ಗೋಮಾತೆಯ ಸೇವೆಯೇ ಒಂದು ಖುಷಿ : ಸುನಂದಾ ನಾರಾಯಣ ಭಟ್, ಪೋಳ್ಯ

ಮಾತೃತ್ವಮ್

 

” ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.‌ ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಗೋಸೇವೆಯಲ್ಲಿ ತೊಡಗಿಸಿಕೊಂಡೆ. ಗೋಮಾತೆಯ ಸೇವೆಯಲ್ಲಿ ಮಗ್ನಳಾಗಿರುವಾಗ, ಗೋಮಾತೆಯ ಸೇವೆಗಾಗಿ ಸಮರ್ಪಣೆ ಮಾಡಿದಾಗ ದೊರಕುವ ಸಂತಸ, ನೆಮ್ಮದಿ, ಶಾಂತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ” ಎನ್ನುತ್ತಾ ಗೋಮಾತೆಯ ಸೇವೆಯಲ್ಲಿ ಆನಂದ ಕಂಡವರು ದಕ್ಷಿಣ ಕನ್ನಡದ ಪೋಳ್ಯ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ , ಸರ್ವಧಾರಿ ವಲಯ ನಿವಾಸಿಗಳಾಗಿರುವ ನಾರಾಯಣ ಭಟ್ ಪೋಳ್ಯ ಇವರ ಪತ್ನಿ ಸುನಂದಾ ಎನ್. ಭಟ್.

ಕುಮಟಾದ ಬಾಡ ಪರಮೇಶ್ವರ ವೆಂಕಟ್ರಾಮ್ ಹೆಗಡೆ ಹಾಗೂ ಸಾವಿತ್ರಿ ಅಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಶೇಷ ಪ್ರೀತಿ, ಮಮತೆ.

ಧಾರ್ಮಿಕ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಹೊಂದಿರುವ ಇವರು ಶ್ರೀಗುರುಗಳ ನಿರ್ದೇಶಾನುಸಾರವಾಗಿರುವ ಸ್ತೋತ್ರಗಳನ್ನು ನಿರಂತರ ಪಠಣ ಮಾಡುತ್ತಾ, ಕುಂಕುಮಾರ್ಚನೆಯಂತಹ ದೈವಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವವರು. ತಮ್ಮ ಬಿಡುವಿನ ವೇಳೆಯಲ್ಲಿ ಹೂವಿನ ಗಿಡಗಳನ್ನು ಬೆಳೆಸುವ ಹವ್ಯಾಸವನ್ನೂ ಹೊಂದಿರುವ ಸುನಂದಾ ಎನ್. ಭಟ್ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಎರಡು ವರ್ಷಗಳ ಗುರಿ ತಲುಪಿ ,ಇನ್ನಷ್ಟು ಸೇವೆ ಮುಂದುವರಿಸುತ್ತಿರುವ ಸುನಂದಾ ಭಟ್ ಅವರು ಇತ್ತೀಚೆಗೆ ಚಾತುರ್ಮಾಸ್ಯದ ಸಂದರ್ಭದಲ್ಲಿ ವೈಯುಕ್ತಿಕವಾಗಿ ತಮ್ಮ ಗಳಿಕೆಯ ಒಂದು ಲಕ್ಷದಷ್ಟು ಮೊತ್ತವನ್ನು ಗೋಮಾತೆಯ ಸೇವಾನಿಧಿಗೆ ಸಮರ್ಪಿಸಿದ್ದಾರೆ.

ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ, ಬಾಗಿನವನ್ನು ಸ್ವೀಕರಿಸುವ ಸೌಭಾಗ್ಯ ಇವರಿಗೆ ಒದಗಿಬಂದಿದೆ.

” ಗೋಮಾತೆಯ ಸೇವೆಯಲ್ಲಿ ಅನೇಕ ಮಂದಿ ಕೈ ಜೋಡಿಸಿದ್ದಾರೆ, ನನ್ನ ಇಬ್ಬರು ಗಂಡು ಮಕ್ಕಳು ಹಾಗೂ ಸೊಸೆಯಂದಿರು ಸೇರಿ ಒಂದು ವರ್ಷದ ಗುರಿ ತಲುಪುವಷ್ಟು ಮೊತ್ತವನ್ನು ನೀಡಿದ್ದಾರೆ, ಸಮಾಜದ ಇತರ ಗೋಪ್ರೇಮಿಗಳು ತುಂಬಾ ಸಂತಸದಿಂದಲೇ ಗೋಮಾತೆಯ ಸೇವೆಗಾಗಿ ಕೈ ಜೋಡಿಸಿದ್ದಾರೆ. ಭಾರತೀಯ ಗೋತಳಿಗಳ ಮೌಲ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅರಿವು ಮೂಡುತ್ತಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ ” ಎನ್ನುವ ಸುನಂದಾ ಭಟ್ ಗೋಮಾತೆಯ ಸೇವೆಗಾಗಿ ಸಮರ್ಪಣೆ ಮಾಡುವುದರಲ್ಲೂ ವಿಶೇಷ ಆನಂದ ಕಂಡುಕೊಂಡವರು.

” ಶ್ರೀಗುರುಗಳ ದರ್ಶನವೇ ಒಂದು ಅನುಗ್ರಹ, ಅವರ ಮಾರ್ಗದರ್ಶನವೇ ಬದುಕು ” ಎನ್ನುವ ಇವರಿಗೆ ಮನಸ್ಸು ಸದಾ ಗೋಸೇವೆಯಲ್ಲಿ ನಿರತವಾಗಿರಲೆಂಬುದೇ ನಿರಂತರ ಹಂಬಲ.

 

 

 

 

Author Details


Srimukha

Leave a Reply

Your email address will not be published. Required fields are marked *