” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು

ಮಾತೃತ್ವಮ್

” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು

” ತವರುಮನೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ. ಬಿಳಗಿ ಸೀಮೆ ಭೀಷ್ಮ ‘ ಎಂದೇ ಶ್ರೀಗುರುಗಳಿಂದ ಬಿರುದು ಪಡೆದ ಕೆಳಗಿನಮನೆ ಸುಬ್ರಾಯ ಹೆಗಡೆಯವರ ಮಗಳು ನಾನು.‌ ಹಿಂದಿನ ಗುರುಗಳ ಕಾಲದಿಂದಲೇ ಶ್ರೀಮಠದ ಪರಂಪರೆಯ ಬಗ್ಗೆ ತಿಳಿದಿದೆ . ಮದುವೆಯ ನಂತರ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳು ದೊರೆತವು. ಹನ್ನೊಂದು ವರ್ಷಗಳ ಕಾಲ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದ್ದೇನೆ.‌ ಶ್ರೀಗುರುಗಳ ವಿವಿಧ ಯೋಜನೆಗಳಲ್ಲಿ ಕೈ ಜೋಡಿಸುವಾಗ ದೊರಕುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ” ಎಂದವರು ಸಿದ್ಧಾಪುರ ಮಂಡಲ ಬಾನ್ಕುಳಿ ವಲಯದ ಗುಂಜಗೋಡು ಜಯರಾಮ ಭಟ್ ಅವರ ಪತ್ನಿ ಸವಿತಾ.

ಸಿದ್ಧಾಪುರದ ಬಿದ್ರಕಾನ ಕೆಳಗಿನಮನೆ ಸುಬ್ರಾಯ ಹೆಗಡೆ ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ.

ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲೂ ಹಸುಗಳನ್ನು ಸಾಕುತ್ತಿರುವ ಸವಿತಾ ಅವರ ಪತಿ ಜಯರಾಮ ಭಟ್ ಅವರು ಈ ಹಿಂದೆ ಸೀಮಾ ಗುರಿಕ್ಕಾರರಾಗಿದ್ದವರು. ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದವರು.

” ನಮ್ಮ ಮನೆಯವರು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾಗ ಸಂಪೂರ್ಣವಾಗಿ ಮನೆಯ ಜವಾಬ್ದಾರಿ ನಿರ್ವಹಿಸುವ ಹೊಣೆ ನನಗಿತ್ತು. ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಿದ್ದೇನೆ.‌ಅಭಯಾಕ್ಷರ ಅಭಿಯಾನದಲ್ಲೂ ಸಹಿ ಸಂಗ್ರಹ ಕಾರ್ಯ ಮಾಡಿದ್ದೇನೆ. ಶ್ರೀಮಠದ ಯೋಜನೆಗಳಲ್ಲಿ ಭಾಗವಹಿಸಿ ಸಮರ್ಪಕವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿರುವೆ ಎಂಬ ನಂಬಿಕೆ ನನ್ನದು ” ಎನ್ನುವ ಸವಿತಾ ಕೆಲವು ವರ್ಷಗಳ ನಂತರ ಮತ್ತೆ ವಲಯ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಶ್ರೀಗುರುಗಳನ್ನು ಶ್ರದ್ಧಾಭಕ್ತಿಯಿಂದ ನಂಬಿದ ಸವಿತಾ ಅವರ ನಂಬಿಕೆ ಹುಸಿಯಾಗಲಿಲ್ಲ. ತೀವ್ರವಾಗಿ ಕಾಡಿದ ಕಾಲುನೋವು ಶ್ರೀಗುರುಕೃಪೆಯಿಂದ ಸಂಪೂರ್ಣ ಗುಣವಾಗಿದೆ. ೨೦೦೪ ರಲ್ಲಿ ತಮ್ಮ ಮನೆಯಲ್ಲಿ ಶ್ರೀಗುರು ಭಿಕ್ಷಾ ಸೇವೆ ನಡೆಸುವ ಸೌಭಾಗ್ಯ ಒದಗಿಬಂದಿದ್ದು ತಮ್ಮ ಪೂರ್ವ ಜನ್ಮದ ಸುಕೃತ ಎಂದು ನಂಬಿರುವ ಇವರಿಗೆ ಶ್ರೀಮಠದ ಶಿಷ್ಯಭಕ್ತರೆಲ್ಲರೂ ತಮ್ಮ ಬಂಧುಗಳು ಎಂಬ ಮಮಕಾರವಿದೆ.

” ಮಾತೃತ್ವಮ್ ಯೋಜನೆಯ ಮೂಲಕ ಬಹಳ ಬೇಗನೆ ಗುರಿ ತಲುಪಿದೆ. ಗೋಮಾತೆಯ ಸೇವೆಗೆ ಕೇಳಿದವರೆಲ್ಲ ಕೈ ಜೋಡಿಸಿದ್ದಾರೆ. ನಮ್ಮ ಮಕ್ಕಳೂ ಸಹಕಾರ ನೀಡಿದ್ದಾರೆ . ಗೋಮಾತೆಯ ಸೇವೆಯಲ್ಲಿ ಸಂತೃಪ್ತಿಯಿದೆ ” ಎಂದು ನುಡಿಯುವ ಸವಿತಾ ಜಯರಾಮ ಭಟ್ ಅವರಿಗೆ ತಮ್ಮ ಜೀವನದ ಕೊನೆತನಕವೂ ಶ್ರೀಮಠದ ಸೇವೆ ಮಾಡಲು ಅವಕಾಶ ದೊರಕಬೇಕು ಎಂಬುದು ಮಾತ್ರ ದೇವರಲ್ಲಿ ಕೋರುವ ಪ್ರಾರ್ಥನೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *