ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೦

ಅರಿವು-ಹರಿವು
ಗುರುಪರಂಪರೆಯ ಉಳಿವಿಗೇ ಬುನಾದಿಯಾದ ಆಚಾರ್ಯ ಶಂಕರರು ಅರಿವಿನ ಬೆಳಕನ್ನು ಜಗಪೂರ್ತಿ ನೀಡಲಿಕ್ಕೋಸ್ಕರ ಶ್ರೇಷ್ಠ ಶಿಷ್ಯರನ್ನೂ ಸಹ ತಮ್ಮಂತೆಯೇ ‘ಗುರು’ ಎಂಬ ಪಟ್ಟಕ್ಕೆ ಏರುವಂತಹ ಯೋಗ್ಯತೆಯನ್ನು  ಕೊಡಿಸಿದರು ಎಂದು ವಿಶ್ಲೇಷಿಸುತ್ತಾ ಮೂರು ಜನ ಶಿಷ್ಯರ ಕುರಿತು ನೋಡಿದೆವು. ಗುರುಸೇವೆಯು ಸಾಧಾರಣನನ್ನೂ ಗುರುತ್ವಕ್ಕೇರಿಸಬಲ್ಲದು ಎಂಬುದಕ್ಕೆ  ಅನುಪಮ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಸಾಮಾನ್ಯ ಬುದ್ಧಿಯುಳ್ಳ ಅಪ್ರತಿಮ ಸೇವಾಭಾವಿ ಸಚ್ಛಿಷ್ಯನಿಗೆ ಶಂಕರರಿಂದ ಆದ ಅರಿವಿನ ಹರಿವನ್ನು ನೋಡೋಣ.
ಆಚಾರ್ಯರು ಶೃಂಗೇರಿಯಲ್ಲಿದ್ದಷ್ಟು ಕಾಲವೂ ತಮ್ಮ ಭಾಷ್ಯಗ್ರಂಥಗಳನ್ನು ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಆಗ ಒಬ್ಬ ಶಿಷ್ಯನು ಆಚಾರ್ಯರನ್ನು ಎಡೆಬಿಡದೇ ಸೇವೆಗೈಯುತ್ತಿದ್ದನು. ಅವನ ಹೆಸರು ಗಿರಿ. ಆತ ಓದಿನಲ್ಲಿ ಸ್ವಲ್ಪ ಹಿಂದೆ. ಹೀಗಾಗಿ ಸದಾ ಅವನನ್ನು ಕಂಡರೆ ಇತರ ಶಿಷ್ಯರಿಗೆ ಕೊಂಚ ಅಲಕ್ಷ್ಯ.  ಆದರೆ ಆ ಶಿಷ್ಯ ಶಂಕರರ ಎಲ್ಲಾ ಸೇವೆಯನ್ನು ಅತ್ಯಂತ ನಿಷ್ಠೆಯಿಂದ, ಭಕ್ತಿಯಿಂದ ಮಾಡುತ್ತಿದ್ದ. ಅವರ ಬಟ್ಟೆಗಳನ್ನು ಒಗೆಯುವುದು,  ಪೂಜೆಗೆ ಅಣಿಗೊಳಿಸುವುದು, ಆಹಾರ ಸಿದ್ಧಗೊಳಿಸುವುದು ಹೀಗೆ ಹತ್ತು ಹಲವು ಸೇವೆಗಳನ್ನು ಆತ ಮಾಡುತ್ತಿದ್ದ. ಒಮ್ಮೆ ಶಂಕರರು ತಮ್ಮ ಶಿಷ್ಯರಿಗೆ ಬ್ರಹ್ಮಸೂತ್ರದ ತರಗತಿಗಳನ್ನು ನಡೆಸುತ್ತಿದ್ದರು. ಎಲ್ಲ ಶಿಷ್ಯರು ಬಂದರೂ ಗಿರಿಯ ಸುಳಿವಿರಲಿಲ್ಲ. ಗುರುಗಳ ಬಟ್ಟೆ ಒಗೆಯುವುದರಲ್ಲಿ ನಿರತನಾಗಿದ್ದರಿಂದ ಸಕಾಲಕ್ಕೆ ಆಗಮಿಸಲಿಲ್ಲ. ಆಗ ಶಿಷ್ಯರು ಹೇಗಿದ್ದರೂ ಆತನಿಗೆ ಬ್ರಹ್ಮಸೂತ್ರ ಅರ್ಥವಾಗದೇ ಇರುವುದರಿಂದ ನಮಗೆ ಪಾಠವನ್ನು ಮುಂದುವರೆಸಬೇಕೆಂದು ಕೇಳಿಕೊಂಡರು. ಅವರ ಮಾತಿನಲ್ಲಿ ದುರಹಂಕಾರವೂ, ತಿರಸ್ಕಾರವೂ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಶಂಕರರು ತಮ್ಮ ಶಿಷ್ಯರಿಗೆ ಸರಿಯಾದ ಅರಿವಿನ ನೆಲೆಯಲ್ಲಿ ನಿಲ್ಲಿಸಬೇಕೆಂದುಕೊಂಡು ಮತ್ತು ಸದ್ವಿನಯವಂತ ಶಿಷ್ಯ ಗಿರಿಯನ್ನು ವಿದ್ಯೆಯಿಂದ ಪ್ರಕಾಶಿಸಬೇಕೆಂದು ಮನಗಂಡು ಹದಿನಾಲ್ಕು ವಿದ್ಯೆಗಳನ್ನು ಮನಸ್ಸಿನಿಂದಲೇ ಉಪದೇಶಿಸಿ ಅನುಗ್ರಹಿಸಿದರು (ವ್ಯಾದಿದೇಶ ಸ ಚತುರ್ದಶವಿದ್ಯಾಃ ಸದ್ಯ ಏವ ಮನಸಾ ಗಿರಿನಾಮ್ನೇ). ಆತ (ಗಿರಿ) ಅಲ್ಲಿಗೆ ಬಂದ ಕೂಡಲೇ  ವೇದಾಂತ ಸಿದ್ಧಾಂತ ಪ್ರಧಾನವಾದ ಕೆಲವು ತೋಟಕವೃತ್ತ ಶ್ಲೋಕಗಳಿಂದ ಶಂಕರಾಚಾರ್ಯರನ್ನು ಸ್ತುತಿಸಿದನು. ಆ ಪ್ರಕರಣವು ತೋಟಕವೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಈ ಶಿಷ್ಯನು ಅಂದಿನಿಂದ ತೋಟಕಾಚಾರ್ಯನೆಂಬ ಹೆಸರಿನಿಂದಲೇ ಪ್ರಖ್ಯಾತನಾಗಿ ಪದ್ಮಪಾದರಿಗೆ ಸಮಾನವಾದ ಪ್ರತಿಭೆಯುಳ್ಳವನಾಗಿ ಶಂಕರಾಚಾರ್ಯರ ಮುಖ್ಯಶಿಷ್ಯ ಸ್ಥಾನವನ್ನು ಪಡೆದುಕೊಂಡನು. ಅಷ್ಟೇನೂ ಮೇಧಾವಿಯಲ್ಲದ ಶಿಷ್ಯನೊಬ್ಬ ಕೇವಲ ಗುರು ಸೇವೆಯಲ್ಲಿ ಅನವರತ ಮಳುಗಿ ಗುರು ಕಾರುಣ್ಯದಿಂದಲೇ ಪರಮಜ್ಞಾನವನ್ನು ಹೊಂದಿದ ವಿಶೇಷ ಘಳಿಗೆಯಿದು… ಶಂಕರಾಚಾರ್ಯರು ಈ ಶಿಷ್ಯನನ್ನು ಉತ್ತರದ ಬದರಿಯಲ್ಲಿ ಜ್ಯೋತಿರ್ಮಠ ಸ್ಥಾಪಿಸಿ ಗುರುಪಟ್ಟ ಕಟ್ಟಿದರು. ಈ ತೋಟಕಾಚಾರ್ಯರು ಜಗತ್ತಿಗೆ ಅರಿವಿನ ಪ್ರಸಾರದಲ್ಲಿ ಬಹು ಗಣನೀಯ ಪಾತ್ರ ವಹಿಸಿದರು ಎಂಬಲ್ಲಿಗೆ ಆಚಾರ್ಯರ ಈ ನಾಲ್ಕೂ ಶಿಷ್ಯಶ್ರೇಷ್ಠರಿಗೆ ವಂದಿಸುತ್ತಾ, ಇವರ ಉಲ್ಲೇಖಗಳಿಗೆ ಪೂರ್ಣವಿರಾಮವನ್ನಿಡುತ್ತಾ, ಮುಂದಿನ ಸಂಚಿಕೆಯಲ್ಲಿ ಅರಿವಿಗೆ ಸಾಧನಾಮಾರ್ಗವಾಗಿ  ಶಂಕರರಿಂದ ನಡೆದ ಮಹಾಮೇರು ಕಾರ್ಯಗಳ ಬಗ್ಗೆ ಒಂದಿನಿತು ಅವಲೋಕಿಸೋಣ ಎನ್ನುತ್ತಾ ಈ ಸಂಚಿಕೆಯನ್ನು ಸಮಾಪ್ತಿಗೊಳಿಸುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *