ಕಣ್ಣಿಗೆ ಕಾಣುವ ಪ್ರತಿಯೊಂದು ಗೋವೂ ಕಾಮಧೇನು : ಯಶೋದಾ ಚಂದ್ರಶೇಖರ, ಶಿವಮೊಗ್ಗ

ಮಾತೃತ್ವಮ್

” ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ, ಗೋಸೇವೆ, ಗೋದಾನ ಮಾಡಿದರೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆದಂತೆ, ಜಾತಿ ಮತ ಅಂತರವಿಲ್ಲದೆ ಎಲ್ಲರೂ ಭಾರತೀಯ ಗೋತಳಿಗಳ ರಕ್ಷಣೆಗಾಗಿ ಕೈ ಜೋಡಿಸುವ  ದಿನಗಳು ಹೆಚ್ಚು ದೂರವಿಲ್ಲ ” ಎಂದು ಗೋಮಾತೆಯ ಬಗ್ಗೆ ತಮಗಿರುವ ಶ್ರದ್ಧಾಭಕ್ತಿಗಳನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದವರು  ಶ್ರೀರಾಮಚಂದ್ರಾಪುರ ಮಂಡಲದ ಶಿವಮೊಗ್ಗ ವಲಯದ ಯಶೋದಾ ಚಂದ್ರಶೇಖರ.

ಸಾಗರದ ಚುಟ್ಟಿಕೆರೆ ಕೃಷ್ಣಪ್ಪ, ಬಂಗಾರಮ್ಮ ದಂಪತಿಗಳ ಪುತ್ರಿಯಾದ ಯಶೋದಾ ಶ್ರೀಮಠದ ಸೇವೆಯಲ್ಲಿ ಸದಾ ಶ್ರದ್ದೆ ಹೊಂದಿದವರು.
” ಗಿರಿನಗರದ ರಾಮಾಶ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿಯುವ ಅವಕಾಶ ಒದಗಿಬಂತು. ಗೋವುಗಳೆಂದರೆ ನನಗೆ ತುಂಬಾ ಪ್ರೀತಿ. ಸ್ವಯಂ ಇಚ್ಛೆಯಿಂದಲೇ ಮಾಸದ ಮಾತೆಯಾದೆ. ಮಾಸದ ಮಾತೆಯಾದ ವಿಚಾರವನ್ನು ಪರಿಚಿತರಿಗೆ, ಸಂಬಂಧಿಕರಿಗೆ ತಿಳಿಸಿದಾಗ ಎಲ್ಲರೂ ಖುಷಿಯಿಂದ ಈ ಕಾರ್ಯಕ್ಕೆ ಕೈ ಜೋಡಿಸಿದರು. ಹಲವಾರು ಮಂದಿ ತಾವಾಗಿಯೇ ಗೋಸೇವೆಗೆ ತಮ್ಮ ಕೈಲಾದ ಸಹಕಾರ ನೀಡಿದರು, ಗೋ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಬೇಕಾದ್ದು ಮುಖ್ಯ. ಹನಿ ಹನಿ ಕೂಡಿ ಹಳ್ಳ ಎಂಬಂತೆ ಹತ್ತು ಹಲವು ಮಂದಿಯ ಸಹಕಾರದಿಂದ ಹೆಚ್ಚು ಓಡಾಡದೆ ಎರಡು ವರ್ಷಗಳ ಗುರಿ ತಲುಪಿದೆ .‌ ಗುರಿ ತಲುಪುವಂತಾಗಿದ್ದು ಶ್ರೀಗುರುಗಳ, ಗೋಮಾತೆಯ ಅನುಗ್ರಹದಿಂದ ಎಂಬ ನಂಬಿಕೆ ನನಗೆ ” ಎನ್ನುವ ಯಶೋದಾ ಅವರಿಗೆ ಇತರ ಸಮಾಜದವರು ಸಹಾ ಸಹಕಾರ ನೀಡಿದ್ದಾರೆ.

ತಂದೆಯ ಅನಾರೋಗ್ಯದ ಸಂದರ್ಭದಲ್ಲಿ ಶ್ರೀಗುರುಗಳ ದರ್ಶನ ಪಡೆದು ಗೋಸೇವೆ ಮಾಡಿದಾಗ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಶ್ರೀ ಗುರು ಸ್ಮರಣೆಯಲ್ಲಿ ನೆಮ್ಮದಿಯಿಂದ ಕಳೆದರು, ಇದು ಬದುಕಿನಲ್ಲಿ ಮರೆಯಲಾರದ ಅನುಭವ ಎನ್ನುವ ಯಶೋದಾ ಅವರ ತಾಯಿಯೂ ಗೋಸೇವೆಯಲ್ಲಿ ನೆಮ್ಮದಿ ಕಂಡವರು.

” ಕಣ್ಣಿಗೆ ಕಾಣುವ ಪ್ರತಿಯೊಂದು ಹಸುವೂ ಕಾಮಧೇನು  ಎಂಬ ಭಾವದಿಂದ ನೋಡುತ್ತಿದ್ದೇನೆ, ಜೀವನದ ಪ್ರತಿಯೊಂದು ಅನುಭವಗಳಲ್ಲೂ ಗೋಮಾತೆಯ ಅನುಗ್ರಹವಿದೆ,ಇಬ್ಬರು ಮಕ್ಕಳೂ ಆಯುರ್ವೇದ ವೈದ್ಯರು. ಗೋ ಪರಿವಾರದಲ್ಲಿ  ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದಾರೆ. ಶ್ರೀಮಠದ ಶಿಷ್ಯರಾಗಿ ಗೋಸೇವೆ,ಶ್ರೀಗುರುಸೇವೆ ಸಲ್ಲಿಸುವ ಅವಕಾಶ ದೊರಕಿರುವುದು ನಮ್ಮ ಪೂರ್ವ ಜನ್ಮದ ಸುಕೃತದಿಂದ ” ಎನ್ನುವ ಯಶೋದಾ ಚಂದ್ರಶೇಖರ ಅವರಿಗೆ ಇನ್ನಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆರೋಗ್ಯವಿರಬೇಕು ‘ ಎಂಬುದೇ ಶ್ರೀರಾಮ ದೇವರಲ್ಲಿ ಪ್ರಾರ್ಥನೆ.

Author Details


Srimukha

Leave a Reply

Your email address will not be published. Required fields are marked *