” ಮನೆಯ ಗೋವುಗಳಷ್ಟೇ ಕಾಳಜಿ ಶ್ರೀಮಠದ ಗೋವುಗಳ ಮೇಲೂ ಇದೆ ” : ವಿಜಯಲಕ್ಷ್ಮಿ ನರ್ಕಳ

ಮಾತೃತ್ವಮ್

ಶ್ರೀಮಠದ ಸೇವೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ತೊಡಗಿಸಿಕೊಂಡವರು ಇವರು. ಮಾಸದ ಮಾತೆಯಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದು ಲಕ್ಷ್ಮೀ ಪ್ರಕಾಶ್ ಇಳಂತಿಲ.ಮೊದಲು ಹೋದ ಮನೆಯಲ್ಲಿ ದೊರಕಿದ್ದು ಅತ್ಯಂತ ಕಹಿ ಅನುಭವ. ಕಣ್ಣೀರು ಸುರಿಸುತ್ತಲೇ ಹೊರಗೆ ನಡೆಯಬೇಕಾಗಿ ಬಂದ ಪರಿಸ್ಥಿತಿ. ‌ಆದರೂ ಶ್ರೀಗುರು ಚರಣಗಳಲ್ಲಿ ಇರಿಸಿದ ನಂಬಿಕೆ ಹುಸಿಯಾಗಲಿಲ್ಲ. ಗೋಪ್ರೇಮಿಯೊಬ್ಬರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನೀಡಿದರು. ಇದರಿಂದಾಗಿ ಗುರಿ ತಲುಪಲು ಕಷ್ಟವಾಗಲಿಲ್ಲ..

ಇದು ಮಂಗಳೂರು ಮಂಡಲದ ಕಲ್ಲಡ್ಕ ವಲಯದ ಮಾತೃಪ್ರಧಾನೆಯಾಗಿರುವ ವಿಜಯಲಕ್ಷ್ಮಿ ನರ್ಕಳ ಅವರ ವಿಶಿಷ್ಟ ಅನುಭವ.
ನೆತ್ತರುಕೆರೆ ಈಶ್ವರ ಭಟ್, ಪದ್ಮಾವತಿ ದಂಪತಿಗಳ ಪುತ್ರಿಯಾದ ಇವರು ವಿಟ್ಲ ಸಾಲೆತ್ತೂರು ಸಮೀಪದ ನರ್ಕಳ ನಾರಾಯಣ ಭಟ್ ಅವರ ಪತ್ನಿ.

ಮನೆಯಲ್ಲಿ ಹೈನುಗಾರಿಕೆ ನಡೆಸುವ ಇವರಿಗೆ ಹಸುಗಳೆಂದರೆ ತುಂಬಾ ಪ್ರೀತಿ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ತುಂಬಾ ಆಸಕ್ತಿ ಇರುವ ವಿಜಯಲಕ್ಷ್ಮಿ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.

” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನೆಯವರ ಸಂಪೂರ್ಣ ಸಹಕಾರವಿದೆ. ವೈದ್ಯೆಯಾಗಿರುವ ಹಿರಿಯ ಮಗಳು ಸಹಾ ಮಾತೃತ್ವಮ್ ಯೋಜನೆಗೆ ಕೈ ಜೋಡಿಸಿದ್ದಾಳೆ.
ಮೊದಲ ಅನುಭವ ಕಹಿಯಾದರೂ ನಾನು ಕಂಗೆಡಲಿಲ್ಲ. ಮನೆ ಮನೆಗಳಿಗೆ ಹೋಗಿ ದೇಶೀಯ ಹಸುಗಳ ಮಹತ್ವದ ಬಗ್ಗೆ, ನಮ್ಮ ಮಠದ ಗೋಶಾಲೆಗಳ ಬಗ್ಗೆ ಮಾಹಿತಿ ನೀಡಿದೆ. ಹಲವಾರು ಜನರು ಸಹಕರಿಸಿದರು ” ಎನ್ನುವ ಇವರಿಗೆ ಪುತ್ತೂರಿನ ವೈದ್ಯೆ ಡಾ. ಗೌರೀ ಪೈ ಅವರು ಒಂದು ವರ್ಷದ ಮೊತ್ತವನ್ನು ನೀಡಿ, ಗೋ ಸ್ವರ್ಗದ ಬಗ್ಗೆ ಮಾಹಿತಿ ಪಡೆದು ,ಗೋಸ್ವರ್ಗಕ್ಕೆ ಭೇಟಿ ನೀಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದು ಬದುಕಿನಲ್ಲಿ ಮರೆಯಲಾರದ ಅನುಭವವಾಗಿದೆ.

” ಗೌರೀ ಪೈ ಅವರನ್ನು ಭೇಟಿಯಾಗಲು ಹೋಗುವಾಗ ಮಲ್ಲಿಕಾ ಕಲ್ಕಡ್ಕ ಹಾಗೂ ಜ್ಯೋತಿ ಅಮೈ ಸಹಾ ನನ್ನ ಜೊತೆಗಿದ್ದರು. ಅವರ ಮಾರ್ಗದರ್ಶನ ನನಗೆ ತುಂಬಾ ಸಹಕಾರಿಯಾಯಿತು ” ಎಂದು ತುಂಬು ಹೃದಯದಿಂದ ನುಡಿಯುವ ವಿಜಯಲಕ್ಷ್ಮಿ ಅವರಿಗೆ ಶ್ರೀಮಠದ ಸೇವೆಯಲ್ಲಿ, ಗೋಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂಬ ಅದಮ್ಯ ಹಂಬಲವಿದೆ.

” ನಮ್ಮ ಮನೆಯಲ್ಲೂ ನಾಲ್ಕೈದು ಹಸುಗಳಿವೆ. ಮನೆಯ ಹಸುಗಳ ಕೆಲಸಗಳನ್ನು ನಾವಿಬ್ಬರೂ ಮಾಡುತ್ತೇವೆ. ನನ್ನ ಎಲ್ಲಾ ಕಾರ್ಯಕ್ಕೂ ಪ್ರೋತ್ಸಾಹ ನೀಡುವ ನಮ್ಮವರ ಸಹಕಾರದಿಂದ ಈ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಸಮಾಜದಲ್ಲಿ ದೇಶೀಯ ಹಸುಗಳ ಬಗ್ಗೆ ಉತ್ತಮ ಸ್ಪಂದನೆ ಇದೆ. ಗೋಸೇವೆಯಲ್ಲಿ ನಿರತವಾಗಿರುವಾಗ, ಗೋವುಗಳ ಒಡನಾಟದಲ್ಲಿರುವಾಗ ಮನಸ್ಸಿಗೆ ದೊರಕುವ ಆನಂದ ವರ್ಣಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ಅರಿಯಬೇಕು. ಪ್ರತಿಯೊಬ್ಬರೂ ಒಂದೊಂದು ಹಸುವನ್ನಾದರೂ ತಮ್ಮ ಮನೆಗಳಲ್ಲಿ ಸಾಕುವಂತಾಗ ಬೇಕು ಎಂಬುದೇ ನನ್ನ ಕನಸು ” ಎನ್ನುವ ವಿಜಯಲಕ್ಷ್ಮಿ ನರ್ಕಳ ಅವರು ಮಾತೃತ್ವಮ್ ಯೋಜನೆಯಲ್ಲಿ ಎರಡು ವರ್ಷದ ಗುರಿ ತಲುಪಬೇಕೆಂಬ ಗುರಿ ಹೊಂದಿದ್ದಾರೆ.

Author Details


Srimukha

Leave a Reply

Your email address will not be published. Required fields are marked *