ಶ್ರೀಗುರುಸೇವೆಯ ಹಾದಿಯಲ್ಲಿ ನೆಮ್ಮದಿ ಕಂಡ ಬದುಕು – ಪುಷ್ಪಾ ಖಂಡಿಗೆ

ಮಾತೃತ್ವಮ್

” ಗೋಸೇವೆ, ಶ್ರೀಮಠದ ಸೇವೆ ಎಂಬುದು ಪ್ರಸಿದ್ಧಿಗಾಗಿ ಅಲ್ಲ, ಮನದ ನೆಮ್ಮದಿಗಾಗಿ. ಸಾರ್ಥಕ ಭಾವಕ್ಕಾಗಿ. ಶ್ರೀಗುರುಗಳ ಅನುಗ್ರಹದ ಚೈತನ್ಯದ ಬೆಳಕಿನಲ್ಲಿ ಗೋಮಾತೆಯ ಸೇವೆ ಮಾಡಿದೆ. ಇದರಿಂದಾಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ. ಸಮಾಜದ ಒಳಿತನ್ನೇ ಬದುಕಿನ ಧ್ಯೇಯವನ್ನಾಗಿರಿಸಿದ ಶ್ರೀಗುರುಗಳ ಮಾರ್ಗದರ್ಶನವೇ ಬದುಕಿಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ ದಕ್ಷಿಣ ವಲಯದ ಕದ್ರಿ ಸಮೀಪದ ಡಾ. ಕೃಷ್ಣ ಭಟ್ ಖಂಡಿಗೆ ಇವರ ಪತ್ನಿ ಪುಷ್ಪಾ.

ಪುತ್ತೂರು ಸಮೀಪದ ಕಾನಾವು ನರಸಿಂಹ ಭಟ್, ಶಾರದಮ್ಮ ದಂಪತಿಗಳ ಪುತ್ರಿಯಾದ ಇವರು ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವರು. ಭಾರತೀಯ ಸಂಸ್ಕೃತಿ, ಕೃಷಿಪರಿಸರ, ದೇಶೀ ಹಸುಗಳ ಮಹತ್ವ ಇವುಗಳ ಬಗ್ಗೆ ಎಳವೆಯಿಂದಲೇ ಶಿಕ್ಷಣ ದೊರಕಿದ ಇವರಿಗೆ ದೇಶೀಯ ಹಸುಗಳ ಸಂರಕ್ಷಣೆಯ ಕುರಿತಾದ ಕಾಳಜಿ ಜೀವನದ ಭಾಗವಾಗಿತ್ತು.

” ತವರು ಮನೆ ಹಾಗೂ ಪತಿಯ ಮನೆ ಎರಡು ಕಡೆಯವರು ಅನನ್ಯ ಗುರುಭಕ್ತರು. ಹಾಗಾಗಿ ಅನೇಕ ವರ್ಷಗಳಿಂದ ಶ್ರೀಮಠದ ಸಂಪರ್ಕವಿದೆ. ಹವ್ಯಕ ಪರಿಷತ್ತಿನ ಆರಂಭದಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮಂಗಳೂರು ಹವ್ಯಕ ಮಹಾಸಭೆಯ ಮೂಲಕವೂ ಸಮಾಜ ಸೇವೆಯಲ್ಲಿ ಕೈಜೋಡಿಸಲು ಸಾಧ್ಯವಾಗಿದೆ. ಇದರಿಂದಾಗಿ ಸಾಮಾಜಿಕ ಸಂಪರ್ಕವು ಹೆಚ್ಚಾಗಿದೆ. ಶ್ರೀಮಠದ ಸಂಪರ್ಕದಿಂದ ಜೀವನದಲ್ಲಿ ಉತ್ತಮ ಸಂಸ್ಕಾರಗಳನ್ನು, ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಸುಮಾ ರಮೇಶ್ ಸರವು ಇವರ ಪ್ರೇರಣೆಯಿಂದ ಮಾಸದ ಮಾತೆಯಾದೆ. ಗೋಮಾತೆ ನಮ್ಮ ಸಂಸ್ಕೃತಿಯಲ್ಲಿ, ಕೃಷಿ ಪದ್ಧತಿಯಲ್ಲಿ ಆಳವಾಗಿ ಬೆಸೆದುಕೊಂಡಿದ್ದಾಳೆ. ಗೋಸಂರಕ್ಷಣೆ ಎಂಬುದು ಕೇವಲ ಒಂದು ಧಾರ್ಮಿಕ ಕಾರ್ಯ ಮಾತ್ರವಲ್ಲ, ಸಮಾಜದ ಉಳಿವಿಗಾಗಿ ದೇಶಿಯ ಹಸುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎನ್ನುವ ಪುಷ್ಪಾ ಖಂಡಿಗೆಯವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ಗೋವುಗಳ ಗುರಿಯನ್ನು ತಲುಪಿದ ಮಾಸದ ಮಾತೆಯಾಗಿದ್ದಾರೆ.

