” ಈ ಪ್ರಾಣ ಗೋಸೇವೆಗೆ ಶ್ರೀಮಠದ ಸೇವೆಗೆ ಮುಡಿಪು ” : ಲಲಿತಾ ಗಜಾನನ ಹೆಗಡೆ , ಕರ್ಕಿಮನೆ

ಮಾತೃತ್ವಮ್

 

” ಗೋವಿನ ಹಾಲನ್ನು ಜಾತಿಮತ ಭೇದವಿಲ್ಲದೆ ಎಲ್ಲರೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ದೇಶೀಯ ಗೋತಳಿಗಳ ಸಂರಕ್ಷಣೆಗೂ ಎಲ್ಲರೂ ಕಟಿಬದ್ಧರಾಗಬೇಕು. ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆಯ ಸೇವೆಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ಜನರು ಕೈಜೋಡಿಸುವಂತಾಗಬೇಕು ಎಂಬುದೇ ನನ್ನ‌ ಅಭಿಲಾಷೆ. ಇದಕ್ಕಾಗಿ ಸಮಾಜದ ಪ್ರತಿಯೊಂದು ವಿಭಾಗದ ಜನರನ್ನೂ ಸಂಪರ್ಕಿಸಿ ಗೋಮಾತೆಯ ಮಹತ್ವದ ಅರಿವು ಮೂಡಿಸುತ್ತಿದ್ದೇನೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಗೆ ಈ ಪ್ರಾಣವೇ ಮುಡಿಪು ” ಎಂದವರು ಹೊನ್ನಾವರ ಮಂಡಲ ಕರ್ಕಿ ವಲಯದ ಜಿ.ಎಂ.ಹೆಗಡೆಯವರ ಪತ್ನಿ ಲಲಿತಾ ಜಿ. ಹೆಗಡೆ.

ಸಮಾಜ ಸೇವೆಯಲ್ಲಿ ಆಸಕ್ತರಾಗಿರುವ ಲಲಿತಾ ಹೆಗಡೆಯವರು ಈ ಹಿಂದೆ ಪತ್ರಿಕಾ ವರದಿಗಾರರಾಗಿದ್ದವರು. ಮಾತ್ರವಲ್ಲ ರಾಜಕೀಯ ಕ್ಷೇತ್ರದ ಮೂಲಕವೂ ಸಮಾಜ ಸೇವೆ ಮಾಡಿ ಜನಮನವನ್ನು ಗೆದ್ದವರು.

ಕರ್ಕಿಯ ಸೂರಿಮನೆತನದ ದತ್ತಾತ್ರೇಯ ಸುಬ್ರಾಯ ಶಾಸ್ತ್ರಿ , ಸಾವಿತ್ರಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.

ಸುಮಾರು ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಇವರು ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ, ವಿಶ್ವಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದವರು. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಬಾಗಿನವನ್ನು ಸ್ವೀಕರಿಸಿದವರು.

” ವಲಯ ಮಾತೃ ಪ್ರಧಾನೆಯಾಗಿ ಎಂಟು ವರ್ಷ ಸೇವೆ ಮಾಡಿದ್ದೇನೆ. ವಲಯ ಉಪಾಧ್ಯಕ್ಷೆಯಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನನಗೆ ಸಮಾಜದ ಎಲ್ಲರನ್ನೂ ಶ್ರೀಮಠದ ಸಂಪರ್ಕಕ್ಕೆ ತರಬೇಕೆಂಬ ಇಚ್ಛೆಯಿದೆ.‌ ದೇಶೀಯ ಹಸುಗಳ ಮಹತ್ವವನ್ನು ಎಲ್ಲರೂ ತಿಳಿಯಬೇಕು, ಈ ಮೂಲಕ ಗೋಮಾತೆಯ ಸೇವೆಗೆ ಎಲ್ಲರೂ ಒಂದಾಗಬೇಕು ” ಎನ್ನುವ ಲಲಿತಾ ಹೆಗಡೆ ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೆಲ್ಲ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಲೇ ಇರುತ್ತಾರೆ.

” ಶ್ರೀಗುರುಗಳ ಮಹಿಮೆ ಜೀವನದಲ್ಲಿ ಅನೇಕ ಬಾರಿ ಅನುಭವಕ್ಕೆ ಬಂದಿದೆ. ಹಳೆ ಮನೆಯಲ್ಲಿದ್ದ ನಾವು ಶ್ರೀಗುರುಗಳ ಅನುಗ್ರಹದ ಮಹಿಮೆಯಿಂದ ಹೊಸಮನೆಯನ್ನು ಹೊಂದುವಂತಾಯಿತು. ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಮನೆಯಲ್ಲಿ ಒಂದು ದೇಶೀಯ ತಳಿಯ ಹಸುವನ್ನು ಸಾಕುತ್ತಿದ್ದೇವೆ. ಮಕ್ಕಳಿಗೆ ಮೊಮ್ಮಕ್ಕಳಿಗೆಲ್ಲ ಶ್ರೀಮಠದ ಸೇವೆಯಲ್ಲಿ ಆಸಕ್ತಿಯಿದೆ. ನನ್ನ ಸೊಸೆಯೂ‌ ಮಾಸದಮಾತೆಯಾಗಿದ್ದಾಳೆ. ನನ್ನ ಶ್ರೀಮಠದ ಸೇವೆಗೆ ಮನೆಯವರೆಲ್ಲರ ಸಂಪೂರ್ಣ ಸಹಕಾರವಿದೆ ” ಎಂದು ನುಡಿಯುವ ಇವರಿಗೆ ಜೀವನದ ಕೊನೆ ತನಕವೂ ಶ್ರೀಗುರುಸೇವೆಯಲ್ಲಿ ನಿರತವಾಗಿರುವ ಅಭಿಲಾಷೆ.

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *