” ಮಾನವ ಜೀವನದಲ್ಲಿ ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಪ್ರತಿಯೊಬ್ಬರೂ ಜೀವನ ಪಥದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಯಾರು ಸಮರ್ಪಣಾ ಭಾವದಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅಂತಹ ಮಂದಿಗೆ ಶ್ರೀ ಗುರುಕಾರುಣ್ಯದಿಂದ ಪಾಪರಾಶಿಯೆಲ್ಲ ಕಳೆದುಹೋಗಿ ಬದುಕಿನ ಹಾದಿ ಸುಗಮವಾಗುತ್ತದೆ ” ಇದು ಸಿದ್ದಾಪುರ ಮಂಡಲ ,ಅಂಬಾಗಿರಿ ವಲಯದ ಪ್ರಸ್ತುತ ಬಾಗಲಕೋಟೆ ನಿವಾಸಿಗಳಾಗಿರುವ ನಾರಾಯಣ ಕಾಶಿ ಹೆಗಡೆಯವರ ಪತ್ನಿ ಸರಸ್ವತಿ ಎನ್. ಹೆಗಡೆ ಅವರ ಮಾತುಗಳು.
ಚಂದಾವರ ಸೀಮೆಯ ಕುಮಟಾದ ನವಿಲುಗೋಣದ ಚನ್ನಯ್ಯ ಭಟ್, ವಿಶಾಲಾಕ್ಷಿ ದಂಪತಿಗಳ ಪುತ್ರಿಯಾದ ಸರಸ್ವತಿ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.
” ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಮ್ಮ ಅಪ್ಪನೇ ಪ್ರೇರಣೆ. ಹಿರಿಯ ಗುರುಗಳ ಕಾಲದಿಂದಲೂ ನನ್ನ ತವರುಮನೆಗೆ ಶ್ರೀಮಠದ ಸಂಪರ್ಕವಿತ್ತು. ಹಾಗಾಗಿ ಶ್ರೀಗುರುಗಳ ಆಶೀರ್ವಚನವೇ ನನ್ನ ಎಲ್ಲಾ ಕಾರ್ಯಗಳಿಗೂ ಸ್ಪೂರ್ತಿ. ಶ್ರೀಗುರುಗಳ ಸಮಾಜೋನ್ಮುಖ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುತ್ತಾ , ಸಮಾಜದ ಬಂಧುಗಳಿಗೆ ಶ್ರೀಮಠದ ಯೋಜನೆಗಳ ಬಗ್ಗೆ ವಿವರಿಸಿ ,ಅವರನ್ನು ಮಠಕ್ಕೆ ಕರೆದುಕೊಂಡು ಬಂದು ಅವರ ಮೂಲಕವೇ ಶ್ರೀಮಠದ ಸೇವೆ, ಗೋಸೇವೆ ಮಾಡಿಸಿದಾಗ ದೊರಕುವ ಸಂತೃಪ್ತಿ ಅವರ್ಣನೀಯ ” ಎನ್ನುವ ಇವರು ಅಂಬಾಗಿರಿ ವಲಯದ ಶಿಷ್ಯಮಾಧ್ಯಮ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಶ್ರೀರಾಮಾನುಗ್ರಹದಿಂದ ಬದುಕಿನ ಕನಸುಗಳೆಲ್ಲ ನನಸಾಗಿವೆ ಎಂದು ನಂಬಿರುವ ಇವರಿಗೆ ಹಸುಗಳೆಂದರೆ ತುಂಬಾ ಪ್ರೀತಿ. ಮಾತೃತ್ವಮ್ ಯೋಜನೆಯ ಗುರಿ ತಲುಪಲು ಇವರ ಆತ್ಮೀಯರ ಬಳಗ, ಸ್ನೇಹಿತರ ಕೂಟ ಕೈ ಜೋಡಿಸಿದೆ . ವಿಶೇಷ ದಿನಗಳಲ್ಲಿ ತಾವೂ ಗೋಮಾತೆಯ ಸೇವೆಗೆ ಕಾಣಿಕೆ ಹಾಕುವ ಸರಸ್ವತಿ ಎನ್ ಹೆಗಡೆಯವರಿಗೆ ಶ್ರೀಮಠದ ಸೇವೆಯ ಮೂಲಕ ಅನೇಕ ಮಂದಿ ಶಿಷ್ಯಬಂಧುಗಳ ಸಹಕಾರ ದೊರಕಿದೆ .
” ಶುದ್ಧ ಮನಸ್ಕರಾಗಿ ಶ್ರೀಗುರು ಸೇವೆ ಮಾಡಿದರೆ ಮನದ ಚಿಂತೆಗಳು ಪರಿಹಾರವಾಗುತ್ತವೆ. ಶ್ರೀಗುರುಗಳ ಆಶೀರ್ವಚನ ಶ್ರವಣದಿಂದ ಮನದ ಚಿಂತೆಯ ಕಾರ್ಮೋಡ ಸರಿದು ಅಲ್ಲಿ ನೆಮ್ಮದಿಯ ಸೆಲೆ ಮೂಡುತ್ತದೆ ಎಂಬುದು ನಮ್ಮ ಬದುಕಿನ ಅನುಭವ ” ಎನ್ನುವ ಇವರ ಶ್ರೀಮಠದ ಸೇವೆಗೆ ಮನೆಯವರ ಮತ್ತು ಮಗನ ಸಂಪೂರ್ಣ ಸಹಕಾರವಿದೆ.
ಪ್ರಸನ್ನಾ ವಿ ಚೆಕ್ಕೆಮನೆ