” ಚಲಿಸುವ ದೇವಾಲಯ ಎಂದೇ ಕರೆಯಲ್ಪಡುವ ಗೋಮಾತೆಯ ಸೇವೆಗೆ ಅವಕಾಶ ದೊರಕಿದ್ದು ಶ್ರೀಗುರುಗಳ ಅನುಗ್ರಹದಿಂದ. ಶ್ರೀಮಠದ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಕಂಡ ಕನಸುಗಳೆಲ್ಲವೂ ಶ್ರೀಗುರು ಕೃಪೆಯಿಂದ ನನಸಾಗುತ್ತವೆ. ನೊಂದ ಮನಸ್ಸಿಗೆ ಸಾಂತ್ವನದ ತಂಪು ದೊರಕುವುದು ಶ್ರೀಚರಣ ಸೇವೆಯಿಂದ ” ಎಂದು ನುಡಿದವರು ಮುಳ್ಳೇರಿಯ ಮಂಡಲ ನೀರ್ಚಾಲ್ ವಲಯದ ” ವಿಶ್ವಾಮಿತ್ರ ” ನಿವಾಸಿಗಳಾಗಿರುವ ಶಂಕರನಾರಾಯಣ ಭಟ್ ಚಾಳೆತ್ತಡ್ಕ ಅವರ ಪತ್ನಿ ಚಂದ್ರಕಲಾ ಚಾಳೆತ್ತಡ್ಕ.
ಕಾಯರಡ್ಕ ಮೂಲದ ಮುಂಡೋಳೆ ರಾಮ ಭಟ್, ಶಾರದಾ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
” ಶ್ರೀಗುರುಗಳು ಪೀಠಾರೋಹಣಗೈದ ಸಂದರ್ಭದಲ್ಲಿ ಕುಂಟಿಕಾನ ಮಠಕ್ಕೆ ಆಗಮಿಸಿದಾಗ ಮೊದಲ ಬಾರಿಗೆ ಶ್ರೀಗುರುಗಳ ದರ್ಶನ ಭಾಗ್ಯ ದೊರಕಿತು. ಈಶ್ವರಿ ಬೇರ್ಕಡವು ಅಧ್ಯಕ್ಷರಾಗಿದ್ದ ಮಹಿಳಾ ಪರಿಷತ್ ನ ಜತೆ ಕಾರ್ಯದರ್ಶಿಯಾಗಿ ಶ್ರೀಮಠದ ಸೇವೆಯನ್ನು ಆರಂಭಿಸಿದೆ. ಕುಂಟಿಕಾನ ಘಟಕದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸಿರುವ ನಾನು ಶ್ರೀರಾಮಚಂದ್ರಾಪುರ ಮಠ ಹೊಸನಗರದಲ್ಲಿ ಜರಗಿದ ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ್ದೇನೆ ” ಎನ್ನುವ ಇವರು ಅಂಬಾಗಿರಿ, ಅಶೋಕೆಗಳಲ್ಲಿ ಜರಗುವ ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವ ಉದ್ಧೇಶದಿಂದ ಬದಿಯಡ್ಕದಲ್ಲಿ ಕಾರ್ಯವೆಸಗುತ್ತಿರುವ ‘ ಮಹಿಳೋದಯ ‘ ಎಂಬ ಸಂಸ್ಥೆಯ ಸಕ್ರಿಯ ಸದಸ್ಯೆಯಾದ ಇವರು ವಿವಿಧ ಕಡೆಗಳಲ್ಲಿ ನಡೆದ ಮಹಿಳೋದಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು. ಗೃಹ ಉದ್ಯಮಗಳ ನಿರ್ಮಾಣದ ಬಗ್ಗೆ ಮಾತೆಯರಿಗೆ ಮಾರ್ಗದರ್ಶನ ನೀಡಿದವರು. ಬದಿಯಡ್ಕದ ‘ ಶ್ರೀಮಾತಾ ‘ ಹವ್ಯಕ ಭಜನಾ ತಂಡದ ಸದಸ್ಯೆಯೂ ಆಗಿರುವ ಚಂದ್ರಕಲಾ ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ಸ್ತೋತ್ರಗಳನ್ನು, ಶ್ಲೋಕಗಳನ್ನು ಪಠಿಸುವಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ.
” ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡಿದ ನನಗೆ ಸಿಹಿಕಹಿ ಅನುಭವಗಳಾಗಿವೆ. ಆದರೂ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಪ್ರತಿಯೊಂದು ನೂತನ ಕಾರ್ಯದ ಆರಂಭದಲ್ಲೂ ಶ್ರೀಗುರುಗಳನ್ನು ಸ್ಮರಿಸಿ ಹೊರಡುವುದು ನಮ್ಮ ಅಭ್ಯಾಸ. ಇದರಿಂದಾಗಿ ಬದುಕಿನಲ್ಲಿ ನಾವು ಮನದಲ್ಲಿ ಯೋಚಿಸಿದ ಅನೇಕ ಕಾರ್ಯಗಳು ಕೈಗೂಡಿವೆ. ಅನಾರೋಗ್ಯದ ಸಂದರ್ಭದಲ್ಲಿ ಶ್ರೀಗುರುಗಳ ಮಾರ್ಗದರ್ಶನ ಪಡೆದು ಔಷಧಿ ಸೇವಿಸಿ ಸಂಪೂರ್ಣ ಆರೋಗ್ಯ ಪಡೆದಿದ್ದೇನೆ. ಬದುಕಿನಲ್ಲಿ ಕಂಡ ಕನಸುಗಳೆಲ್ಲವೂ ನನಸಾಗಿವೆ. ನಮ್ಮದೇ ಮನೆ ಎಂಬ ಕನಸು ನನಸಾಗಿದ್ದು ಶ್ರೀಗುರುಗಳ ಕೃಪೆಯಿಂದಲೇ ಎಂಬ ನಂಬಿಕೆ ನಮಗೆ. ನಮ್ಮ ಮೂವರು ಮಕ್ಕಳೂ ಶ್ರೀಮಠದ ಸೇವೆಯಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಆರೋಗ್ಯ, ನೆಮ್ಮದಿ ಬೇಕೆಂಬ ಪ್ರಾರ್ಥನೆ ನನ್ನದು ” ಎನ್ನುವ ಚಂದ್ರಕಲಾ ಚಾಳೆತ್ತಡ್ಕ ಅವರು ಮಾತೃತ್ವಮ್ ಯೋಜನೆಯಲ್ಲಿ ತಮಗೆ ಸಹಕರಿಸಿದ ಎಲ್ಲರಿಗೂ ಶ್ರೀಗುರುಗಳ , ಗೋಮಾತೆಯ ಅನುಗ್ರಹ ಸದಾ ಇರಲಿ ಎಂದು ಬಯಸುತ್ತಾರೆ.
ಪ್ರಸನ್ನಾ ವಿ ಚೆಕ್ಕೆಮನೆ