” ಸಾಟಿಯಿಲ್ಲದ ಸಂತಸ ದೊರಕುವುದು ಶ್ರೀಮಠದ ಸೇವೆಯಿಂದ ” : ಚಂದ್ರಕಲಾ ವಡ್ವ

ಮಾತೃತ್ವಮ್

” ನನ್ನ ಬಾಲ್ಯದಲ್ಲಿ ತವರುಮನೆಗೆ ಹಿರಿಯ ಗುರುಗಳ ಆಗಮನವಾಗಿತ್ತು. ಮದುವೆಯಾಗಿ ಸೇರಿದ್ದು ಗುರಿಕ್ಕಾರರ ಮನೆತನಕ್ಕೆ. ಹಾಗಾಗಿ ಶ್ರೀಮಠದ ಸಂಪರ್ಕ ಸಹಜವಾಗಿಯೇ ನನಗೆ ಲಭಿಸಿತು. ನಮ್ಮ ಯಜಮಾನರಿಗೂ ಹಿರಿಯ ಗುರುಗಳಿಗೂ ಬಹಳ ಆತ್ಮೀಯತೆ ಇತ್ತು. ಹಿರಿಯ ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ನಾವು ತೀರ್ಥಹಳ್ಳಿಗೂ ಹೋಗಿದ್ದೇವೆ.೩೬ ನೇ ಪೀಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಜಕ್ಕೂ ಶ್ರೀಶಂಕರರ ಅವತಾರವೆಂದೇ ನನ್ನ ನಂಬಿಕೆ. ಹಾಗಾಗಿಯೇ ಈ ಇಳಿ ವಯಸ್ಸಿನಲ್ಲೂ ಶ್ರೀಮಠದ ಸೇವೆಗೆ ನನ್ನ ಮೊದಲ ಆದ್ಯತೆ ” ಎಂದವರು ಮಂಗಳೂರು ಮಂಡಲ, ಕೇಪು ವಲಯದ ವಡ್ವ ವಿ.ಜಿ. ಶಂಕರನಾರಾಯಣ ಭಟ್ ಅವರ ಪತ್ನಿ ಚಂದ್ರಕಲಾ ವಡ್ವ.

 

ಬಾಯಾಡಿ ಗೋಪಾಲಕೃಷ್ಣ ಭಟ್ ,ಮೂಕಾಂಬಿಕಾ ದಂಪತಿಗಳ ಪುತ್ರಿಯಾದ ಇವರು ಕೇಪು ಮಹಿಷಮರ್ಧಿನಿ ಮಾತೃತ್ವಮ್ ಸಮಿತಿಯ ಸದಸ್ಯೆಯಾಗಿದ್ದಾರೆ.

 

ತುಂಬು ಕುಟುಂಬದ ಸದಸ್ಯೆಯಾಗಿರುವ ಚಂದ್ರಕಲಾ ಅವರ ಜೀವನಾನುಭವ ಹಿರಿದು. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಈಗಲೂ ಸೋದರನಿಂದ ಸಂಗೀತವನ್ನು ಕಲಿಯುತ್ತಾ ಜೀವನೋತ್ಸಾಹದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕುವ ಸ್ತೋತ್ರ ಪಾರಾಯಣಗಳಲ್ಲಿ‌ ಅತ್ಯಂತ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಳ್ಳುವ ಇವರು ಆದಿತ್ಯಹೃದಯ ಸ್ತೋತ್ರವನ್ನು ಒಂದು ಲಕ್ಷ ಸಂಖ್ಯೆಯಲ್ಲಿ ಪಠಿಸಿದವರು.

 

” ಶ್ರೀಗುರುಗಳ ಅನುಗ್ರಹದಿಂದ ಮಾಸದ ಮಾತೆಯಾದೆ ಹಾಗೂ ಅವರ ಅನುಗ್ರಹದಿಂದಲೇ ಗುರಿಯನ್ನು ತಲುಪಿದೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಕೈ ಜೋಡಿಸಿದ್ದಾರೆ. ಗೋಸ್ವರ್ಗದಲ್ಲಿ ಲಕ್ಷ ಬಾಗಿನವನ್ನೂ ಸ್ವೀಕರಿಸುವ ಸೌಭಾಗ್ಯ ನನಗೆ ಒದಗಿಬಂದಿದೆ. ಗೋಸೇವೆಯ ಜೊತೆಯಲ್ಲಿ ಗೋ ಉತ್ಪನ್ನಗಳ ಪ್ರಚಾರ ಮಾಡಲು ನಾನು ಅನೇಕ ಮನೆಗಳನ್ನು ಸಂಪರ್ಕ ಮಾಡಿದ ಅನುಭವವಿದೆ. ಇದರಿಂದ ಬಂದ ಲಾಭಾಂಶವನ್ನು ಮಾತೃತ್ವಮ್ ಗೆ ಹಾಕಿದ್ದೇನೆ. ಈಗಾಗಲೇ ಎರಡು ವರ್ಷಗಳ ಗುರಿ ತಲುಪಿದ್ದೇನೆ. ನಿರಂತರವಾಗಿ ಗೋಸೇವೆ, ಶ್ರೀಮಠದ ಸೇವೆ ಮುಂದುವರಿಸಬೇಕೆಂಬುದೇ ನನ್ನ ಅಭಿಲಾಷೆ. ಇದರಿಂದ ದೊರಕುವ ನೆಮ್ಮದಿ, ಶಾಂತಿಗೆ ಸಾಟಿ ಯಾವುದೂ ಇಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ಇದರ ಮಹತ್ವದ ಅರಿವಾಗಬಹುದಷ್ಟೆ ” ಎನ್ನುವ ಚಂದ್ರಕಲಾ ವಡ್ವ ಅವರ ಇಬ್ಬರು ಮಕ್ಕಳೂ ತಾಯಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

 

” ನಮ್ಮ ಸಮಾಜವನ್ನು ಒಗ್ಗೂಡಿಸಿ ತಾಳ್ಮೆಯಿಂದ ಅನುಗ್ರಹಿಸುವ ಶ್ರೀಗುರುಗಳ ಅನುಗ್ರಹದಿಂದ ರಾಮರಾಜ್ಯದ ಕನಸು ನನಸಾಗಬಹುದು ಎಂಬ ಭರವಸೆ ಇದೆ ” ಎಂದು ಭಾವಪೂರ್ಣವಾಗಿ ನುಡಿಯುವ ಚಂದ್ರಕಲಾ ಅವರಿಗೆ ಶ್ರೀಮಠದ ಬಗ್ಗೆ, ಶ್ರೀಗುರುಗಳ ಕಾರುಣ್ಯದ ಬಗ್ಗೆ ಮಾತನಾಡಲು ಇನ್ನಷ್ಟು ಮತ್ತಷ್ಟು ಆಸಕ್ತಿ, ಹಂಬಲ. ತಮ್ಮ ಮನೆಯಲ್ಲೂ ಹಸುಗಳನ್ನು ಸಾಕುತ್ತಾ ಈ ಇಳಿ ವಯಸ್ಸಿನಲ್ಲಿ ಅವರು ಮಾಡುವ ಸೇವೆ , ತೋರುವ ಉತ್ಸಾಹಗಳು ಎಲ್ಲಾ ಮಾಸದಮಾತೆಯಾರಿಗೂ ಮಾದರಿಯಾಗಿದೆ.

 

 

ಪ್ರಸನ್ನಾ ವಿ ಚೆಕ್ಕೆಮನೆ

Author Details


ಪ್ರಸನ್ನ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *