ಗೋಮಾತೆ ಸಂಪೂಜ್ಯಳು : ಸುಶೀಲಾ ವಾದ್ಯಕೋಡಿ

ಮಾತೃತ್ವಮ್

 

” ಗೋವು ನೀಡುವ ಎಲ್ಲಾ ಉತ್ಪನ್ನಗಳು ನಮ್ಮ ಬದುಕಿಗೆ ಬೇಕು, ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಶುದ್ಧ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಹಾಗಾಗಿ ಭಾರತೀಯ ತಳಿಯ ಹಸುಗಳ ರಕ್ಷಣೆಗೆ ಸಮಾಜವೇ ಕಟಿಬದ್ಧವಾಗಿ ನಿಲ್ಲಬೇಕಿದೆ. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಉರುವಾಲು ವಲಯದ ವಾದ್ಯಕೋಡಿ ಶಂಕರ ಭಟ್ಟರ ಪತ್ನಿ ಸುಶೀಲಾ.

ದೋಟ ಸುಬ್ರಹ್ಮಣ್ಯ ಭಟ್, ಈಶ್ವರಿ ದಂಪತಿಗಳ ಪುತ್ರಿಯಾದ ಇವರು ಉರುವಾಲು ವಲಯದ ಮಾತೃ ಪ್ರಧಾನೆಯಾಗಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

” ದೇವಿಕಾ ಅಕ್ಕನ ಪ್ರೋತ್ಸಾಹ, ಬೆಂಬಲ ಹಾಗೂ ಮನೆಯವರ ಸಹಕಾರದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಗೋಮಾತೆಯ ಮಹತ್ವವು ಸಮಾಜದ ಮೂಲೆ ಮೂಲೆಗಳಿಗೂ ತಲುಪುವಂತಾಗಬೇಕು ಎಂಬುದೇ ನನ್ನ ಹಂಬಲ. ಗೋ ಉತ್ಪನ್ನಗಳನ್ನು ನಿತ್ಯವೂ ಉಪಯೋಗಿಸಬೇಕು , ಅದರ ಉಪಯುಕ್ತತೆಯ ಬಗ್ಗೆ ಇತರರಿಗೆ ಮಾಹಿತಿಯನ್ನು ನೀಡಬೇಕು. ಈ ನಿಟ್ಟಿನಲ್ಲಿ ದೇವಿಕಾ ಶಾಸ್ತ್ರಿಯವರ ಜೊತೆಗೆ ಅನೇಕ ಮನೆಗಳಿಗೆ ಭೇಟಿಯಿತ್ತಿದ್ದೇನೆ. ಶ್ರೀಮಠದ ಸಂಘಟನೆಯ ಬಗ್ಗೆ ತುಂಬಾ ಹೆಮ್ಮೆಯಿದೆ, ಇಲ್ಲಿ ಒಂದು ಸೇವಾಬಿಂದುವಾಗಿ ಗುರುತಿಸಿಕೊಂಡು ಸೇವೆ ಮಾಡುವುದೇ ಖುಷಿ ” ಎನ್ನುವ ಇವರು ತಮ್ಮ ಮನೆಯಲ್ಲಿ ಭಾರತೀಯ ತಳಿಯ ನಾಲ್ಕೈದು ಹಸುಗಳನ್ನು ಸಾಕುತ್ತಿದ್ದಾರೆ.

ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನ ಸ್ವೀಕಾರದ ಸೌಭಾಗ್ಯವನ್ನು ಪಡೆದಿರುವ ಸುಶೀಲಾ ಪ್ರಸ್ತುತ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಹಾಡು ಭಜನೆಗಳಲ್ಲಿ ಆಸಕ್ತಿ ಇರುವ ಇವರು ತಮ್ಮ ತಂಡದೊಂದಿಗೆ ಈ ಹಿಂದೆ ಹೊಸನಗರದ ಶ್ರೀರಾಮಚಂದ್ರಾಪುರ ಮಠ ಹಾಗೂ ಬೆಂಗಳೂರಿನ ಗಿರಿನಗರದ ರಾಮಾಶ್ರಮಗಳಿಗೆ ತೆರಳಿ ಭಜನಾ ಸೇವೆಯನ್ನು ನಡೆಸಿಕೊಟ್ಟಿದ್ದಾರೆ.

” ಶ್ರೀಗುರುಗಳ ಕೃಪೆಯಿಂದ ಅನೇಕ ಮಂದಿ ಗೋಪ್ರೇಮಿಗಳು ಮಾಸದ ಮಾತೆಯಾಗಿ ಗುರಿ ಸೇರಲು ಸಹಕಾರ ನೀಡಿದ್ದಾರೆ. ಇಬ್ಬರು ಗಂಡು ಮಕ್ಕಳಿಗೂ ವಿದ್ಯೆ,ಉದ್ಯೋಗ, ವಿವಾಹವೇ ಮೊದಲಾದ ವಿಚಾರಗಳಲ್ಲಿ ಯಾವುದೇ ತೊಡಕೂ ಬಾರದೆ ಎಲ್ಲಾ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರಿದ್ದು ಶ್ರೀಗುರುಗಳ ಅನುಗ್ರಹದಿಂದ ಎಂದು ನಂಬುವವರು ನಾವು ” ಎನ್ನುವ ಇವರು ಇನ್ನಷ್ಟು ಮಾತೆಯರನ್ನು ಮಾತೃತ್ವಮ್ ನಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಅವರ ಮೂಲಕವೂ ಗೋಮಾತೆಯ ಸೇವೆ ನಡೆಯುವಂತಾಗಲಿ ಎಂಬ ಸದಾಶಯ ಹೊಂದಿದ್ದಾರೆ.

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *