ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಪವಾಡವೇ ನಡೆದಿದೆ: ಮಹಾದೇವಿ ಎಸ್‌ . ಭಟ್

ಮಾತೃತ್ವಮ್

 

“ಶ್ರೀಗುರುಗಳ ಅನುಗ್ರಹವೊಂದಿದ್ದರೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ.‌ಗುರುವೊಲಿದರೆ ಕೊರಡು ಕೊನರುವುದು. ಇದಕ್ಕೆ ನನ್ನ ಬದುಕಿನಲ್ಲಿ ನಡೆದ ಸತ್ಯ ಘಟನೆಗಳೇ ಸಾಕ್ಷಿ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಕುಮಟಾ ಮಂಡಲದ, ಗುಡೇ ಅಂಗಡಿ ವಲಯದ ದೇವನಿ ಮನೆತನದ ಸೀತಾರಾಮ ಅನಂತ ಭಟ್ಟರ ಪತ್ನಿ ಮಹಾದೇವಿ ಎಸ್. ಭಟ್ .

ಸಾಲಕೋಡು ಗ್ರಾಮದ ಕೆರೆಕೋಣ ವೆಂಕಟೇಶ ಹೆಗಡೆ ಮತ್ತು ಸುಬ್ಬಿ ಅವರ ಪುತ್ರಿಯಾದ ಮಹಾದೇವಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಹಿಂದಿನ ಗುರುಗಳ ಕಾಲದಿಂದಲೂ ಇವರ ತವರುಮನೆಯವರು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

” ಶ್ರೀಮಠದ ಸೇವೆಯಲ್ಲಿ ದೊರಕುವ ಸಂತೃಪ್ತಿ ಬೇರೆಲ್ಲೂ ಸಿಗುವುದಿಲ್ಲ, ಶ್ರೀಮಠಕ್ಕೆ ಹೋಗುವಾಗ ತವರುಮನೆಗೆ ಹೋದಷ್ಟೇ ಸಂತೃಪ್ತಿ ದೊರಕುತ್ತದೆ. ಪ್ರತೀ ವರ್ಷವೂ ಚಾತುರ್ಮಾಸ್ಯಕ್ಕೆ ಶ್ರೀಮಠಕ್ಕೆ ಹೋಗಿ ಸೇವೆ ಮಾಡಿ ಬರುವವಳು ನಾನು. ಶ್ರೀಗುರುಗಳು ಕೋಲ್ಕತ್ತಾದಲ್ಲಿ ಚಾತುರ್ಮಾಸ್ಯ ಕೈಗೊಂಡಾಗಲೂ ಹೋಗಿ ಆಶೀರ್ವಾದ ಪಡೆಯುವ ಸುಯೋಗ ಲಭಿಸಿದ್ದು ನನ್ನ ಪೂರ್ವ ಜನ್ಮದ ಸುಕೃತ ” ಎನ್ನುವ ಮಹಾದೇವಿ ಅವರು ತಮ್ಮ ಬದುಕಿನಲ್ಲಿ ಶ್ರೀಗುರುಗಳ ಅನುಗ್ರಹದಿಂದ ನಡೆದ ಪವಾಡದ ಬಗ್ಗೆ ಮನದುಂಬಿ ಹೇಳುತ್ತಾರೆ.

ಇಪ್ಪತ್ತು ವರ್ಷಗಳ ಹಿಂದೆ ಮೂತ್ರಕೋಶದ ಸಮಸ್ಯೆಯಿಂದಾಗಿ ಆಪರೇಷನ್ ಆಗಬೇಕೆಂದು ವೈದ್ಯರು ಹೇಳಿದಾಗ ಮಂಗಳೂರಿನ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಲೆಂದು ಮಹಾದೇವಿಯವರು ತಮ್ಮ ಪತಿಯೊಡನೆ ಮಂಗಳೂರಿಗೆ ಬಂದಿದ್ದರು.. ಆ ಸಂದರ್ಭದಲ್ಲಿ ಶ್ರೀ ಸಂಸ್ಥಾನದವರು ಮಂಗಳೂರಿನಲ್ಲಿ ಮೊಕ್ಕಾಂ ಮಾಡಿರುವ ವಿಚಾರ ತಿಳಿದಾಗ ಅಪ್ರತಿಮ ಗುರುಭಕ್ತೆಯಾದ ಇವರು ಹೇಗಾದರು ಒಮ್ಮೆ ಶ್ರೀಗುರುಗಳ ಮಂತ್ರಾಕ್ಷತೆ ಪಡೆದೇ ಆಪರೇಷನ್ ಗೆ ಹೋಗೋಣ ಎಂದು ಭಾವಿಸಿ ಆಪರೇಷನ್ ಗೆ ನಿಗದಿ ಪಡಿಸಿದ ದಿನದ ಮುನ್ನಾದಿನ ಶ್ರೀಗುರುಗಳನ್ನು ಭೇಟಿಯಾಗಿ ಮಂತ್ರಾಕ್ಷತೆ ಸ್ವೀಕರಿಸಿದ್ದರು.

ಮರುದಿನ ಆಪರೇಷನ್ ಮಾಡಲೆಂದು ವೈದ್ಯರು ಮಹಾದೇವಿ ಅವರನ್ನು ಆಪರೇಷನ್ ಥಿಯೇಟರ್ ಗೆ ಕರೆದೊಯ್ದು ಅನಾಸ್ತೇಶಿಯಾ ಕೊಟ್ಟರು. ಆದರೆ ಆಪರೇಷನ್ ಮಾಡುವ ಡಾಕ್ಟರ್ ಬಂದು ಪರೀಕ್ಷಿಸಿದಾಗ ಮಹಾದೇವಿ ಅವರ ದೇಹದಲ್ಲಿ ಯಾವುದೇ ಸಮಸ್ಯೆಯೂ ಕಾಣಿಸದೆ ಆರೋಗ್ಯವಂತರಾಗಿದ್ದರು. ಎರಡೆರಡು ಬಾರಿ ತಪಾಸಣೆ ನಡೆಸಿದಾಗಲೂ ಒಂದೇ ರೀತಿಯ ಫಲಿತಾಂಶ ಬಂದಾಗ ಈ ಪವಾಡಕ್ಕೆ ವೈದ್ಯರೇ ಬೆರಗಾಗಿದ್ದರು. ಆರೋಗ್ಯ ಸರಿಯಾಗಿರುವ ಕಾರಣ ಇವರಿಗೆ ಆಪರೇಷನ್ ಬೇಕಾಗಲೇ ಇಲ್ಲ.

” ಇದು ಹೊರನೋಟಕ್ಕೆ ಅಚ್ಚರಿಯ ವಿಚಾರ ಆಗಿರಬಹುದು, ಆದರೆ ಶ್ರೀ ಗುರುಗಳನ್ನು, ರಾಮದೇವರನ್ನು ನಿರತ ನಂಬುವವರಿಗೆ ಇದು ವಿಶೇಷವಲ್ಲ. ಅವರ ಕೃಪೆಯಿಂದ ಯಾವುದೇ ಪವಾಡವೂ ನಡೆಯಬಹುದು. ನನ್ನನ್ನು ಆಪರೇಷನ್ ಇಲ್ಲದೆ ಆರೋಗ್ಯವಂತಳಾಗಿಸಿದ್ದು ಶ್ರೀರಾಮ ದೇವರೇ ಎಂಬುದರಲ್ಲಿ ಸಂದೇಹವಿಲ್ಲ ” ಎನ್ನುವ ಮಹಾದೇವಿ ಅವರ ಮಾತುಗಳಲ್ಲಿ ಧನ್ಯತೆಯ ಭಾವ .

ಪ್ರತೀಬಾರಿ ಮಠಕ್ಕೆ ಹೋದಾಗಲೂ ತುಳಸೀಹಾರಗಳನ್ನು ಶ್ರದ್ಧೆಯಿಂದ ಕಟ್ಟುವ ಮಹಾದೇವಿ ಅವರಿಗೆ ಶ್ರೀಗುರುಗಳ ಸಮಾಜೋನ್ಮುಖ ಕಾರ್ಯಗಳ ಬಗ್ಗೆ ತುಂಬಾ ಶ್ರದ್ದೆಯಿದೆ. ಮೂಲ ಮಠ ನಿರ್ಮಾಣ ಕಾರ್ಯದಲ್ಲಿ, ಗೋಸ್ವರ್ಗದ ನಿರ್ಮಾಣದ ಸಂದರ್ಭದಲ್ಲಿ ಮಾತ್ರವಲ್ಲ ಇತ್ತೀಚೆಗೆ ವಿ ವಿ ವಿ ಗೂ ತಮ್ಮ ಶಕ್ತಿಮೀರಿ ಸಮರ್ಪಣೆ ಮಾಡಿದ ಕುಟುಂಬ ಇವರದ್ದು. ಇಬ್ಬರು ಪುತ್ರರೂ ತಾಯ್ತಂದೆಯರ ಈ ಸೇವಾ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಮೊಮ್ಮಗಳಿಗೂ ಕನ್ಯಾ ಸಂಸ್ಕಾರ ಕೊಡಿಸುವ ಮೂಲಕ ಮುಂದಿನ ಪೀಳಿಗೆಗೂ ಶ್ರೀಮಠದ ಮೇಲೆ ಶ್ರದ್ದೆ ,ಭಕ್ತಿ ಬೆಳೆಯುವಂತೆ ಮಾಡಿದ್ದಾರೆ.

ಗೋವುಗಳ ಮೇಲಿನ ವಿಶೇಷ ಪ್ರೀತಿಯಿಂದ ಸಾವಿರದ ಸುರಭಿ ಯೋಜನೆಯಲ್ಲಿ ಭಾಗವಹಿಸಿದ ಮಹಾದೇವಿ ಅವರಿಗೆ ಶ್ರೀಗುರುಗಳ ಸಾನ್ನಿಧ್ಯದಲ್ಲಿಬಾಗಿನ ಸ್ವೀಕರಿಸುವ ಸುಯೋಗವೂ ಒದಗಿಬಂತು.

” ಸಾವಿರದ ಸುರಭಿ ಯೋಜನೆಯಲ್ಲಿ ಭಾಗಹಿಸುವಾಗ ತುಸು ಆತಂಕ ಮೂಡಿತ್ತು. ಗುರಿ ತಲುಪಲು ಸಾಧ್ಯವೇ ಎಂಬ ಭಯದೊಂದಿಗೇ ಸೇರಿದರೂ ಶ್ರೀಗುರುಗಳ ಕರುಣೆಯಿಂದ ಅದು ಸಾಧ್ಯವಾಯಿತು. ಕಾಲ್ನಡಿಗೆಯಲ್ಲಿಯೇ ಹಲವಾರು ಮನೆಗಳಿಗೆ ಹೋಗಿ ದೇಶೀ ಗೋವುಗಳ ಮಹತ್ವವನ್ನು ಮನೆ ಮನೆಗೆ ತಿಳಿಸಿ ಹಣ ಸಂಗ್ರಹ ಮಾಡಿದೆ. ಲಕ್ಷಭಾಗಿನಿಯಾದಾಗ ಜನ್ಮ ಪಾವನವಾದಂತಾಯಿತು. ಅದರ ಸ್ಪೂರ್ತಿಯಿಂದ ಮಾಸದ ಮಾತೆಯಾಗಿ ಸೇರಿದೆ.‌ಈಶ್ವರಿ ಅಕ್ಕ ಪ್ರೋತ್ಸಾಹ ಕೊಟ್ಟರು. ಮಾಸದ ಮಾತೆಯಾಗಿ ಸೇರಿದ ತಕ್ಷಣವೇ ನನಗೆ ₹ ೩೦೦೦ ದೊರಕಿದ್ದು ಗುರುಕೃಪೆಯಿಂದ. ಇದು ನನ್ನ ಬಾಳಿನ ಅವಿಸ್ಮರಣೀಯ ಘಟನೆ ” ಎನ್ನುವ ಇವರು ಮಾಸದ ಮಾತೆಯಾಗಿ ಒಂದು ವರ್ಷದ ಗುರಿ ತಲುಪಿದವರು. ಈಗಲೂ ಈ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

” ಗೋವಿನ ಸೇವೆ ನಿತ್ಯ ಮಾಡಬೇಕೆಂಬ ಅಭಿಲಾಷೆಯಿದೆ. ಈ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲೂ ಕೆಲವು ಗೋ ಪ್ರೇಮಿಗಳು ಮನೆಗೆ ಬಂದು ಹಣ ನೀಡಿದ್ದಾರೆ. ಇದನ್ನು ಶ್ರೀಗುರುಗಳ ಕಾರುಣ್ಯ ಎಂದೇ ನಂಬಿರುವೆ” ಎನ್ನುವ ಮಹಾದೇವಿ ಅವರಿಗೆ ಶ್ರೀಸಂಸ್ಥಾನದವರೇ ಪ್ರತ್ಯಕ್ಷ ದೈವ ಎಂಬ ದೃಢವಾದ ನಂಬಿಕೆಯಿದೆ. ತಮ್ಮ ಮನೆಯಲ್ಲೇ ಪಾದುಕಾ ಪೂಜೆ, ಶ್ರೀಗುರು ಭಿಕ್ಷಾ ಸೇವೆಗಳನ್ನು ನೆರವೇರಿಸಿದ ಬಗ್ಗೆ ಸಾರ್ಥಕ ಭಾವವಿದೆ.

ಈ ಇಳಿವಯಸ್ಸಿನಲ್ಲೂ ಶ್ರೀಮಠದ ಸೇವೆ ಮಾಡುತ್ತಾ ಯಾವುದೇ ಮಾತ್ರೆ ಮದ್ದುಗಳ ಹಂಗಿಲ್ಲದೆ ಆರೋಗ್ಯಪೂರ್ಣ ಜೀವನ ಸಾಗಿಸುತ್ತಿರುವುದು ಶ್ರೀ ಗುರುಕೃಪೆಯಿಂದ ಎಂದು ನುಡಿಯುವ ಮಹಾದೇವಿ ಅವರಿಗೆ ಬದುಕಿನ ಕೊನೆಯ ತನಕವೂ ಇದೇ ರೀತಿಯಲ್ಲಿ ಆರೋಗ್ಯವಾಗಿದ್ದುಕೊಂಡು ಶ್ರೀಮಠದ ಸೇವೆ, ಗೋಸೇವೆಗಳಲ್ಲಿ ತೊಡಗಿಸಿಕೊಳ್ಳ ಬೇಕೆಂಬುದೇ ಶ್ರೀರಾಮ ದೇವರಲ್ಲಿ ನಿತ್ಯ ಕೋರಿಕೆ.

Leave a Reply

Your email address will not be published. Required fields are marked *