” ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೇವೆ. ಈಗಲೂ ಹತ್ತು ಹನ್ನೆರಡು ಹಸುಗಳಿವೆ. ಹಸು ಸಾಕಣೆ ಹೊರೆ ಎಂದು ತೋರಿದರೂ ಗೋಮಾತೆಯನ್ನು ಪ್ರೀತಿಸುವವರಿಗೆ ಅದು ಹೊರೆಯಲ್ಲ. ಆತ್ಮ ಸಂತೋಷದ ಹಾದಿ ಇದು ” ಎಂದವರು ಉಪ್ಪಿನಂಗಡಿ ಮಂಡಲ ಬೆಳ್ಳಾರೆ ವಲಯದ ಎಕ್ಕಡ್ಕ ಗಣಪತಿ ಭಟ್ ಅವರ ಪತ್ನಿ ಯಶೋದಾ ಭಟ್.
ಪುರುಷಬೆಟ್ಟು ಗೋವಿಂದ ಭಟ್ ,ಕಮಲಾವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.
” ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಭಾಗ್ಯಲಕ್ಷ್ಮಿ ವಿ. ಭಟ್ ಅವರ ಪ್ರೋತ್ಸಾಹದಿಂದ ಮಾಸದ ಮಾತೆಯಾದೆ. ಮನೆ ಮನೆಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಗೋಸೇವೆಯ ಮಹತ್ವವನ್ನು ತಿಳಿಸಿದ್ದೇನೆ. ಹೆಚ್ಚಿನವರೂ ಸಹಕಾರ ನೀಡಿದ್ದಾರೆ. ಬೆಳ್ಳಾರೆ ವಲಯಾಧ್ಯಕ್ಷರಾದ ಪತಿಯ ಸಂಪೂರ್ಣ ಸಹಕಾರ ನನಗೆ ಇದೆ ” ಎನ್ನುವ ಇವರಿಗೆ ತಮ್ಮ ಜನುಮದಿನದಂದು ಶ್ರೀಗುರುಗಳ ಆಶೀರ್ವಾದ ಪಡೆಯುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ಎಂಬ ನಂಬಿಕೆ.
ಹೊಸನಗರದಲ್ಲಿ ನಡೆದ ವಿಶ್ವ ಗೋಸಮ್ಮೇಳನದಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಇವರು ಮುಂದೆ ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬದುಕಿನಲ್ಲಿ ಕಂಡ ಕನಸುಗಳೆಲ್ಲ ನನಸಾಗಿದ್ದು ಶ್ರೀಗುರುಗಳ ಪರಮಾನುಗ್ರಹ ಎಂದೇ ಭಾವಿಸುವ ಯಶೋದಾ ಜಿ. ಭಟ್ ಅವರಿಗೆ ಶ್ರೀಗುರು ಕಾರುಣ್ಯದಿಂದ ಇನ್ನಷ್ಟು ಕಾಲ ಗೋಮಾತೆಯ ಸೇವೆ, ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಅಭಿಲಾಷೆಯಿದೆ.
ಪ್ರಸನ್ನಾ ವಿ ಚೆಕ್ಕೆಮನೆ