾರ್ಗದರ್ಶಕರಾಗಿ ಆಗಿನ ಕಾಲದ ಹಲವಾರು ಆಳರಸರ ಮೇಲೂ ಪ್ರಭಾವ ಬೀರಿದರು. ಇವರು ರಘುವೀರ ಎಂಬ ಶುಭಾಭಿದಾನದಿಂದ ಯುಕ್ತವಾದ ಶ್ರೀ ಶ್ರೀ ರಘುವೀರೇಂದ್ರ ಭಾರತೀ ಎಂಬ ಹೆಸರಿನಂದಲೇ ಪ್ರಸಿದ್ಧರಾದರು. ನಂತರ ಅವಿಚ್ಛಿನ್ನ ಜ್ಞಾನಪರಂಪರೆಯು ಒಂಭತ್ತನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸೀತಾರಾಮಚಂದ್ರ ಭಾರತೀ ಮಹಾಸ್ವಾಮಿಗಳಿಂದ ಮುಂದುವರೆಯಿತು. ಇವರ ಕಾಲದಲ್ಲಿ ಹಲವು ಮತಗಳ ನೆಲೆವೀಡಾದ ಆಗಿನ ಕರ್ನಾಟಕದ ಹಲವೆಡೆಗಳಲ್ಲಿ ಜೈನ, ಶೈವ ಮೊದಲಾದ ಧರ್ಮಗಳ ಸಮುನ್ನತಿಯು ಇದ್ದರೂ ಆದಿಶಂಕರಾಚಾರ್ಯರ ಅರಿವಿನ ಪೂರ್ಣತೆಯನ್ನು ದೊರಕಿಸಿಕೊಡುವ ಅದ್ವೈತ ಸಿದ್ಧಾಂತವನ್ನೇ ಯಾವ ಅಳುಕಿಲ್ಲದೇ ಸಮಾಜಕ್ಕೆ ಬೋಧಿಸಿ ತಮ್ಮ ಉತ್ತರಾಧಿಕಾರಿಯಾಗಿ ಕೊನೆಗಾಲದಲ್ಲಿ ಮಹತ್ತರವಾಗಿ ಆಯ್ಕೆಗೊಂಡ ಸಮರ್ಥರಾದ ಅರಿವಿನ ಮೂರ್ತಿಗೇ ಪಟ್ಟಕಟ್ಟಿ ಮುಕ್ತರಾದರು. ಆ ಹತ್ತನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಚಿದ್ಬೋಧಭಾರತೀ ಮಹಾಸ್ವಾಮಿಗಳು(೨) ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕ ಎಂದು ಖ್ಯಾತರಾದ ಶ್ರೀ ಶ್ರೀ ವಿದ್ಯಾರಣ್ಯರ ಸಮಕಾಲಿಕರು. ವಿಜಯನಗರದ ಶ್ರೇಷ್ಠ ದೊರೆ ಶ್ರೀಕೃಷ್ಣ ದೇವರಾಯನ ಶಾಸನದಲ್ಲಿಯೂ ಇವರ ಕುರಿತು ಹಾಗೂ ಇವರ ಶಿಷ್ಯವರ್ಗಕ್ಕೆ ಸೇರಿದ ನಾಲ್ಕು ದೇಶಗಳಾದ ಹೈವ, ತುಳು, ಮೂಷಿಕ, ಮಲಯಾಳ ಬಗ್ಗೆ ಉಲ್ಲೇಖವಿರುವುದು ಗಣನೀಯ. ಅಂದರೆ ನಮ್ಮ ಗುರುಪರಂಪರೆಯು ಅರಿವಿಗಾಗಿ ಅದೆಷ್ಟು ಶ್ರಮಿಸಿತ್ತೆನ್ನುವುದು ವೇದ್ಯವಾಗುತ್ತದೆ. ಇಂತಹ ಚಿದ್ಬೋಧಭಾರತಿಗಳು(೨) ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆಮಾಡಿದ ಜ್ಞಾನಮೂರ್ತಿಗೆ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು(೧) ಎಂದು ಶುಭಾಭಿದಾನ ಮಾಡಿ ಬ್ರಹ್ಮಲೀನರಾದರು.
ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೫
ಪರಂಪರೆಯ ಮುಂದುವರೆಯುವಿಕೆಯನ್ನು ಮುಂದಿನ ಸಂಚಿಕೆಗಳಲ್ಲಿ ಅರಿಯೋಣ..