ಈ ಹಿಂದೆ ವಲಯದ ಬಿಂದು – ಸಿಂಧು ಪ್ರಧಾನೆಯಾಗಿಯೂ, ಶ್ರೀಕಾರ್ಯಕರ್ತೆಯಾಗಿಯೂ ಸೇವೆ ಮಾಡಿದ ಅನುಭವವಿರುವ ಪುಷ್ಪಾ ಖಂಡಿಗೆಯವರು ಪ್ರಸ್ತುತ ಮಂಗಳೂರು ದಕ್ಷಿಣ ವಲಯದ ವೈವಾಹಿಕ ಪ್ರಧಾನರಾಗಿ ಸೇವೆ ಮಾಡುತ್ತಿದ್ದಾರೆ. ಇವರ ಶ್ರೀಮಠದ ಸೇವೆಗೆ ಪತಿ ಡಾ. ಕೃಷ್ಣ ಖಂಡಿಗೆಯವರ ಸಂಪೂರ್ಣ ಸಹಕಾರವಿದೆ.

” ಇಂದಿನ ನಗರ ಜೀವನದ ವಾತಾವರಣದಲ್ಲಿ ಪ್ರತಿ ಮನೆಯಲ್ಲಿಯೂ ಹಸುಗಳನ್ನು ಸಾಕುವುದು ಸುಲಭವಲ್ಲ. ಆದರೂ ನಮ್ಮ ಮಕ್ಕಳಿಗೆ ಗೋಸೇವೆಯ ಮಹತ್ವ ಅರಿವಾಗಬೇಕು. ಅದಕ್ಕೆ ಶ್ರೀಮಠದ ಸಂಪರ್ಕ ಬಾಲ್ಯದಿಂದಲೇ ದೊರಕಬೇಕು. ಸರಳ ಜೀವನ ಮೌಲ್ಯಗಳು, ನಮ್ಮ ಸಂಸ್ಕೃತಿಯ ನೈಜ ವಾತಾವರಣ ಮಕ್ಕಳಿಗೆ ಸಿಗುವಂತಾಗಬೇಕಿದ್ದರೆ ಶ್ರೀಮಠದ ಸಂಪರ್ಕಕ್ಕೆ ಬರಬೇಕು. ಗೋಮಾತೆಯ ಸೇವೆಯ ಮಹತ್ವವನ್ನು ಅವರಿಗೆ ತಿಳಿಸಬೇಕು. ಗೋವುಗಳ ಒಡನಾಟದಿಂದ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ. ಇಂದಿನ ಆಧುನಿಕ ಜೀವನದ ವೇಗದ ಬದುಕಿನಲ್ಲಿ ಗೋಸೇವೆಯ ಮೂಲಕ ನೆಮ್ಮದಿಯನ್ನು ಕಾಣಲು ಸಾಧ್ಯವಿದೆ ” ಎಂದು ನುಡಿಯುವ ಪುಷ್ಪಾ ಅವರ ಗೋ ಸೇವೆಗೆ ಅನೇಕ ಮಂದಿ ಆತ್ಮೀಯರು, ಬಂಧುಗಳು ಕೈಜೋಡಿಸಿದ್ದಾರೆ. ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಶ್ರೀಮಠದ ಮೇಲೆ, ಗೋಮಾತೆಯ ಮೇಲೆ ಶ್ರದ್ಧಾಭಾವವಿದೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *